ಅಯ್ಯೋ ಕಂದ ಮಣ್ಣಲ್ಲಿ ಆಡಿ ಬಂದ್ಯೆನೋ? ಮುಖದ ಅಲಂಕಾರ ಏನೋ ಇದು? ನಿನ್ನ ಕಾಲಿನ ಗೆಜ್ಜೆ ನಾದ ಕೇಳಿಸುತ್ತಿಲ್ಲಲ್ವೋ? ಅಯ್ಯೋ ಪುಟ್ಟ ಕೊಳಲು ಎಲ್ಲಿದ್ಯೋ? ಕಂದಮ್ಮ ನಿಂತ ಕಡೆ ನಿಲ್ಲೋ. ಏನೋ ಪುಟ್ಟ ನಿನ್ನ ತುಂಟಾಟ. ಈ ಎಲ್ಲಾ ಸಡಗರಗಳು ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಗೆ ಮಕ್ಕಳ ಚೇಷ್ಟೆಗೆ ಅಮ್ಮಂದಿರ ಮಾತುಗಳು.
ಕೃಷ್ಣಾಷ್ಟಮಿ ಬಂತೆಂದರೆ ಅದೆಷ್ಟೋ ಸಡಗರ. ಮಗುವಿಗೆ ಕೃಷ್ಣನ ವೇಷ ಧರಿಸಿ ಖುಷಿಪಡುವ ತಾಯಂದಿರು ಮುದ್ದು ಕಂದಮ್ಮಗಳ ಚೇಷ್ಟೆಯ ಬಗ್ಗೆ ಆಡುತ್ತಾ ಸಂತೋಷ ಪಡುತ್ತಾರೆ. ಕೃಷ್ಣ ಜನ್ಮಾಷ್ಟಮಿಗೆ ವೇದಿಕೆ ಮೇಲೆ ತನ್ನ ಮಗು ಕೃಷ್ಣನ ವೇಷ ಧರಿಸಬೇಕು ಎನ್ನುವ ಆಸೆ ಬಹುಷಃ ಎಲ್ಲಾ ತಾಯಂದಿರದ್ದು. ಆದರೆ ಮಕ್ಕಳಿಗೆ ಎನೋ ಅದೊಂತರ ವರ್ಣಮಯ ಜಗತ್ತು. ಎಷ್ಟೇ ಅಲಂಕರಿಸಿದರೂ ಮಕ್ಕಳ ತುಂಟತನ, ಕಪಿಚೇಷ್ಟೆ ಅಮ್ಮನನ್ನು ಗೋಳಿಡಿಸುತ್ತದೆ.
ಪ್ರತೀ ಗಲ್ಲಿ ಗಲ್ಲಿಯಲ್ಲೂ ಕೃಷ್ಣಾ ಜನ್ಮಾಷ್ಟಮಿಗೆ ಸ್ಪರ್ಧೆ ನಡೆಯುತ್ತವೆ. ತಾಯಂದಿರು ತಮ್ಮ ಮಕ್ಕಳಿಗೆ ಧೋತಿ, ಶಾಲು, ಕಿರೀಟದ ತುತ್ತ ತುದಿಗೆ ನವಿಲಿನ ಗರಿ, ಕೈಯಲ್ಲಿ ಕೊಳಲು, ಹಣೆಗೆ ಚೆಂದನೆಯ ನಾಮ, ತುಟಿಯ ಸುತ್ತ ಬೆಣ್ಣೆ, ಆಭರಣ ರೂಪದ ಮಾಲೆ ತೊಡಿಸಿ, ಕಿವಿ ಓಲೆ, ಕೈಗೆ ಬಳೆಯ ಜತೆ ತೋಳಿಗೆ ಆಭರಣ ಹಾಕಿ ಮಗುವನ್ನು ನಾನಾ ವಿಧದಲ್ಲಿ ಶೃಂಗರಿಸುತ್ತಾರೆ. ಈ ಎಲ್ಲಾ ವೇಷಭೂಷಣಗಳು ಮಕ್ಕಳ ಮುಖದಲ್ಲಿ ಏನೋ ಒಂದು ಉಲ್ಲಾಸ ತರಿಸುತ್ತದೆ. ಆದರೆ ಕೇವಲ ಇದು ನಿಮಿಷಗಳಿಗಷ್ಟೇ ಸೀಮಿತ.
