Political Analysis: ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ದೆಹಲಿ ನಾಯಕರ ತಂತ್ರಗಾರಿಕೆ ನೆರವಾಗುತ್ತಾ? ಪಂಚರಾಜ್ಯಗಳ ಪ್ಲ್ಯಾನ್ ಇಲ್ಲಿ ವರ್ಕ್ ಔಟ್ ಆಗುತ್ತಾ?

ಪಂಜಾಬ್​ ನಲ್ಲಿ ಕಾಂಗ್ರೆಸ್ ನಾಯಕರ ಸ್ಥಳೀಯ ಕಚ್ಚಾಟ ವಿವಾದ ಎಲ್ಲ ರಾಜ್ಯಗಳ ಚುನಾವಣೆ ಮೇಲೆಯೂ ದುಷ್ಪರಿಣಾಮ ಬೀರಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತೆ ಮಾಡಿದ್ದು ಬಿಜೆಪಿಯ ದೆಹಲಿ ಮ್ಯಾಜಿಕ್​ ನ ತಂತ್ರಗಾರಿಕೆಯ ಭಾಗವೇ ಆಗಿತ್ತು.

Political Analysis: ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ದೆಹಲಿ ನಾಯಕರ ತಂತ್ರಗಾರಿಕೆ ನೆರವಾಗುತ್ತಾ? ಪಂಚರಾಜ್ಯಗಳ ಪ್ಲ್ಯಾನ್ ಇಲ್ಲಿ ವರ್ಕ್ ಔಟ್ ಆಗುತ್ತಾ?
ಸಂಗ್ರಹ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Sep 10, 2022 | 9:46 PM

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ(State Government) ಗಂಭೀರವಾದ ಚರ್ಚೆಯೊಂದು ಶುರುವಾಗಿದೆ. ಬಿಜೆಪಿ(Karnataka BJP) ಹಾಗೂ ಕಾಂಗ್ರೆಸ್(Congress) ಎರಡೂ ಪಕ್ಷಗಳಿಗೆ ಮುಂದಿನ ಚುನಾವಣೆ ದೃಷ್ಟಿಯಿಂದ ಸಣ್ಣದೊಂದು ಪ್ರಾರ್ಥನೆ ಹಾಗೂ ಆತಂಕ ಎರಡನ್ನೂ ಹುಟ್ಟಿಸಿರುವುದು ದೆಹಲಿ. ಒಂದು ಕಡೆ ದೆಹಲಿಯ ನಾಯಕರು ಬಂದು ಏನೋ ಮ್ಯಾಜಿಕ್​ ಮಾಡಿ ಬಿಜೆಪಿಯನ್ನು ಬಚಾವ್ ಮಾಡಿಬಿಡುತ್ತಾರೆ ಎನ್ನುವ ಆಸೆ ಬಿಜೆಪಿಯ ರಾಜ್ಯ ನಾಯಕರದ್ದಾರೆ. ಮತ್ತೊಂದು ಕಡೆ ಅದೇ ದೆಹಲಿಯ ನಾಯಕರು ಬಂದು ಏನಾದರೂ ಮಾಡಿದರೆ ಗೆಲುವಿನ ಹಾದಿ ಕಾಂಗ್ರೆಸ್ ಗೆ ಕಷ್ಟವಾಗಿಬಿಡುತ್ತಾ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದಾಗಿದೆ.

ಬಿಜೆಪಿಗೆ ಬೇಕಾ ದೆಹಲಿ ಕೃಪೆ?

