AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KPSC ಅಕ್ರಮ ಪ್ರಕರಣದಲ್ಲಿ ED ಸ್ಫೋಟಕ ವರದಿ: ಹುದ್ದೆಗೆ 40 ಲಕ್ಷ ರೂ. ರೇಟ್, ಬಯಲಾಯ್ತು ಚೆಕ್ ಗ್ಯಾರಂಟಿ ಡೀಲ್

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಇಡಿ ತನಿಖೆ ಮಹತ್ವದ ವಿವರಗಳನ್ನು ಬಹಿರಂಗಪಡಿಸಿದೆ. ಅಭ್ಯರ್ಥಿಗಳಿಂದ ₹80 ಲಕ್ಷದವರೆಗೆ ಡೀಲ್ ನಡೆಸಿ, ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿ, ಒಂದು ದಿನ ಮುಂಚಿತವಾಗಿ ಉತ್ತರಗಳನ್ನು ಕಂಠಪಾಠ ಮಾಡಿಸಲಾಗಿತ್ತು. ಹಣಕ್ಕೆ ಬ್ಲಾಂಕ್ ಚೆಕ್‌ಗಳನ್ನು ಗ್ಯಾರಂಟಿಯಾಗಿ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

KPSC ಅಕ್ರಮ ಪ್ರಕರಣದಲ್ಲಿ ED ಸ್ಫೋಟಕ ವರದಿ: ಹುದ್ದೆಗೆ 40 ಲಕ್ಷ ರೂ. ರೇಟ್, ಬಯಲಾಯ್ತು ಚೆಕ್ ಗ್ಯಾರಂಟಿ ಡೀಲ್
ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ,
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 01, 2026 | 1:03 PM

Share

ಬೆಂಗಳೂರು, ಅ.1 : ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣವು ಜಾರಿ ನಿರ್ದೇಶನಾಲಯದ (ED) ಎಂಟ್ರಿಯಾಗಿರುವುದು ಅತ್ಯಂತಸ್ಫೋಟಕ ತಿರುವು ಪಡೆದುಕೊಂಡಿದೆ. ವಿಧಾನಸೌಧ ಪೊಲೀಸ್ ಠಾಣೆಯಿಂದ ಸಿಐಡಿ (CID) ಹೆಗಲೇರಿದ್ದ ಈ ತನಿಖೆಯ ಮಧ್ಯೆಯೇ, ಹಣಕಾಸು ಅಕ್ರಮ ತಡೆ ಕಾಯ್ದೆಯಡಿ (PMLA) ಸ್ವತಃ ಪ್ರತ್ಯೇಕ ಇಸಿಐಆರ್ (ECIR) ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಇದೀಗ ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಅವರ ಸಹಚರ ಬಸವರಾಜ್ ಕನ್ನಾಳೆ ಅವರನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.

ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿಯ ವೇಳೆ ಲಕ್ಷಾಂತರ ರೂಪಾಯಿ ಹಣಕಾಸು ಅಕ್ರಮ ಹಾಗೂ ಲಂಚಾವತಾರದ ಸರಣಿ ಸಾಕ್ಷ್ಯಗಳು ಸಿಕ್ಕಿಬಿದ್ದಿದ್ದು, ಪರೀಕ್ಷಾ ವಂಚನೆಯ ನೆಟ್‌ವರ್ಕ್ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಇಡಿ ಬಿಡುಗಡೆ ಮಾಡಿರುವ ಅಧಿಕೃತ ತನಿಖಾ ವರದಿಯ ಪ್ರಕಾರ, ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರಿಗೆ ಪರೀಕ್ಷೆ ನಡೆಸುವುದು, ಪ್ರಶ್ನೆಪತ್ರಿಕೆಗಳ ಭದ್ರತೆ ಸೇರಿದಂತೆ ಸಂಪೂರ್ಣ ಉಸ್ತುವಾರಿ ಇತ್ತು. ಈ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯನ್ನೇ ದುರ್ಬಳಕೆ ಮಾಡಿಕೊಂಡ ಇವರು, ಬಸವರಾಜ್ ಕನ್ನಾಳೆ ಜೊತೆ ಸೇರಿ ಕೋಟಿ ಕೋಟಿ ಹಣದ ನೆಟ್‌ವರ್ಕ್ ರೂಪಿಸಿದ್ದರು.

ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿಯಿಂದ ಹಣ ಕೊಟ್ಟು ಉದ್ಯೋಗ ಪಡೆಯಬಲ್ಲ ಶ್ರೀಮಂತ ಅಭ್ಯರ್ಥಿಗಳ ಮಾಹಿತಿ (Data) ಒದಗಿಸುತ್ತಿದ್ದರು. ಬಸವರಾಜ್ ಕನ್ನಾಳೆ ಈ ಅಭ್ಯರ್ಥಿಗಳನ್ನು ನೇರವಾಗಿ ಸಂಪರ್ಕಿಸುತ್ತಿದ್ದ. ಸರ್ಕಾರಿ ಉದ್ಯೋಗಕ್ಕಾಗಿ ಆರಂಭದಲ್ಲಿ 70 ರಿಂದ 80 ಲಕ್ಷ ರೂ. ಡಿಮ್ಯಾಂಡ್ ಮಾಡಲಾಗುತ್ತಿತ್ತು. ಕೊನೆಗೆ 30 ರಿಂದ 40 ಲಕ್ಷ ರೂ.ಗೆ ಡೀಲ್ ಅಂತಿಮಗೊಳಿಸಲಾಗುತ್ತಿತ್ತು.

ಭವಿಷ್ಯದಲ್ಲಿ ಅಭ್ಯರ್ಥಿಗಳು ಹಣ ನೀಡದೆ ವಂಚಿಸಬಾರದೆಂದು ಆರೋಪಿಗಳು ವಿಶಿಷ್ಟ ಶೈಲಿ ಅನುಸರಿಸುತ್ತಿದ್ದರು. ಡೀಲ್ ಮೊತ್ತದ ಶೇಕಡಾ 70 ರಿಂದ 80ರಷ್ಟು ಹಣವನ್ನು ನಗದು (Cash) ರೂಪದಲ್ಲಿ ಪಡೆಯಲಾಗುತ್ತಿತ್ತು. ಉಳಿದ ಮೊತ್ತಕ್ಕೆ ಅಭ್ಯರ್ಥಿಗಳು ಹಾಗೂ ಅವರ ಕುಟುಂಬಸ್ಥರಿಂದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು (Blank Cheques) ಗ್ಯಾರಂಟಿಗಾಗಿ ವಶಪಡಿಸಿಕೊಳ್ಳಲಾಗುತ್ತಿತ್ತು! “ಕೆಲಸ ಸಿಕ್ಕ ನಂತರ ಹಣ ಕೊಟ್ಟು ಚೆಕ್ ಒಯ್ಯಿರಿ” ಎಂದು ಗ್ಯಾರಂಟಿ ಕಾರ್ಡ್ ರೀತಿಯಲ್ಲಿ ವ್ಯವಹರಿಸಲಾಗುತ್ತಿತ್ತು. ಇಡಿ ದಾಳಿಯ ವೇಳೆ ಬಸವರಾಜ್ ಕನ್ನಾಳೆಗೆ ಸೇರಿದ ಜಾಗಗಳಲ್ಲಿ ಈ ಸಹಿ ಮಾಡಿದ ನೂರಾರು ಖಾಲಿ ಚೆಕ್‌ಗಳು ಪತ್ತೆಯಾಗಿವೆ.

ಇಲ್ಲಿದೆ ನೋಡಿ ವಿಡಿಯೋ:

