
ಬೆಂಗಳೂರು, ಅಕ್ಟೋಬರ್ 07: ಪಶುವೈದ್ಯಾಧಿಕಾರಿ ನೇಮಕಾತಿ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ(KPSC)ದ ಕರ್ಮಕಾಂಡಗಳು ಬಗೆದಷ್ಟೂ ಬಯಲಾಗುತ್ತಿವೆ. ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯದ್ದು ಒಂದು ತಂಡವಾದರೆ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಕೆಲ ಸದಸ್ಯರದ್ದು ಮತ್ತೊಂದು ಟೀಂ ಆಗಿತ್ತು. ಇವರೆಲ್ಲ ಸೇರಿಕೊಂಡು ಸರ್ಕಾರಿ ಹುದ್ದೆಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂಬ ವಿಚಾರವನ್ನು ಜ್ಞಾನೇಂದ್ರರಿಂದಲೇ ಅಧಿಕಾರಿಗಳು ಬಾಯ್ಬಿಡಿಸಿದ್ದರು. ಆ ಬೆನ್ನಲ್ಲೇ ಪ್ರಕರಣದಲ್ಲಿ ಯಾವ್ಯಾವ ಆರೋಪಿಯ ಪಾತ್ರ ಏನಾಗಿತ್ತು ಎಂಬ ವಿಚಾರವೂ ಈಗ ಬಹಿರಂಗಗೊಂಡಿದೆ.
ಅಂದಿನ KPSC ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಶದಲ್ಲಿಯೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಇತ್ತು. ಆದ್ರೆ ಜನವರಿ 8 ಮತ್ತು 9ರಂದು ನಡೆದಿದ್ದ ಪರೀಕ್ಷೆಗೂ ಮುನ್ನವೇ ಅಂದರೆ ಜನವರಿ 7ರಂದು ಬಸವರಾಜ್ ಕನ್ನಾಳೆಗೆ ಪೆನ್‌ಡ್ರೈವ್ ಮೂಲಕ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ಜ್ಞಾನೇಂದ್ರ ನೀಡಿದ್ದರು. ಇದಕ್ಕಾಗಿ ಕನ್ನಾಳೆಯಿಂದ ಸುಮಾರು 1.30 ಕೋಟಿ ಹಣ ಪಡೆದಿದ್ದರು ಎಂದು ಇಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದೆ. ಅಲ್ಲದೆ ಅಕ್ರಮದ ಹಣದಲ್ಲಿ ಐಎಎಸ್ ಅಧಿಕಾರಿ ಚಿನ್ನದ ಆಭರಣ ಖರೀದಿಸಿದ್ದರು ಎಂಬುದೂ ಗೊತ್ತಾಗಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ: ಎರಡು ಟೀಂಗಳಿಂದ ನಡೆಯುತ್ತಿತ್ತು ಡೀಲ್!; ಜ್ಞಾನೇಂದ್ರ ವಿಚಾರಣೆ ವೇಳೆ ಹಲವು ಪ್ರಮುಖ ವಿಚಾರ ಬಯಲು
ಅಭ್ಯರ್ಥಿಗಳನ್ನು ಹುಡುಕಿ, ಸರ್ಕಾರಿ ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸುವುದಾಗಿ ಬಸವರಾಜ್ ಕನ್ನಾಳೆ ಭರವಸೆ ನೀಡುತ್ತಿದ್ದ. ಆರಂಭದಲ್ಲಿ ಅಭ್ಯರ್ಥಿಗೆ ಸುಮಾರು 80 ಲಕ್ಷದವರೆಗೆ ಬೇಡಿಕೆ ಇಡಲಾಗುತ್ತಿತ್ತು. ನಂತರ ಅಭ್ಯರ್ಥಿಗೆ ಅನುಗುಣವಾಗಿ 30–40 ಲಕ್ಷಕ್ಕೆ ವ್ಯವಹಾರ ಅಂತಿಮವಾಗುತ್ತಿತ್ತು. ಜ್ಞಾನೇಂದ್ರ ಸಂಪರ್ಕದ ಮೂಲಕ ಕನ್ನಾಳೆ ಪ್ರಶ್ನೆಪತ್ರಿಕೆ ಪಡೆಯುತ್ತಿದ್ದ. ಹಣ ನೀಡಿದ ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ತಲುಪಿಸಲಾಗುತ್ತಿತ್ತು. ಕೆಲವು ಅಭ್ಯರ್ಥಿಗಳಿಂದ ಖಾಲಿ ಚೆಕ್, ಪ್ರಾಮಿಸರಿ ನೋಟ್ ಕೂಡ ಪಡೆಯಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವ ಕನ್ನಾಳೆ, ಅಭ್ಯರ್ಥಿಗಳಿಗೆ ಸ್ವತಃ ಕರೆ ಮಾಡಿ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದ ವಿಚಾರ CID ತನಿಖೆ ವೇಳೆ ಬಯಲಾಗಿತ್ತು. ಕನ್ನಾಳೆ ಮತ್ತು ಆತನ ಸಹಚರರು ಹಣ ಕೊಡಲು ಸಿದ್ಧವಿರುವ ಅಭ್ಯರ್ಥಿಗಳನ್ನು ಹುಡುಕುತ್ತಿದ್ದರು. ಕೆಲ ಅಭ್ಯರ್ಥಿಗಳು ಇತರ ಮಧ್ಯವರ್ತಿಗಳ ಮೂಲಕ, ಇನ್ನು ಕೆಲವರು ನೇರವಾಗಿ ಕನ್ನಾಳೆಯ ಸಂಪರ್ಕಕ್ಕೆ ಬಂದಿದ್ದರು. ಆ ಪೈಕಿ ಹಲವು ಅಭ್ಯರ್ಥಿಗಳನ್ನು ದೇವನಹಳ್ಳಿ ಬಳಿಯ ನಾಲ್ಕು ವಿಲ್ಲಾಗಳಲ್ಲಿ ಇರಿಸಿ, ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ನೀಡಲು ಕನ್ನಾಳೆ ವ್ಯವಸ್ಥೆ ಮಾಡಿದ್ದ. ಇದಕ್ಕೆ ಪ್ರತಿಯಾಗಿ 11 ಅಭ್ಯರ್ಥಿಗಳು ಕನ್ನಾಳೆ ನೀಡಿದ ಖಾತೆಗಳಿಗೆ ಒಟ್ಟು 80 ಲಕ್ಷ ಹಣ ವರ್ಗಾವಣೆ ಮಾಡಿರುವುದನ್ನೂ CID ಪತ್ತೆ ಮಾಡಿತ್ತು. ಕನ್ನಾಳೆಯನ್ನ ರಾಜ್ಯಪಾಲರ ಅಂಕಿತದ ಮೇರೆಗೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಕೂಡ ಆಗಿದ್ದ. ಖಾಸಗಿ ಪತ್ರಿಕೆಯ ಅವಾರ್ಡ್ಗಳನ್ನು ಕೂಡ ಪಡೆದಿದ್ದ. ಟ್ರಾವಲ್ಸ್ ಉದ್ಯಮ ನಡೆಸುತ್ತಿದ್ದ ಎಂಬುದೂ ಗೊತ್ತಾಗಿತ್ತು.
ಕೆಪಿಎಸ್‌ಸಿ ಸದಸ್ಯೆ ಗೀತಾ ಅವರು ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರಾ? ಮತ್ತು ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರವೇನು ಎಂಬುದನ್ನು ಇಡಿ ತನಿಖೆ ಮಾಡುತ್ತಿದೆ. ನಿನ್ನೆ ಗೀತಾ ನಿವಾಸದ ಮೇಲೆ ದಾಳಿ ನಡೆಸಿದ್ದಇಡಿ ,ಅವರನ್ನು ಬಂಧಿಸಿದೆ. ಆದರೆ ಗೀತಾ ನಿರ್ದಿಷ್ಟವಾಗಿ ಯಾವ ಅಭ್ಯರ್ಥಿಯಿಂದ ಎಷ್ಟು ಹಣ ಪಡೆದಿದ್ದರು ಅಥವಾ ಯಾವ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Wed, 7 October 26