ಸದ್ಯ ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿ ಚಿಂತಾಜನಕ ಅಲ್ಲದೇ ಹೋದರೂ ಅಂದುಕೊಂಡಷ್ಟು ಪೂರಕವಾಗಿಯೂ ಇಲ್ಲ. ಕ್ಲೀನ್ ಸ್ವೀಪ್ ಮಾಡಿಬಿಡುವಷ್ಟು ವಿಶ್ವಾಸ ಬಿಜೆಪಿಯ ರಾಜ್ಯ ಘಟಕಕ್ಕೆ ಇಲ್ಲ. ಇಷ್ಟು ದಿನಗಳ ಕಾಲ ನಡೆಸಲಾಗಿರುವ ಆಂತರಿಕ ಸರ್ವೆಗಳು, ವಿರೋಧಿ ಪಾಳಯಗಳ ಸರ್ವೆಗಳು ಕೂಡ ಇದನ್ನೇ ಹೇಳುತ್ತಿವೆ. ಬಿಜೆಪಿ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಮ್ಯಾಜಿಕ್ ನಂಬರ್ ಅನಾಯಾಸವಾಗಿ ಸಿಕ್ಕಿಬಿಡುತ್ತದೆ ಎಂಬಂತಹ ವಾತಾವರಣ ರಾಜ್ಯದಲ್ಲಿಲ್ಲ. ಜನವರಿ ತಿಂಗಳಿಂದಲೇ ರಾಜ್ಯದಲ್ಲಿ ಇಲೆಕ್ಷನ್ ಹವಾ ಶುರುವಾಗಿದೆ. ಪ್ರತಿ ತಿಂಗಳೂ ಕೂಡ ಒಂದೊಂದು ಬೆಳವಣಿಗೆಗಳು ಆಗುತ್ತಲೇ ಇವೆ. ತಿಂಗಳಿಂದ ತಿಂಗಳಿಗೆ ಜನರ ಒಲವು, ಮತದಾರರ ಭಾವನೆ ಬದಲಾಗುತ್ತಿರುವುದನ್ನು ಪಕ್ಷಗಳು ಅರ್ಥ ಮಾಡಿಕೊಂಡಿವೆ. 40% ಕಮಿಷನ್ ಆರೋಪ, ಪದೇ ಪದೇ ತಲೆ ಎತ್ತಿ ಗದ್ದಲ ಎಬ್ಬಿಸಿದ ಧಾರ್ಮಿಕ ವಿಚಾರಗಳು, ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇವೆಲ್ಲವೂ ಬಿಜೆಪಿಗೆ ಟೆನ್ಶನ್ ಹೆಚ್ಚಿಸಿವೆ.

ಸದ್ಯಕ್ಕೆ ಕಾಂಗ್ರೆಸ್ ವಿರುದ್ಧ ಹೋರಾಡಲು ಬಿಜೆಪಿಗೆ ಇರುವ ಅಸ್ತ್ರ ಕಾಂಗ್ರೆಸ್ ನಾಯಕರ ನಡುವಿನ ನಾಯಕತ್ವದ ಗೊಂದಲ ವಿಚಾರ ಮಾತ್ರ. ಅದೊಂದನ್ನೇ ಇಟ್ಟುಕೊಂಡು ಮುಂದಿನ ಚುನಾವಣೆಗೆ ಬಿಜೆಪಿಗೆ ಪೂರಕವಾಗಿರುವಂತೆ ಸೃಷ್ಟಿಸಲು ಸಾಧ್ಯವಿಲ್ಲ ಅನ್ನೋ ಮಾತನ್ನು ಸ್ವತಃ ಕೇಂದ್ರ ಸಚಿವರೊಬ್ಬರು ಪದೇ ಪದೇ ರಾಜ್ಯ ನಾಯಕರ ಕಿವಿಗೆ ಹಾಕಿದ್ದಾರೆ. ಹೀಗಾಗಿ ಹೊಸ ಪ್ಲ್ಯಾನ್ ಸೃಷ್ಟಿಸಲು ಬಿಜೆಪಿಯ ದೆಹಲಿಯ ನಾಯಕರು ತಮ್ಮ ಕೈ ಹಿಡಿಯಬಹುದು ಎಂಬ ಹೊಸ ಆಶಾಕಿರಣವೊಂದು ರಾಜ್ಯ ನಾಯಕರಿಗೆ ಮೂಡಿದೆ.

ಯಾಕೆ ಬೇಕು ಹೊಸ ನರೇಷನ್?