ಹಣ ಪಾವತಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಆರೋಪಿಗಳು ಅತ್ಯಂತ ಹೈಟೆಕ್ ಮತ್ತು ರಹಸ್ಯ ತಂತ್ರ ಹೂಡಿದ್ದರು. ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತಮ್ಮದೇ ನಿಯಂತ್ರಣದಲ್ಲಿದ್ದ ಖಾಸಗಿ ರೆಸಾರ್ಟ್‌ಗಳು ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಬುಕ್ ಮಾಡಿ, ಅಭ್ಯರ್ಥಿಗಳನ್ನು ಅಲ್ಲಿಗೆ ಕರೆತಂದು ಇರಿಸಲಾಗುತ್ತಿತ್ತು. ಜ್ಞಾನೇಂದ್ರ ಕುಮಾರ್ ಮೂಲದಿಂದ ಸೋರಿಕೆಯಾದ ಒರಿಜಿನಲ್ ಪ್ರಶ್ನೆಪತ್ರಿಕೆ ಮತ್ತು ಸಿದ್ಧಪಡಿಸಿದ ಉತ್ತರಗಳನ್ನು ಅಭ್ಯರ್ಥಿಗಳಿಗೆ ನೀಡಿ ರಾತ್ರೋರಾತ್ರಿ ಕಂಠಪಾಠ ಮಾಡಿಸಲಾಗುತ್ತಿತ್ತು. ರೆಸಾರ್ಟ್‌ನಲ್ಲೇ ಮಾಕ್ ಎಕ್ಸಾಮ್ ಬರೆಸಿ, ಪರೀಕ್ಷೆ ಎದುರಿಸುವ ತರಬೇತಿ ನೀಡಲಾಗುತ್ತಿತ್ತು. ಪರೀಕ್ಷೆಯ ದಿನ ಬೆಳಿಗ್ಗೆ ಆರೋಪಿಗಳೇ ತಮ್ಮ ಸ್ವಂತ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಬಳಿಗೆ ಕರೆತಂದು ಬಿಡುತ್ತಿದ್ದರು.

ಇದನ್ನೂ ಓದಿ: ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಾಕಿ ಹಣದ ಬಗ್ಗೆ ಡೈರಿಯಲ್ಲಿ ಬರೆದಿದ್ದ ಆರೋಪಿ ಬಸವರಾಜ್ ಕನ್ನಾಳೆ

329 ಹುದ್ದೆಗಳ ನೇಮಕಾತಿಯಲ್ಲೂ ವಂಚನೆ: ಸೌಹಾರ್ದ ಬ್ಯಾಂಕ್ ಖಾತೆಗಳ ಮೇಲೆ ಇಡಿ ಕಣ್ಣು

ಪಶುವೈದ್ಯಾಧಿಕಾರಿಗಳ 400 ಹುದ್ದೆಗಳಿಗೆ ಕೇವಲ 1,400 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕನಿಷ್ಠ ಕಟ್‌ಆಫ್ ಅಂಕಗಳನ್ನು ಪಡೆಯಲಾಗದೆ ಅನೇಕರು ಅನರ್ಹಗೊಂಡಿದ್ದರೂ, ಅಂತಿಮವಾಗಿ ಆಯ್ಕೆಯಾದ 329 ಜನರ ಪೈಕಿ ಸಿಂಹಪಾಲು ಅಭ್ಯರ್ಥಿಗಳು ಹಣ ನೀಡಿ ಅಕ್ರಮವಾಗಿಯೇ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಇಡಿ ತನಿಖೆಯಲ್ಲಿ ಸಾಬೀತಾಗಿದೆ. ಈ ಕೋಟ್ಯಂತರ ರೂಪಾಯಿ ಅಕ್ರಮ ಹಣಕಾಸಿನ ವಹಿವಾಟುಗಳು ಬೀದರ್‌ನ ಸೌಹಾರ್ದ ಸಹಕಾರಿ ಬ್ಯಾಂಕ್ ಖಾತೆಗಳ ಮೂಲಕ ನಡೆದಿರುವುದು ಪತ್ತೆಯಾಗಿದೆ. ಈ ಬ್ಯಾಂಕ್ ಖಾತೆಗಳ ಸ್ಟೇಟ್‌ಮೆಂಟ್ ಹಾಗೂ ಖಾಲಿ ಚೆಕ್‌ಗಳ ಆಧಾರದ ಮೇಲೆ ಇಡಿ ಮತ್ತು ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಅಕ್ರಮವಾಗಿ ಕೆಲಸ ಗಿಟ್ಟಿಸಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೂ ಜೈಲು ಶಿಕ್ಷೆಯ ಭೀತಿ ಎದುರಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More