ಪೆರೋಲ್ ಮೇಲೆ ಹೊರಬಂದು ನಾಪತ್ತೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಜೀವಾವಧಿ ಕೈದಿ 8 ವರ್ಷದ ಬಳಿಕ ಸೆರೆ

ಎಂಟು ವರ್ಷದಿಂದ ತಲೆ ಮರೆಸಿಕೊಂಡಿದ್ದ ಪಾವಗಡ ಮೂಲದ ಜೀವಾವಧಿ ಕೈದಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಪರಪ್ಪನ ಅಗ್ರಹಾರ ಪೊಲೀಸರು ಎಂಟು ವರ್ಷದ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಜೀವಾವಧಿ ಕೈದಿ 2018ರಲ್ಲಿ ತಾಯಿಗೆ ಅನಾರೋಗ್ಯ ಅಂತಾ ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ.

ಪೆರೋಲ್ ಮೇಲೆ ಹೊರಬಂದು ನಾಪತ್ತೆ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಜೀವಾವಧಿ ಕೈದಿ 8 ವರ್ಷದ ಬಳಿಕ ಸೆರೆ
ನರಸಿಂಹರೆಡ್ಡಿ
Edited By:

Updated on: Oct 18, 2026 | 2:55 PM

ಮುಖ್ಯಾಂಶಗಳು

  • ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿ ಬಂಧನ
  • ಪಾವಗಡ ಮೂಲದ ನರಸಿಂಹರೆಡ್ಡಿ(56) ಸೆರೆ
  • ಆಂಧ್ರದ ಅನಂತಪುರದಲ್ಲಿ ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು

ಬೆಂಗಳೂರು, ಅಕ್ಟೋಬರ್​​ 18: ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾವಗಡ ಮೂಲದ ನರಸಿಂಹರೆಡ್ಡಿ(56) ಬಂಧಿತ ಕೈದಿ. ಪೆರೋಲ್ ಮೇಲೆ ಹೊರಬಂದು 8 ವರ್ಷದಿಂದ ನರಸಿಂಹರೆಡ್ಡಿ ತಲೆ ಮರೆಸಿಕೊಂಡಿದ್ದ, ಇದೀಗ ಕೊನೆಗೂ ಬಂಧಿಸಲಾಗಿದೆ.

ಮನೆಯೊಂದಕ್ಕೆ ನುಗ್ಗಿ ಕೊಲೆ ಮಾಡಿ ಚಿನ್ನ ದೋಚಿದ್ದ ನರಸಿಂಹರೆಡ್ಡಿ 

2013ರಲ್ಲಿ ಪಾವಗಡದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ನರಸಿಂಹರೆಡ್ಡಿ ಮಾಲೀಕರನ್ನು ಕೊಂದು ಚಿನ್ನ ದೋಚಿದ್ದ. ಮನೆಕೆಲಸದಾಕೆ ರಮಾ ಸೇರಿ 4ರಿಂದ 5 ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ ಕೋರ್ಟ್‌ ಜೀವವಾಧಿ ಶಿಕ್ಷೆ ವಿಧಿಸಿತ್ತು.

Loading...

ಮಾರುವೇಷದಲ್ಲಿ ಅಪರಾಧಿಗಾಗಿ ಶೋಧ ನಡೆಸಿದ್ದ ಪೊಲೀಸರು 

ತದನಂತರ 2018ರಲ್ಲಿ ತಾಯಿಗೆ ಅನಾರೋಗ್ಯ ಅಂತಾ ಪೆರೋಲ್‌ ಪಡೆದು ತೆರಳಿದ್ದ. ಆದರೆ ಜೈಲಿಗೆ ವಾಪಸ್​ ಆಗದೇ ತಲೆಮರೆಸಿಕೊಂಡಿದ್ದ. ಅಪರಾಧಿಗಾಗಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. ತರಕಾರಿ ವ್ಯಾಪಾರಿ, ಕೂಲಿ ಕಾರ್ಮಿಕರ ವೇಷದಲ್ಲಿ ಅಪರಾಧಿಗಾಗಿ ಹತ್ತಾರು ದಿನ ಆಂಧ್ರಪ್ರದೇಶದಲ್ಲಿದ್ದು ಪೊಲೀಸರು ಶೋಧ ಮಾಡಿದ್ದರು. ಆಗಲೂ ಸುಳಿವು ಸಿಕ್ಕಿರಲಿಲ್ಲ, ಲುಕ್‌ಔಟ್‌ ನೋಟಿಸ್‌ ಕೂಡ ಹೊರಡಿಸಲಾಗಿತ್ತು. ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಸಹ ಘೋಷಿಸಲಾಗಿತ್ತು.

ಹೆಸರು ಬದಲಿಸಿಕೊಂಡಿದ್ದ ಆರೋಪಿ: ಪೊಲೀಸರಿಗೆ ದೊಡ್ಡ ಸವಾಲು 

ಇನ್ನು ನರಸಿಂಹರೆಡ್ಡಿ ಮೊಬೈಲ್‌ ಫೋನ್ ಅಥವಾ ಆಧಾರ್‌ ಕಾರ್ಡ್‌ ಸಹ ಇಟ್ಟುಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ತನ್ನ ಹೆಸರನ್ನು ಶ್ರೀನಿವಾಸರೆಡ್ಡಿ ಎಂದು ಬದಲಿಸಿಕೊಂಡಿದ್ದ. ಇತ್ತೀಚೆಗೆ ನಡೆದ ಮಗಳ ಮದುವೆಗೂ ಈತ ಹಾಜರಾಗಿರಲಿಲ್ಲ. ಹೀಗಾಗಿ ಈತನನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

ಇದನ್ನೂ ಓದಿ: ಪರಪ್ಪನ ಅಗ್ರಹಾರದ ಒಳಗೆ ಹಣ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ ಮಹಿಳಾ ವಿಚಾರಣಾಧೀನ ಕೈದಿ!

ಆರೋಪಿಯನ್ನ ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿತ್ತು. ಹೀಗಿರುವಾಗ ಸ್ವಂತ ಊರಾದ ಕನ್ನಂಪಲ್ಲಿಯ ಆಸ್ಪತ್ರೆಗೆ ನರಸಿಂಹರೆಡ್ಡಿ ಬಂದಿರುವ ಮಾಹಿತಿ ಸಿಗುತ್ತದೆ. ಕೂಡಲೇ ಅಲರ್ಟ್​​ ಆದ ಪೊಲೀಸರು ಆಸ್ಪತ್ರೆಗೆ ತೆರಳಿ ಆತನನ್ನು ಬಂಧಿಸುವಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us