ಕೇವಲ ಹಿಂದುತ್ವದ ವಿಚಾರವೊಂದೇ ಚುನಾವಣೆ ಗೆಲ್ಲಲು ಉಪಯೋಗಕ್ಕೆ ಬರುವುದಿಲ್ಲ ಎಂಬುದು ಬಿಜೆಪಿ ರಾಜ್ಯ ನಾಯಕರಿಗೆ ಅರ್ಥವಾಗಿದೆಯೋ ಬಿಟ್ಟಿದೆಯೋ ಆದರೆ ದೆಹಲಿಯ ಬಿಜೆಪಿ ನಾಯಕರು ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯ ಬಿಜೆಪಿಯ ಹಾಲತ್ ರಿಪೋರ್ಟ್ ಕ್ಷಣ ಕ್ಷಣಕ್ಕೂ ದೆಹಲಿಯ ಕಿವಿ ಮುಟ್ಟುತ್ತಿದೆ. ರಾಜ್ಯ ನಾಯಕರ ಕೈಗೆ ಪೂರ್ತಿ ಜವಾಬ್ದಾರಿ ಕೊಟ್ಟರೆ ಕರ್ನಾಟಕದಲ್ಲಿ ಬಿಜೆಪಿ ಕೈತಪ್ಪಿ ಕಾಂಗ್ರೆಸ್ ಪಾಳಯದ ತುತ್ತಾಗಬಹುದು ಎನ್ನೋ ಪೂರ್ಣ ಸ್ಪಷ್ಟ ಮಾಹಿತಿ ದೆಹಲಿಗೆ ರವಾನೆಯಾಗಿದೆ. ಇದೇ ಕಾರಣಕ್ಕೆ ಮೊನ್ನೆ ಮಂಗಳೂರಿಗೆ ಭೇಟಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಇನ್ನು ಮುಂದೆ ಪ್ರತಿ ತಿಂಗಳೂ ರಾಜ್ಯಕ್ಕೆ ಬರುತ್ತೇನೆ ಎಂಬ ಮಾತು ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಹತ್ತಾರು ಟ್ರಯಲ್ ಆ್ಯಂಡ್ ಎರರ್ ಮಾಡಿ ನೋಡಿರುವ ರಾಜ್ಯ ಬಿಜೆಪಿ ನಾಯಕರು ಇದೀಗ ಆಶಾ ಕಿರಣದಿಂದ ನೋಡುತ್ತಿರುವುದು ದೆಹಲಿ ನಾಯಕರ ಪ್ಲ್ಯಾನ್ ಬಗ್ಗೆಯೇ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಹಾಗೂ ಇನ್ನುಳಿದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಪದೇ ಪದೇ ಬಂದರೆ ಸರಿಸುಮಾರು 10-15 ಕ್ಷೇತ್ರಗಳಲ್ಲಿ ಬಿಜೆಪಿ ಪರ ವಾತಾವರಣ ಮೂಡಿಸಬಹುದು. ದೆಹಲಿ ನಾಯಕರ ಪ್ರಭಾವದ ಮೂಲಕ ಈಗ ಇರುವ ನೆಗೆಟಿವ್ ನರೇಷನ್ ಬದಲಾಯಿಸಿ ಹೊಸ ನರೇಷನ್ ಸೃಷ್ಟಿಸಿ ಚುನಾವಣೆ ತಂತ್ರಗಾರಿಕೆ ಮಾಡಬಹುದು. ರಾಜ್ಯಕ್ಕೆ ಬರುವ ಮೋದಿ ಹಾಗೂ ಅಮಿತ್ ಶಾ ಜೋಡಿ ಏನೋ ಮ್ಯಾಜಿಕ್ ಮಾಡುವಂತೆ ಹೊಸ ತಂತ್ರಗಾರಿಕೆಯನ್ನು ತಮ್ಮ ಮುಂದಿಟ್ಟು ಹೆಚ್ಚು ಸ್ಥಾನ ಗೆಲ್ಲಿಸಿಕೊಡಬಹುದು ಅನ್ನೋ ಆಸೆಯ ಕಂಗಳಿಂದ ದೆಹಲಿಯತ್ತ ನೋಟ ನೆಟ್ಟಿದ್ದಾರೆ.

