ಬೆಂಗಳೂರಲ್ಲೂ ರಸ್ತೆಗಿಳಿದ ಡಬಲ್​​ ಡೆಕ್ಕರ್​​ ಬಸ್​​ಗಳು: ಟಿಕೆಟ್​​ ದರ, ಬುಕ್ಕಿಂಗ್​​ ಕುರಿತ ಮಾಹಿತಿ ಇಲ್ಲಿದೆ

ಬೆಂಗಳೂರಿನಲ್ಲಿ ಕೆಎಸ್‌ಟಿಡಿಸಿ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸಿದೆ. ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ಐಷಾರಾಮಿ ಬಸ್‌ಗಳು ಉತ್ತಮ ಅವಕಾಶ ಒದಗಿಸಿದ್ದು, ಒಮ್ಮೆ ಟಿಕೆಟ್​​ ಪಡೆದು ದಿನವಿಡೀ ಪ್ರಯಾಣಿಸಬಹುದಾಗಿದೆ. ರವೀಂದ್ರ ಕಲಾಕ್ಷೇತ್ರದಿಂದ ಹೊರಟು ಹಲವು ಐತಿಹಾಸಿಕ ಸ್ಥಳಗಳನ್ನು ಹಾದುಹೋಗುವ ಈ ಬಸ್​​ನಲ್ಲಿ ಸಂಚರಿಸಲು ಬುಕಿಂಗ್​ ಮಾಡೋದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಲ್ಲೂ ರಸ್ತೆಗಿಳಿದ ಡಬಲ್​​ ಡೆಕ್ಕರ್​​ ಬಸ್​​ಗಳು: ಟಿಕೆಟ್​​ ದರ, ಬುಕ್ಕಿಂಗ್​​ ಕುರಿತ ಮಾಹಿತಿ ಇಲ್ಲಿದೆ
ಡಬಲ್​​ ಡೆಕ್ಕರ್​​ ಬಸ್​​ ಸಂಚಾರಕ್ಕೆ ಚಾಲನೆ
Edited By:

Updated on: Jan 22, 2026 | 3:55 PM

ಬೆಂಗಳೂರು, ಜನವರಿ 22: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್‌ ಮಾದರಿಯ ಬಸ್‌ ಸೇವೆ ನೀಡಲು ಕೆಎಸ್‌ಟಿಡಿಸಿ ಮುಂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದ್ದು, ಅದಾಗಲೇ ಅವುಗಳಿಗೆ ಚಾಲನೆಯೂ ಸಿಕ್ಕಿದೆ. ಬೆಂಗಳೂರಿನ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಸ್​​ಗಳ ಓಡಾಟ ಆರಂಭಿಸಲಾಗಿದ್ದು, ಐಷಾರಾಮಿ ಬಸ್​​ನಲ್ಲಿ ಕೂತು ನಗರದ ಅಂದ ಆಸ್ವಾಧಿಸುವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.

ಬಸ್​​ನ ವಿಶೇಷತೆ ಏನು?

ಡಬಲ್​​ ಡೆಕ್ಕರ್​​ ಹೊಂದಿರುವ ಈ ಬಸ್​​ನಲ್ಲಿ ಐಷಾರಾಮಿ ಆಸನಗಳು, ಮೈಕ್ ಸಿಸ್ಟಂ ವ್ಯವಸ್ಥೆಗಳಿವೆ. ಹವಾನಿಯಂತ್ರಣ ಸೌಲಭ್ಯ ಹೊಂದಿರುವ ಬಸ್‌ನ ಲೋವರ್‌ ಡೆಕ್‌ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್‌ ಅಪ್ಪರ್‌ ಡೆಕ್‌ನಲ್ಲಿ20 ಆಸನಗಳಿವೆ. ಜೊತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಪರಿಚಯಿಸಲು ಮೈಕ್‌ ಸಿಸ್ಟಂ ಕೂಡ ಅಳವಡಿಸಲಾಗಿದೆ.

ಇದನ್ನೂ ಓದಿ:  ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​; KSTDC ವಿಶೇಷ ಪ್ಯಾಕೇಜ್

ಬಸ್​​ ಸಂಚರಿಸುವ ಮಾರ್ಗ

ರವೀಂದ್ರ ಕಲಾಕ್ಷೇತ್ರದಿಂದ ಬಸ್​​ ಸಂಚಾರ ಆರಂಭವಾಗಲಿದ್ದು ಕಾರ್ಪೊರೆಷನ್‌ ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್‌ / ವಿಧಾನಸೌಧ, ಕೆ.ಆರ್‌. ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಾರ್ಪೊರೇಷನ್‌ ಸರ್ಕಲ್‌ ಮಾರ್ಗವಾಗಿ ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಬರಲಿದೆ.

ಟಿಕೆಟ್​​ ದರ ಎಷ್ಟು?

ಡಬ್ಬಲ್​​ ಡೆಕ್ಕರ್​​ ಬಸ್​​ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಲಾ 180 ರೂ. ಟಿಕೆಟ್​​ ದರ ಇರಲಿದೆ. ಒಮ್ಮೆ ಹಣ ಪಾವತಿಸಿ ಬ್ಯಾಂಡ್‌ ಪಡೆದರೆ ದಿನವಿಡೀ ಎಷ್ಟು ಬಾರಿಯಾದರೂ ಯಾವುದೇ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಸಂಚರಿಸಬಹುದು. ಆದರೆ ಬ್ಯಾಂಡ್​​ನ ಇತರರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ಬ್ಯಾಂಡ್‌ ಹರಿದು ಹೋದರೆ ಮತ್ತೆ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಬಸ್‌ಗಳು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಸಂಚಾರ ನಡೆಸಲಿವೆ.

ಟಿಕೆಟ್​ ಬಯಕ್ಕಿಂಗ್​​ ಹೇಗೆ?

ಕೆಎಸ್‌ಟಿಡಿಸಿ ವೆಬ್‌ಸೈಟ್‌ ವಿಳಾಸ: www.kstdc.co ಅಥವಾ ದೂರವಾಣಿ ಸಂಖ್ಯೆ 080 4334 4334/35 ಅಥವಾ ಮೊಬೈಲ್​​ ಸಂಖ್ಯೆ 8970650070/8970650075 ಮೂಲಕ ಡಬಲ್‌ ಡೆಕ್ಕರ್‌ ಬಸ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.