
ನವದೆಹಲಿ/ಬೆಂಗಳೂರು, ಅಕ್ಟೋಬರ್ 01: ಕರ್ನಾಟಕ ಲೋಕಸೇವಾ ಆಯೋಗ (KPSC)ದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿ, ಹೊಸದಾಗಿ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 21ರಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೋಜ್ ಮಿಶ್ರಾ ಹಾಗೂ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ KPSCಯ ಇತರ ನೇಮಕಾತಿಗಳಿಗೆ ಸಂಬಂಧಿಸಿದ ಆರೋಪಗಳ ತನಿಖೆಗಾಗಿ ಹೈಕೋರ್ಟ್ SIT ರಚಿಸಿತ್ತು.
ಸುಪ್ರೀಂ ಕೋರ್ಟ್ ಅಕ್ಟೋಬರ್ 12ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದು, ಹೈಕೋರ್ಟ್ ರಚಿಸಿದ್ದ SITನ ಸದಸ್ಯರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಒಳಗೊಂಡ ಹೆಚ್ಚುವರಿ ಪ್ರಮಾಣಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಪರ್ಯಾಯ ಅಧಿಕಾರಿಗಳ ಹೆಸರನ್ನೂ ರಾಜ್ಯ ಸರ್ಕಾರ ಸೂಚಿಸಬಹುದು ಎಂದು ಕೋರ್ಟ್ ತಿಳಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಈಗಾಗಲೇ ಅಪರಾಧ ತನಿಖಾ ಇಲಾಖೆ (CID) ಪ್ರಕರಣಗಳ ತನಿಖೆ ನಡೆಸುತ್ತಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಪ್ರಕರಣಗಳ ತನಿಖೆ ನಡೆಸುತ್ತಿರುವ CID ಅಧಿಕಾರಿಗಳ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಹೀಗಿರುವಾಗ ಹೊಸದಾಗಿ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸಿಬಲ್ ವಾದಿಸಿದರು. ಹೊಸದಾಗಿ ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಸಿಬಲ್ ವಿರೋಧಿಸಿದ್ದು, ಇದರಿಂದ CID ಈಗಾಗಲೇ ನಡೆಸಿರುವ ತನಿಖೆಯನ್ನು ಮತ್ತೆ ಆರಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದನ್ನೂ ಓದಿ: KPSC ಅಕ್ರಮ ಪ್ರಕರಣದಲ್ಲಿ ED ಸ್ಫೋಟಕ ವರದಿ: ಹುದ್ದೆಗೆ 40 ಲಕ್ಷ ರೂ. ರೇಟ್, ಬಯಲಾಯ್ತು ಚೆಕ್ ಗ್ಯಾರಂಟಿ ಡೀಲ್
ಅಲ್ಲದೆ, ರಾಜ್ಯ ಸರ್ಕಾರದ ಸಲಹೆಗಳನ್ನು ಪಡೆಯದೆ ಹೈಕೋರ್ಟ್ ನೇರವಾಗಿ SIT ಸದಸ್ಯರನ್ನು ಆಯ್ಕೆ ಮಾಡಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. SITನಲ್ಲಿ ಕಾರಾಗೃಹಗಳ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಅಲೋಕ್ ಕುಮಾರ್ ಅವರನ್ನು ಸೇರಿಸಿರುವುದರ ಬಗ್ಗೆಯೂ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರತ್ಯೇಕ CBI ತನಿಖೆಯೊಂದರಲ್ಲಿ ಅಲೋಕ್ ಕುಮಾರ್ ಅವರ ಫೋನ್ ಇಂಟರ್‌ಸೆಪ್ಷನ್ ಮತ್ತು ಟ್ಯಾಪಿಂಗ್‌ಗೆ ಸಂಬಂಧಿಸಿದ ಪಾತ್ರದ ಕುರಿತು ಪ್ರಶ್ನೆಗಳು ಎದ್ದಿವೆ ಎಂದು ಅವರು ಉಲ್ಲೇಖಿಸಿದರು.
ಪ್ರತಿವಾದಿಗಳ ಪರ ವಾದಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್, ಪ್ರಕರಣದ ತನಿಖೆಯನ್ನು CBIಗೆ ವಹಿಸುವಂತೆ ಮೂಲತಃ ಹೈಕೋರ್ಟ್‌ನಲ್ಲಿ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು. ರಾಜ್ಯ ಪೊಲೀಸ್ ಅಧಿಕಾರಿಗಳನ್ನೇ ಒಳಗೊಂಡ SIT ರಚನೆಗೆ ರಾಜ್ಯ ಸರ್ಕಾರ ಏಕೆ ವಿರೋಧಿಸುತ್ತಿದೆ ಎಂದು ಅವರು ಪ್ರಶ್ನಿಸಿದರು. ರಾಜ್ಯವು ತನ್ನದೇ ಅಧಿಕಾರಿಗಳು ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಕಾರಾಗೃಹಗಳ DGPಯನ್ನು ತನಿಖೆ ನಡೆಸಲು ಸೂಚಿಸಲಾಗಿದೆ. ತಂಡ ಸಂಪೂರ್ಣವಾಗಿ ರಾಜ್ಯದ ಅಧಿಕಾರಿಗಳದ್ದೇ ಆಗಿದೆ. ರಾಜ್ಯವು ಹೇಗೆ ಆಕ್ಷೇಪಿಸಬಹುದು? ಇದರರ್ಥ ತನಿಖೆ ನಡೆಸುವ ಅಧಿಕಾರಿಗಳನ್ನು ತಮಗೆ ಬೇಕಾದಂತೆ ಆಯ್ಕೆ ಮಾಡಲು ರಾಜ್ಯ ಬಯಸುತ್ತಿದೆ ಎಂದು ಅವರು ವಾದಿಸಿದರು. ಹೈಕೋರ್ಟ್ ಆದೇಶದ ಬಳಿಕ ರಾಜ್ಯ ಸರ್ಕಾರ SITಗೆ ಅಧಿಸೂಚನೆ ಹೊರಡಿಸಿಲ್ಲ ಹಾಗೂ ಸಂಬಂಧಿತ ದಾಖಲೆಗಳನ್ನು ವರ್ಗಾಯಿಸಿಲ್ಲ ಎಂದು ಪರಮೇಶ್ವರ್ ತಿಳಿಸಿದರು. ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸಬೇಕಿದೆ ಎಂದು ಅವರು ವಾದಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.