ಕಾಂಗ್ರೆಸ್ ಪಾಳಯಕ್ಕೂ ಇದೇ ಯೋಚನೆ ಕೊಂಚ ಆತಂಕ ಮೂಡಿಸಿದೆ. ಕಳೆದ 10 ವರ್ಷಗಳ ಸುದೀರ್ಘ ಚುನಾವಣೆಯನ್ನು ಅವಲೋಕಿಸಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿಯ ಸ್ಥಳೀಯ ನಾಯಕರ ಬಗ್ಗೆ ಆತಂಕವಿಲ್ಲ. ಕಾಂಗ್ರೆಸ್ ಟೆನ್ಶನ್ ಹೆಚ್ಚಿಸಿರುವುದು ದೆಹಲಿಯ ನಾಯಕರ ಮ್ಯಾಜಿಕ್ ಸ್ಟ್ರಾಟಜಿ. ಸೂಕ್ಷ್ಮವಾಗಿ ಗಮನಿಸಿದವರಿಗೆ ಕಾಂಗ್ರೆಸ್ ಪರವೇ ರಾಜ್ಯದ ವಾತಾವರಣ ಇರುವಂತೆ ಕಂಡರೂ ಕೊನೆ ಹಂತದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಒತ್ತಡವಿದೆ. ಡೆಲ್ಲಿಯವರು ಬೊಮ್ಮಾಯಿಯೊಬ್ಬರನ್ನೇ ನಂಬಿಕೊಂಡು ಕೂರಲ್ಲ ಅವರು ಬೇರೆಯದೇ ಏನೋ ಪ್ಲ್ಯಾನ್ ಮಾಡ್ತಾರೆ ಎಂಬ ಮಾತು ಕೆಪಿಸಿಸಿ ನಾಯಕರ ಕಚೇರಿಯೊಳಗೆ ಚರ್ಚೆಯಾಗುತ್ತಿದೆ.

ಕೇವಲ ಬೊಮ್ಮಾಯಿಯೊಬ್ಬರ ನಾಯಕತ್ವವನ್ನು ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಕೂಡ ಸರಿ ಸಮನಾಗಿ ಫೈಟ್ ಮಾಡಬಲ್ಲದು. ಮಾಜಿ ಸಿಎಂ ಯಡಿಯೂರಪ್ಪ ತೆರೆ ಮರೆಗೆ ಸರಿದೇ ಬಿಟ್ಟರು ಅಂತ ಕಾಂಗ್ರೆಸ್ ಖುಷಿ ಪಡುವಷ್ಟರಲ್ಲಿ ದೆಹಲಿ ಬಿಜೆಪಿ ನಾಯಕರು ಯಡಿಯೂರಪ್ಪರನ್ನು ಮತ್ತೆ ರಥ ಹತ್ತಿಸಿದ್ದರು. ಕಾಂಗ್ರೆಸ್ ಪಾಲಿಗೆ ಯಡಿಯೂರಪ್ಪ ರೀ ಎಂಟ್ರಿ ಒಂದು ಸ್ಟ್ರೋಕ್ ಅಂದರೂ ತಪ್ಪಾಗಲ್ಲ. ಯಡಿಯೂರಪ್ಪರನ್ನು ಮತ್ತೆ ಮುನ್ನೆಲೆಗೆ ತಂದ ಹಾಗೆಯೇ ಮತ್ತೆ ಯಾವುದಾದರೂ ಮಾಸ್ಟರ್ ಸ್ಟ್ರೋಕ್ ದೆಹಲಿಯ ಅಂಗಳದಿಂದ ಬರಬಹುದು ಎಂಬ ಆತಂಕ ಕಾಂಗ್ರೆಸ್​ಗೆ ಇದೆ. ಹೀಗಾಗಿ ಕಾಂಗ್ರೆಸ್ ಕೂಡ ರಾಹುಲ್​ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಂತಹ ಕಾರ್ಯಕ್ರಮವನ್ನು ತನ್ನ ಗ್ರೌಂಡ್ ಲೆವೆಲ್ ಸಂಘಟನೆಗೆ ಬಳಕೆ ಮಾಡಿಕೊಳ್ಳುತ್ತಿದೆ.