ಉಡುಗೆ ತೊಡುಗೆಗಳಿಂದ ಶೃಂಗಾರಗೊಂಡ ಶ್ರೀಕೃಷ್ಣ ಪಾತ್ರಧಾರಿ ಅಮ್ಮನ ಸಿಹಿಯಾದ ಮಾತುಗಳಿಗೆ ವೇದಿಕೆ ಮೇಲೆ ಹೋಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ತಮ್ಮ ಮಕ್ಕಳನ್ನು ವೇದಿಕೆ ಮೇಲೆ ಕಳುಹಿಸಬೇಕೆಂದರೆ ಅವರಿಗೆ ಇಷ್ಟವಾದ ತಿಂಡಿ ತಿನಸುಗಳನ್ನು ತೆಗೆದುಕೊಡುವುದರಲ್ಲಿ ಅಮ್ಮಂದಿರು ಜಾಣೆ. ಸ್ಪರ್ಧೆಗೆ ಮಕ್ಕಳು ಭಾಗವಹಿಸಿದ್ದರೂ, ತಾಯಂದಿರ ಆತಂಕ ಬಹುಮಾನದೆಡೆಗೆ. ತನ್ನ ಮಗು ಬಹುಮಾನ ಪಡೆಯಲು ತಾಯಂದಿರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ.
ಸಾಮಾಜಿಕ ಜಾಲತಾಣದತ್ತ ಮುಖಮಾಡಿದ ಸ್ಪರ್ಧೆ
ಕೊರೊನಾ ಪ್ರಾರಂಭವಾದ ದಿನದಿಂದ ತಾಯಂದಿರ ಸಂತೋಷ ಮತ್ತು ಮಕ್ಕಳ ಮುಗ್ಧತನ ಅಲ್ಲೇ ನಿಂತು ಹೋಗಿತ್ತು. ಮಕ್ಕಳು ವೇದಿಕೆ ಹತ್ತಿ ಏನೂ ಅರಿಯದೆ ಅತ್ತು, ಅಭಿನಯಿಸಿ, ನಗಿಸಿ ಹೋಗುತ್ತಿದ್ದ ಕಾಲ ಈಗ ಬದಲಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿಯೇ ಮುಗ್ಧ ಕಂದಮ್ಮಗಳ ಚೇಷ್ಟೆಯನ್ನು ಕಂಡು ನಕ್ಕವರು ಕೆಲವರಾದರೆ, ಮೊಬೈಲ್ನಲ್ಲಿ ಶೇರ್ ಮತ್ತು ಲೈಕ್ ಮಾಡಿ ಮರುಳಾದವರು ಹಲವಾರು ಮಂದಿ.
ಜಾಲತಾಣಗಳಲ್ಲಿ ಫೇಸ್ ಬುಕ್, ಇನ್ಸ್ಟಾಗ್ರಾಮ್ಗಳು ತಮ್ಮದೇ ಆದ ಕ್ರೇಜ್ ಹುಟ್ಟಿಸಿದವು. ಸಾರ್ವಜನಿಕವಾಗಿ ನಡೆಯುತ್ತಿದ್ದ ಕೃಷ್ಣ ವೇಷವು ಸಾಮಾಜಿಕ ಜಾಲತಾಣಕ್ಕೆ ಲಗ್ಗೆಯಿಟ್ಟಿತು. ಪ್ರತಿಯೊಬ್ಬರ ವಾಟ್ಸಾಪ್ ಸ್ಟೇಟಸ್ಗಳಲ್ಲೂ ಮಕ್ಕಳ ಫೋಟೋಗಳು ರಾರಾಜಿಸುತ್ತಿವೆ.
