Leopard Attack: ಅಧಿವೇಶದದಲ್ಲಿ ಪ್ರತಿಧ್ವನಿಸಿದ ಚಿರತೆ ಹಾವಳಿ, ಮಂಡ್ಯದಲ್ಲಿ 410 ಪ್ರಕರಣ ದಾಖಲು, ಕ್ರಮ ಕೈಗೊಳ್ಳದ ಸರ್ಕಾರ: ರವೀಂದ್ರ ಶ್ರೀಕಂಠಯ್ಯ

|

Updated on: Feb 21, 2023 | 3:18 PM

ಚಿರತೆ ಹಾವಳಿ ಬಜೆಟ್​ ಅಧಿವೇಶದ ಪ್ರಶ್ನೋತ್ತರ ವೇಳೆ ಪ್ರತಿಧ್ವನಿಸಿತು. ಪ್ರಶ್ನೋತ್ತರ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಚಿರತೆ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಚಿರತೆ (Leopard) ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ. ಪದೆ ಪದೆ ಚಿರತೆ ದಾಳಿಯಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಾಗಿ ಚೆರತೆಗಳು ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದು, ಕಬ್ಬು ಕಟಾವಿನ ವೇಳೆ ದಾಳಿ ಮಾಡುತ್ತವೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ. ಮೊದಲೇ ಕಬ್ಬು ಕಟಾವಿಗೆ ಕೂಲಿ ಆಳುಗಳು ಸಿಗುತ್ತಿಲ್ಲ ಎಂದು ರೈತರು ಪರದಾಡುತ್ತಿದ್ದು, ಈಗ ಚಿರತೆ ದಾಳಿಯಿಂದ ಕಟಾವು ಮಾಡಲು ಕೂಲಿ ಕಾರ್ಮಿಕರು ಮುಂದೆ ಬರುತ್ತಿಲ್ಲ. ಈ ಚಿರತೆ ಹಾವಳಿ ಬಜೆಟ್​ ಅಧಿವೇಶದ (Budget Session) ಪ್ರಶ್ನೋತ್ತರ ವೇಳೆ ಪ್ರತಿಧ್ವನಿಸಿತು. ಪ್ರಶ್ನೋತ್ತರ ವೇಳೆ ಶ್ರೀರಂಗಪಟ್ಟಣ (Srirangapatna) ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಚಿರತೆ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ: ಚಿರತೆ ಹಾವಳಿ ತಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾತಿ ಅವರು ಹೇಳಿದ್ದಾರೆ. ಆದರೂ ರೈತರು ಹೊಲ ಗದ್ದೆಗಳಿಗೆ ಹೋದಾಗ ಚಿರತೆ ದಾಳಿ ಮಾಡುತ್ತಿದೆ. ಮಂಡ್ಯ ಜಿಲ್ಲೆಯಲ್ಲೇ ಚಿರತೆ ಹಾವಳಿಯ 410 ಪ್ರಕರಣ ದಾಖಲಾದರೂ ಕ್ರಮ ತೆಗೆದುಕೊಂಡಿಲ್ಲ. ಮಕ್ಕಳನ್ನು ಹೊರಗಡೆ ಬಿಡದಿರುವ ಪರಿಸ್ಥಿತಿ ಇದೆ ಎಂದು ಪ್ರಶ್ನಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರ: ಚಿರತೆ ಮರಿ ಹಾಕಿದ ಮೇಲೆ ಟಚ್ ಮಾಡಲು ಹೋದರೇ ಅಟ್ಯಾಕ್ ಮಾಡುತ್ತಿದೆ. ಸಾಮಾನ್ಯವಾಗಿ ಹಳ್ಳಿಗಳ ಪಕ್ಕದಲ್ಲೇ ಚಿರತೆ ವಾಸ ಮಾಡುವುದು. ಚಿರತೆ ಸೆರೆಗೆ 63 ಜನರ ಟಾಸ್ಕ್​​ಫೋರ್ಸ್ ರಚನೆ ಮಾಡಿದ್ದೇವೆ. ಅದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ಚಿರತೆ ದಾಳಿಗೊಳಗಾದವರಿಗೆ ಪರಿಹಾರ ನೀಡಲಾಗುತ್ತಿದೆ. ಕಾನೂನಿನಡಿ ಚಿರತೆಗಳನ್ನು ಶೂಟ್ ಮಾಡುವುದಕ್ಕೂ ಸಾಧ್ಯವಿಲ್ಲ. ಚಿರತೆಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತೇವೆ ಎಂದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ: ಬೈಕ್​​ಗಳಿಗೆ ಚಿರತೆ ಡಿಕ್ಕಿ ಹೊಡೆದು ಸಾಯುತ್ತಿವೆ ಅಂತ ಹೇಳಲೂ ಹೆದರುವಂತಾಗಿದೆ. ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರೂ ಇಲ್ಲ. ನಾವ್ಯಾರಿಗೆ ಹೇಳಬೇಕು ಅಂತ ಪ್ರಶ್ನೆ ಮಾಡಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ: ಉಸ್ತುವಾರಿ ಸಚಿವರನ್ನು ನೇಮಿಸಿದರೇ ಚಿರತೆ ಹಿಡಿಯಲು ಹೋಗುತ್ತಾರಾ ಎಂದು ಕಾಲೆಳೆದರು. ​

ಶಾಸಕ ರವೀಂದ್ರ ಶ್ರೀಕಂಠಯ್ಯ: ದಯಮಾಡಿ ಬೆಳಗ್ಗೆ ಸಮಯದಲ್ಲಿ ವಿದ್ಯುತ್ ನೀಡಿ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ: ಬೆಳಗಿನ ಜಾವ ವಿದ್ಯುತ್ ಪೂರೈಸಿ ಅಂತ ಇಂಧನ ಸಚಿವ ಸುನಿಲ್ ಕುಮಾರ್‌ ಸೂಚಿಸಿದರು.

Published On - 3:17 pm, Tue, 21 February 23