AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಮುಂದಾದ ಕಸಾಪ: ಸಾಹಿತ್ಯ ಲೋಕದ ಆಕ್ಷೇಪ

ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಖ್ಯಾತ ಸಾಹಿತಿಗಳ ಪ್ರತಿಮೆಗಳು, ಕನ್ನಡದ ಲೈವ್ ಹಾಡುಗಳು ಮತ್ತು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎಂದು ಕಸಾಪ ಹೇಳಿದೆ.

ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಮುಂದಾದ ಕಸಾಪ: ಸಾಹಿತ್ಯ ಲೋಕದ ಆಕ್ಷೇಪ
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 11, 2022 | 9:12 AM

Share

ಬೆಂಗಳೂರು: ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುವ ಶ್ರೇಯಸ್ಸು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) (Kannada Sahitya Parishat – KSP) ಕೇಂದ್ರ ಕಚೇರಿ ಇರುವ ರಸ್ತೆಯ ಹೆಸರು ಬದಲಿಸಬೇಕು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್​ ಜೋಶಿ (Mahesh Joshi) ಬಿಬಿಎಂಪಿ (BBMP) ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ವಿದ್ಯಮಾನವು ಇದೀಗ ಕನ್ನಡ ಬೌದ್ಧಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ‘ಹೆಸರು ಬದಲಿಸುವುದು ಸರಿಯಾದ ನಿರ್ಧಾರವಲ್ಲ’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಚಾಮರಾಜಪೇಟೆಯ ಮಿಂಟೊ ಆಸ್ಪತ್ರೆ ಮತ್ತು ಮಕ್ಕಳ ಕೂಟ ಉದ್ಯಾನದ ನಡುವಣ ರಸ್ತೆಗೆ ‘ಸಾಹಿತ್ಯ ಪರಿಷತ್ ರಸ್ತೆ’ ಎಂದು ಹೊಸ ನಾಮಕರಣ ಮಾಡಬೇಕು ಎಂದು ಮಹೇಶ್​ಜೋಶಿ ಕೋರಿದ್ದಾರೆ. ಈ ಇಡೀ ರಸ್ತೆಯನ್ನು ‘ಕನ್ನಡಮಯ’ಗೊಳಿಸಲಾಗುವುದು ಎಂದು ಸಾಹಿತ್ಯ ಪರಿಷತ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂಬ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

‘ಹೆಸರು ಬದಲಿಸುವ ಪ್ರಸ್ತಾವ ಕುರಿತು ಚರ್ಚಿಸಲು ಈ ರಸ್ತೆಯಲ್ಲಿರುವ ಇತರ ಸಂಘ ಸಂಸ್ಥೆಗಳು, ಕಚೇರಿಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿದ್ದೇವೆ. ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿವಿ, ಕನ್ನಡ ದಿನಪತ್ರಿಕೆ, ಕೆಲ ಬ್ಯಾಂಕ್​ಗಳು, ಉದ್ಯಾನವನ, ಮಿಂಟೊ ಕಣ್ಣಿನ ಅಸ್ಪತ್ರೆ ಸೇರಿದಂತೆ ಎಲ್ಲರ ಗಮನಕ್ಕೆ ತಂದಿದ್ದೇವೆ’ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಕೆಲವು ದೇಶಗಳಲ್ಲಿ ನಿರ್ದಿಷ್ಟ ಥೀಮ್​ಗಳ ಮೇಲೆ ರಸ್ತೆಗಳನ್ನು ರೂಪಿಸಿದ್ದಾರೆ. ಅಂಥ ಹಲವು ಉದಾಹರಣೆಗಳನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರಸ್ತೆಯು ಕನ್ನಡ ಪ್ರೇಮಿಗಳ ಕಣ್ಣಿಗೆ ಹಬ್ಬದಂತೆ ಆಗುತ್ತದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ಸಾಹಿತ್ಯ ಪರಿಷತ್​ಗೆ ಭೇಟಿ ನೀಡುವಂತೆ ಮಾಡುತ್ತೇವೆ ಎಂದು ಜೋಶಿ ಹೇಳಿದರು.

ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಖ್ಯಾತ ಸಾಹಿತಿಗಳ ಪ್ರತಿಮೆಗಳು, ಕನ್ನಡದ ಲೈವ್ ಹಾಡುಗಳು ಮತ್ತು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಜನಪ್ರಿಯ ಕನ್ನಡಪರ ಹೇಳಿಕೆಗಳನ್ನು ಅಳವಡಿಸಲಾಗುವುದು ಎಂದು ಸಾಹಿತ್ಯ ಪರಿಷತ್ ಹೇಳಿದೆ.