ದೆಹಲಿ ಮ್ಯಾಜಿಕ್ ಅಂದ್ರೆ ಪಂಚ ರಾಜ್ಯ ಫಲಿತಾಂಶ

ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳ ರಾಜ್ಯ ನಾಯಕರಿಗೆ ಕಣ್ಣ ಮುಂದೆ ಇರುವ ಉದಾಹರಣೆ ಪಂಚ ರಾಜ್ಯಗಳ ಚುನಾವಣೆ. 2022 ರಲ್ಲಿ ಫೆಬ್ರವರಿ ಮಾರ್ಚ್ ನಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆ ದೆಹಲಿ ಮ್ಯಾಜಿಕ್ ತಂತ್ರಗಾರಿಕೆಗೆ ಹೇಳಿ ಮಾಡಿಸಿದ ಉದಾಹರಣೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಎಲ್ಲ ಕಡೆಯೂ ಬಿಜೆಪಿಗೆ ಪೂರಕ ವಾತಾವರಣವೇನೂ ಇರಲಿಲ್ಲ. ಪಂಜಾಬ್​ ಕಾಂಗ್ರೆಸ್ ಕೈಯ್ಯಲ್ಲಿದ್ದ ರಾಜ್ಯವಾದರೆ ಗೋವಾದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ವಾತಾವರಣ ಕೊನೆ ತನಕವೂ ಇತ್ತು. ಗೋವಾದಲ್ಲಂತೂ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿತು ಅಂತ ಕರ್ನಾಟಕದಿಂದ ಫ್ಲೈಟ್ ಹತ್ತಿ ಗೋವಾಗೆ ಹೊರಟವರಿಗೂ ಅರ್ಧ ದಾರಿಯಲ್ಲೇ ಶಾಕ್ ಕೊಟ್ಟಿದ್ದು ಇದೇ ದೆಹಲಿ ಮ್ಯಾಜಿಕ್.

ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳನ್ನು ಗೆದ್ದ ಬಿಜೆಪಿ ಒಂದೇ ಸ್ಟ್ರಾಟಜಿ ಮೇಲೆ ಕೆಲಸ ಮಾಡಲಿಲ್ಲ. ಬದಲಾಗಿ ಆಯಾಯ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ನರೇಷನ್ ಬದಲಿಸಿಕೊಂಡರು. ಉತ್ತರ ಪ್ರದೇಶದಲ್ಲಿ ಹಿಂದುತ್ವ ಹಾಗೂ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸಿದ್ದು ಬಿಜೆಪಿ ಎನರ್ಜಿ ನೀಡಿದ್ದರೆ ಅದನ್ನು ತಲುಪುವುದಕ್ಕೆ ಕಾಂಗ್ರೆಸ್ ಗೆ ಅವಕಾಶವನ್ನೇ ಕೊಡಲಿಲ್ಲ. ಉತ್ತರಾಖಂಡ್ ನಲ್ಲಿ ಮೂರು ಸಿಎಂ ಬದಲಾವಣೆ ಆಗಿದ್ದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದೇ ಇಲ್ಲ ಎಂದೇ ಕಾಂಗ್ರೆಸ್ ಭಾವಿಸಿತ್ತು. ಆದರೆ ಉತ್ತರಾಖಂಡ್ ನಲ್ಲಿ ಚುನಾವಣೆಗೆ ಬಿಜೆಪಿ ಕೈಗೆತ್ತಿಕೊಂಡ ಸಂಗತಿಗಳೇ ಬೇರೆ. ಗೋವಾದಲ್ಲಿಯೂ ಕೂಡ ಆಡಳಿತ ವಿರೋಧಿ ಅಲೆ ಇದ್ದಾಗ್ಯೂ ಕೂಡ ಕಾಂಗ್ರೆಸಿನ ಮತಗಳನ್ನು ಒಡೆಯಲು ಬಿಜೆಪಿಗೆ ಬೇರೆ ಬೇರೆ ಪ್ರಾದೇಶಿಕ ಪಕ್ಷಗಳೂ ನೆರವಾಗಿದ್ದವು. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯದಂತೆ ನೋಡಿಕೊಳ್ಳಲು ಅಷ್ಟು ಸಾಕಾಗಿತ್ತು. ಪಂಜಾಬ್​ ನಲ್ಲಿ ಕಾಂಗ್ರೆಸ್ ನಾಯಕರ ಸ್ಥಳೀಯ ಕಚ್ಚಾಟ ವಿವಾದ ಎಲ್ಲ ರಾಜ್ಯಗಳ ಚುನಾವಣೆ ಮೇಲೆಯೂ ದುಷ್ಪರಿಣಾಮ ಬೀರಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತೆ ಮಾಡಿದ್ದು ಬಿಜೆಪಿಯ ದೆಹಲಿ ಮ್ಯಾಜಿಕ್​ ನ ತಂತ್ರಗಾರಿಕೆಯ ಭಾಗವೇ ಆಗಿತ್ತು.