ಮಕ್ಕಳು ದೇವರಿಗೆ ಸಮಾನ. ಕೃಷ್ಣನ ಉಡುಗೆ ತೊಟ್ಟು ನನ್ನ ಮಗುವನ್ನು ನೋಡಬೇಕೆನ್ನುವುದು ಬಹುದಿನಗಳ ಬಯಕೆ. ಹಾಗಾಗಿ ಮಗಳಿಗೆ ಕೃಷ್ಣ ಪಾತ್ರಧರಿಸಿದೆ ಎಂದು ಉಜಿರೆಯ ಶರ್ಮಿತ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಈ ಟ್ರೆಂಡ್ ಲೈಕ್ಸ್ ಮತ್ತು ಶೇರ್ಗಳಿಗೆ ಮಾತ್ರ ಸೀಮಿತವಾಗಿಸಿ ಬಿಟ್ಟಿದೆ. ಕೊರೊನಾ ಕಾರಣದಿಂದ ಸಾಮಾಜಿಕ ಜಾಲತಾಣವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಮೊದಲು ನಡೆಯುತ್ತಿದ್ದ ಛದ್ಮವೇಷಕ್ಕೂ, ಈವಾಗಿನ ದಿನಕ್ಕೂ ಅಜಗಜಾಂತರ ಅಂತರವಿದೆ. ಆದರೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುವುದೇ ಚೆಂದ ಎನ್ನುತ್ತಾರೆ ತಾಯಂದಿರು.
ಈಗ ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ವೇಷಧಾರಿಯ ಪಾತ್ರ ಗಮನಸೆಳೆಯುತ್ತಿದೆ. ಎಲ್ಲರೂ ಅವರದ್ದೇ ಆದ ಪೇಜ್ಗಳನ್ನು ತಯಾರಿಸಿ, ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಆದರೆ ನಾಲ್ಕು ಮಂದಿಯ ಲೈಕ್ ಮತ್ತು ಶೇರ್ಗಳು ಮಕ್ಕಳಿಗೆ ಖುಷಿ ಕೊಡುವುದಿಲ್ಲ. ಅವರ ತುಂಟಾಟ, ಪ್ರತಿಭೆ ವೇದಿಕೆಯಲ್ಲಿ ಅನಾವರಣಗೊಂಡರೆ ಮಾತ್ರ ಚೆಂದ.
ಕೃಷ್ಣಧಾರಿಯಾಗಿ ತಯಾರಾದ ಮಕ್ಕಳ ಫೋಟೋ ಕ್ಲಿಕ್ಕಿಸಿ, ಜಾಲತಾಣಗಳಲ್ಲಿ ಹರಿಬಿಡುವವರೆ ಈಗ ಹೆಚ್ಚು. ಆದರೆ ಕೇವಲ ಕೃಷ್ಣ ಅಲಂಕಾರವನ್ನು ಹಾಕಿ, ಲೈಕ್ – ಕಮೆಂಟ್ಗಳಿಗೆ ಸೀಮಿತವಾಗಿರಿಸದೆ. ಕೃಷ್ಣನ ಲೀಲೆಗಳನ್ನು ಮಕ್ಕಳಿಗೆ ಭೋದಿಸಬೇಕು. ಕೃಷ್ಣ ಸ್ತೋತ್ರವನ್ನು ಮಕ್ಕಳ ಜೀವನದಲ್ಲಿ ಅಳವಡಿಸುವಂತೆ ತಾಯಂದಿರು ತಿಳಿಹೇಳಬೇಕು ಎಂಬುವುದು ಕೂಡ ಅಷ್ಟೇ ಮುಖ್ಯ.
ವರದಿ: ವೈಶಾಲಿ ಶೆಟ್ಟಿ, ಪೂವಾಳ
Krishna Janmashtami 2021 ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ಸಂಗತಿಗಳು