ಹೆಸರು ಬದಲಾವಣೆಗೆ ಆಕ್ಷೇಪ

ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸುವ ಪ್ರಸ್ತಾವಕ್ಕೆ ಗಿರೀಶ್ ರಾವ್ ಹತ್ವಾರ್, ಶಾಂತಾ ನಾಗರಾಜ್, ಪ್ರತಿಭಾ ನಂದಕುಮಾರ್ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸ ನೂರಾರಿವೆ. ಕನ್ನಡದ ಮಕ್ಕಳಿಗೆ ಪಠ್ಯಪುಸ್ತಕ ರೂಪಿಸುವುದರಿಂದ ಹಿಡಿದು, ಇವತ್ತು ಸೊಗಸಾಗಿ ಬರೆಯುವ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ತನಕ ಸಾಹಿತ್ಯಕ್ಕೆ ಸಂಬಂಧಿಸಿದ ಎಷ್ಟೊಂದು ಕೆಲಸಗಳನ್ನು ಮಾಡಬಹುದು. ಕಮ್ಮಟಗಳನ್ನು ಏರ್ಪಡಿಸಬಹುದು, ಮುಖ್ಯ ಚರ್ಚೆಗಳು ಎದ್ದಾಗ ಆ ಕುರಿತು ಸಂಕಿರಣ ಇಟ್ಟುಕೊಳ್ಳಬಹುದು. ಜಿ.ಎಸ್.ಶಿವರುದ್ರಪ್ಪನವರಂಥ ಹಿರಿಯರು, ಹಾಮಾ ನಾಯಕರಂಥ ನಿಸ್ಪೃಹರು, ಜಿ. ನಾರಾಯಣ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಮುಂತಾದವರು ಮಾಡಿರುವ ಕೆಲಸವನ್ನು ನೋಡಿಯಾದರೂ ಸಾಹಿತ್ಯದ ಕೆಲಸ ಏನೆಂಬುದನ್ನು ತಿಳಿದುಕೊಳ್ಳಬಹುದು. ಅದು ಬಿಟ್ಟು ರಸ್ತೆ ಹೆಸರು ಬದಲಾಯಿಸಲು ಹೊರಡುವುದು ಶುದ್ಧ ಮೂರ್ಖತನ! ಅದಕ್ಕೂ ಮೊದಲು ದಾರಿ ತಪ್ಪಿರುವ ಸಾಹಿತ್ಯ ಪರಿಷತ್ತು, ಸರಿದಾರಿಯಲ್ಲಿ ಸಾಗಲಿ’ ಎಂದು ಜೋಗಿ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಲೇಖಕಿ ಶಾಂತಾ ನಾಗರಾಜ್, ‘ಅಧ್ಯಕ್ಷರು ಸಾಹಿತಿಗಳಾಗಿದ್ದರೆ ನೀವು ಹೇಳಿದ ಕಾಳಜಿಗಳನ್ನು ಹೊಂದಿರುತ್ತಿದ್ದರು. ಆಡಳಿತಾಧಿಕಾರಿಗಳು ಮುಖಂಡರಾದರೆ, ಅವರಿಗೆ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿಕೊಳ್ಳುವ ಬಯಕೆ’ ಎಂದು ಆಕ್ಷೇಪಿಸಿದ್ದಾರೆ.

ಸಿನಿಮಾ ಪತ್ರಕರ್ತ ಶ್ಯಾಮ್​ ಪ್ರಸಾದ್ ಸಹ ಕಸಾಪ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ರೋಡ್ ಮಾಡೋದು ಸಾಹಿತ್ಯ ಪರಿಷತ್ ಕೆಲಸಾನ? ಪಂಪ ಮಹಾಕವಿ ಹೆಸರು ಬೇಡ ಅನ್ನೋ ಸಾಹಿತ್ಯ ಪರಿಷತ್ತು ಯಾಕೆ ಬೇಕು’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಲೇಖಕಿ ಪ್ರತಿಭಾ ನಂದಕುಮಾರ್, ‘ರಸ್ತೆ ಬದಲಿಸುವ ನಿರ್ಧಾರವನ್ನು ಪರಿಷತ್ ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ. ಇದಕ್ಕೆ ಸಕಲ ಕನ್ನಡಿಗರ ವಿರೋಧವಿದೆ. ಪಂಪನನ್ನು ಅಳಿಸುವ ಯತ್ನ ಕನ್ನಡ ವಿರೋಧಿ’ ಎಂದು ದೂರಿದ್ದಾರೆ.

Published On - 9:12 am, Sun, 11 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