ಇಷ್ಟೆಲ್ಲ ಮಾಡಿದ ಬಿಜೆಪಿಗೆ ದೆಹಲಿ ಮ್ಯಾಜಿಕ್​ ಕರ್ನಾಟಕದಲ್ಲೂ ವರ್ಕ್ ಆಗತ್ತೆ ಎಂಬ ವಿಶ್ವಾಸವಿದ್ದರೆ ಅಚ್ಚರಿಯೇನೂ ಪಡಬೇಕಿಲ್ಲ. ಕಾಂಗ್ರೆಸ್ ಗೆ ಆ ಬಗ್ಗೆ ಭಯ ಇದ್ದರೂ ಅದನ್ನು ಕಡೆಗಣಿಸಬೇಕಿಲ್ಲ. ಮೋದಿ ಹೇಳಿದ ಪ್ರತಿ ತಿಂಗಳ ರಾಜ್ಯ ಪ್ರವಾಸದ ವಿಚಾರ ಗಮನಿಸಿದವರಿಗೆ ದೆಹಲಿಯ ಬಿಜೆಪಿಯ ಬತ್ತಳಿಕೆಯಲ್ಲಿ ಬೇರೆಯದೇನೋ ಇದ್ದೇ ಇದೆ ಎಂಬ ಭಾವನೆ ಮೂಡುವುದರಲ್ಲಿ ಅನುಮಾನವಿಲ್ಲ. ಸಂಘಟಿತ ಸಾಮೂಹಿಕ ನಾಯಕತ್ವದ ಮೂಲಕ ಮಾತ್ರ ದೆಹಲಿಯ ಮ್ಯಾಜಿಕ್​ ಅನ್ನು ಕಾಂಗ್ರೆಸ್ ಎದುರಿಸಲು ಸಾಧ್ಯವೇನೋ. ಅಧ್ಯಯನ ನಡೆಸುವವರಿಗೆ ತಂತ್ರಗಾರಿಕೆ ಹೆಣೆಯುವವರಿಗೆ ಪಂಚ ರಾಜ್ಯಗಳ ಚುನಾವಣೆ ರಿಸಲ್ಟ್ ಒಂದು ಪಾಠವಾಗಿದೆ. ಆದರೆ ನಿಜಕ್ಕೂ ದೆಹಲಿಯ ಮ್ಯಾಜಿಕ್​ ವಾಸ್ತವವೋ ಅಥವಾ ಕೇವಲ ಭ್ರಮೆಯೋ ಎಂಬುವುದನ್ನು ತಿಳಿಯಲು 2023 ರ ಮೇ ತಿಂಗಳು ಬರುವ ತನಕ ಕಾಯಲೇಬೇಕು.

ವರದಿ: ಪ್ರಸನ್ನ ಗಾಂವ್ಕರ್, ಟಿವಿ9 ಬೆಂಗಳೂರು

Published On - 9:46 pm, Sat, 10 September 22