ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕೆಲವೇ ದಿನ ಬಾಕಿ ಇದ್ದು, ಅಕ್ರಮ ನಗದು, ಮದ್ಯ ಹಾಗೂ ಇತರ ವಸ್ತುಗಳ ಸಾಗಾಟಕ್ಕೆ ತಡೆಯೊಡ್ಡುವ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಮಾರ್ಚ್ 29ರಂದು ಚುನಾವಣೆ ಘೋಷಣೆಯಾಗಿದ್ದು ನೀತಿಸಂಹಿತೆಯೂ ಜಾರಿಗೆ ಬಂದಿದೆ. ನೀತಿಸಂಹಿತೆ ಜಾರಿಗೆ ಬಂದ ನಂತರ ಈವರೆಗೆ ಬೆಂಗಳೂರಿನ 816 ಕಡೆ ದಾಳಿ ನಡೆಸಿ 3.77 ಕೋಟಿ ಲೀಟರ್ ಐಎಂಎಲ್ ಮದ್ಯ, 2.85 ಕೋಟಿ ಲೀಟರ್ ಬಿಯರ್ ವಶಕ್ಕೆ (Liquor Seize) ಪಡೆಯಲಾಗಿದೆ. ಒಟ್ಟು 700 ಪ್ರಕರಣ ದಾಖಲಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮ ಮದ್ಯ ಸಾಗಣೆಗೆ ಬಳಸಿದ್ದ 30 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣಾ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸರು 2,514 ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಈವರೆಗೆ 69,847 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಸಿಆರ್ಪಿಸಿ ಕಾಯ್ದೆಯಡಿ 5,583 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 10,297 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. 15,944 ಜಾಮೀನು ರಹಿತ ವಾರಂಟ್ಗಳನ್ನು ಜಾರಿಗೊಳಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