ಇನ್ನೂ ಸಂಪುಟದ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, BJPಗೆ ಕನಿಷ್ಠ ಅಂತಃಕರಣವಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ

| Updated By: ಆಯೇಷಾ ಬಾನು

Updated on: Sep 10, 2022 | 5:56 PM

ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರ ನಡೆಸಿದ ಜನಸ್ಪಂದನ ಸಮಾವೇಶ ಸಂಬಂಧ ಕೆಪಿಸಿಸಿ ಟ್ವೀಟ್ ಮೂಲಕ ಟೀಕೆ ಮಾಡಿದೆ.

ಇನ್ನೂ ಸಂಪುಟದ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, BJPಗೆ ಕನಿಷ್ಠ ಅಂತಃಕರಣವಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ
ಕಾಂಗ್ರೆಸ್ ಪಕ್ಷ
Follow us on

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರ ನಡೆಸಿದ ಜನಸ್ಪಂದನ ಸಮಾವೇಶ ಅದ್ಧೂರಿಯಾಗಿ ಕೊನೆಗೊಂಡಿದೆ. ಬಿಜೆಪಿ ಜನಸ್ಪಂದನ ಸಮಾವೇಶದ ವೇಳೆ ಸಚಿವರು, ಶಾಸಕರು ವೇದಿಕೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ರು. ವಿಜಯಪ್ರಕಾಶ್ ಹಾಡುತ್ತಲೇ, ಇತ್ತ ಎಂಟಿಬಿ ನಾಗರಾಜ್, ಎಸ್.ಆರ್.ವಿಶ್ವನಾಥ್ ಡ್ಯಾನ್ಸ್ ಮಾಡಿ ನೆರೆದಿದ್ದ ಜನರನ್ನ ರಂಜಿಸಿದ್ರು. ಈ ಬಗ್ಗೆ ಕೆಪಿಸಿಸಿ ಟ್ವೀಟ್ ಮೂಲಕ ಟೀಕೆ ಮಾಡಿದೆ.

ಇನ್ನೂ ಸಂಪುಟದ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ. ಜೀವಬಿಟ್ಟ ತಮ್ಮದೇ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ?, BJPಗೆ ಕನಿಷ್ಠ ಅಂತಃಕರಣವಿಲ್ಲ. ಬಿಜೆಪಿ ಭ್ರಷ್ಟೋತ್ಸವದ ಮುಂದೆ ಮಾನವೀಯತೆ ಕಳೆದು ಹೋಗಿದೆ ಎಂದು ಟ್ವಿಟರ್​​ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ! ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ಬಿಜೆಪಿ ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ನಾವು ಜನರಿಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತಿದ್ದೇವೆ

ಇನ್ನು ಮತ್ತೊಂದು ಕಡೆ ಜನಸ್ಪಂದನ ಸಮಾವೇಶದ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ದೊಡ್ಡಬಳ್ಳಾಪುರದಲ್ಲಿ ಟಿವಿ9ಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಜನರಿಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿಯೇ ಸಮಾವೇಶ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ ಛಿದ್ರವಾಗುವುದು ನಿಶ್ಚಿತ. ಕಾಂಗ್ರೆಸ್​ ಪಕ್ಷ ಈಗ ಮುಳುಗುತ್ತಿರುವ ಹಡಗಾಗಿದೆ. ಅದಕ್ಕಾಗಿಯೇ ಭಾರತ್​ ಜೋಡೋ ಯಾತ್ರೆ ಮಾಡುತ್ತಿದೆ ಎಂದರು.

ನಾವು ಬಿಜೆಪಿ ತಡೆಯುತ್ತಿಲ್ಲ, ಜನರೇ ಅವರನ್ನ ತಡೀತಿದ್ದಾರೆ

‘ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ತಾಕತ್ತಿದ್ರೆ ತಡೆಯಿರಿ’ ಎಂದು ಸಿಎಂ ಬೊಮ್ಮಾಯಿ ಸವಾಲಿಗೆ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. ನಾವು ಬಿಜೆಪಿ ತಡೆಯುತ್ತಿಲ್ಲ, ಜನರೇ ಅವರನ್ನ ತಡೀತಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ ಎಂದು ಜನರೇ ತಡೆಯುತ್ತಿದ್ದಾರೆ. ಭ್ರಷ್ಟ ಸರ್ಕಾರ ಕೊಟ್ಟ ಭಾಗ್ಯ ಜನರಿಗೆ ಗೊತ್ತಿದೆ. ಮೂರು ವರ್ಷ ಬಿಜೆಪಿಯವರು ಜನರ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದರು.

ಇದೇ ವೇಳೆ ಸಮಾವೇಶ ವೇದಿಕೆಯಲ್ಲಿ ಬಿಜೆಪಿ ನಾಯಕರ ಡ್ಯಾನ್ಸ್ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕರ ಡ್ಯಾನ್ಸ್​ಗೆ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಸರ್ಕಾರ ಹೋಗ್ತಿದೆ ಅಂತಾ ಖುಷಿಪಟ್ಟು ಡ್ಯಾನ್ಸ್ ಮಾಡಬೇಕಲ್ವೇ? ಬಿಜೆಪಿ ನಾಯಕರು ಡ್ಯಾನ್ಸ್ ಆದ್ರೂ ಮಾಡಲಿ ಏನಾದ್ರೂ ಮಾಡಲಿ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

Published On - 5:56 pm, Sat, 10 September 22