
ಬೆಂಗಳೂರು, ಅಕ್ಟೋಬರ್ 07: ರಾಜ್ಯದಲ್ಲಿ ಎಂಬಿಎ, ಎಮ್ಸಿಎ, ಎಮ್.ಟೆಕ್, ಎಮ್ಇ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಗ್ ಶಾಕ್ ನೀಡಿದೆ. ಮೊದಲ ಸುತ್ತಿನ PGCET ಸೀಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಎರಡನೇ ಮತ್ತು ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸೀಟ್ ಮ್ಯಾಟ್ರಿಕ್ಸ್ ಸಲ್ಲಿಕೆಯಲ್ಲಿ ಉಂಟಾದ ವಿಳಂಬದಿಂದಾಗಿ ಈ ಬಾರಿಯ ಕೌನ್ಸೆಲಿಂಗ್ ಪ್ರಕ್ರಿಯೆ ಈಗಾಗಲೇ ಸಾಕಷ್ಟು ತಡವಾಗಿದೆ. KEA ಪ್ರಕಟಿಸಿದ ಮೊದಲ ಸುತ್ತಿನ ಫಲಿತಾಂಶದಲ್ಲಿ 23,164 ಸೀಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಇನ್ನೂ 9,574 ಎಮ್ಸಿಎ, 2,195 ಎಮ್ಬಿಎ ಹಾಗೂ 1,821 ಎಮ್.ಟೆಕ್ ಸೀಟುಗಳು ಖಾಲಿಯಾಗಿಯೇ ಉಳಿದಿವೆ.
ಕಳೆದ ವರ್ಷಗಳಂತೆ 2ನೇ ಸುತ್ತಿನಲ್ಲಿ ಆಪ್ಶನ್ ಎಂಟ್ರಿ ಬದಲಾಯಿಸಿ, ಉತ್ತಮ ಕಾಲೇಜು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ KEA ಸ್ಪಷ್ಟ ಮಾಹಿತಿ ನೀಡದಿರುವುದು ನಿರಾಸೆ ಮೂಡಿಸಿದೆ. ಒಂದೇ ಸುತ್ತಿನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿಸಲು ಪ್ರಾಧಿಕಾರ ಮುಂದಾಗಿದೆಯೇ ಎಂಬ ಅನುಮಾನ ಮೂಡಿದ್ದು, ಸೀಟು ಪಡೆಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.
ಇನ್ನೊಂದೆಡೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊರಡಿಸಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 15ರಿಂದ ಪಿಜಿ ತರಗತಿಗಳು ಕಡ್ಡಾಯವಾಗಿ ಆರಂಭವಾಗಬೇಕಿದೆ. ಪ್ರವೇಶ ಗಡುವು ವಿಸ್ತರಿಸುವಂತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ನಿಗದಿತ ವೇಳಾಪಟ್ಟಿ ಪಾಲಿಸಲು ನಿರ್ದೇಶಿಸಿದೆ. ಕೆಇಎ ವೆಬ್‌ಸೈಟ್‌ನಲ್ಲೂ ಸೂಕ್ತ ಮಾಹಿತಿಯಿಲ್ಲದೆ ಕಾಲೇಜು ಆಯ್ಕೆ ಮತ್ತು ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಮೊದಲ ಸುತ್ತಿನಲ್ಲಿ ಆಯ್ಕೆಯಾದವರಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 7 ಹಾಗೂ ಕಾಲೇಜು ಪ್ರವೇಶಕ್ಕೆ ಅಕ್ಟೋಬರ್ 8ರ ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡದೆ, ತಕ್ಷಣವೇ ಕೆಇಎ 2ನೇ ಹಾಗೂ 3ನೇ ಸುತ್ತಿನ ಕೌನ್ಸೆಲಿಂಗ್ ಪ್ರಕಟಿಸಬೇಕು ಎಂದು ವಿದ್ಯಾರ್ಥಿಗಳು ಆನ್‌ಲೈನ್ ಅಭಿಯಾನದ ಮೂಲಕ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 am, Wed, 7 October 26