Karnataka News Live: 2024ರ ಲೋಕಸಭಾ ಚುನಾವಣೆಯಲ್ಲಿ(Lok Sabha Election 2024)ಬಿಜೆಪಿಗೆ ಟಕ್ಕರ್ ಕೊಡಲು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಕಟ್ಟಿಹಾಕಲು ಕಾಂಗ್ರೆಸ್(Congress) ರಣತಂತ್ರ ಹೆಣೆಯುತ್ತಿದೆ. ಈ ಬಗ್ಗೆ ಸಭೆ ನಡೆಸಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಸಭೆಯಲ್ಲಿ ಖರ್ಗೆ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಬೆಳಗ್ಗೆ 11.10ರಿಂದ 6 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ತ್ರಿಕೂಟ ಸಭೆಯ ನಿರ್ಣಯ ಬಗ್ಗೆ ಘೋಷಣೆ ಮಾಡಲಿದ್ದಾರೆ. ಜೊತೆಗೆ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಂಜೆ 7 ಗಂಟೆಗೆ ಸಂಪುಟ ಸಭೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಕರಾವಳಿ (Coastal) ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshin Kannada), ಉಡುಪಿ (Udupi) ಮತ್ತು ಉತ್ತರ ಕನ್ನಡ (Uttar Kannada) ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ (ಜು.18, 19) ರಂದು ಭಾರಿ ಮಳೆಯಾಗಲಿದ್ದು (Rain) ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ದೆಹಲಿ ಪ್ರವಾಸ ಮುಂದೂಡಿಕೆಯಾಗಿದೆ. ಹಿಂದಿನ ಯೋಜನೆಯಂತೆ ದೇವೇಗೌಡ ಅವರು ನಾಳೆ ದೆಹಲಿಗೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದ ನಾಳೆ ಬದಲು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ವಿಶೇಷ ಸಂಪುಟ ಸಭೆ ನಡೆಸಿದರು. ಈ ವೇಳೆ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ 2023ಕ್ಕೆ ಸಂಪುಟದಲ್ಲಿ ಅನುಮೋದನೆ ಪಡೆಯಿತು. ಸದನದಲ್ಲಿ ಮೋಟಾರು ವಾಹನ ತಿದ್ದುಪಡಿ ವಿಧೇಯಕ-2023 ಮಂಡಿಸಲು ಅನುಮತಿ ದೊರೆತಿದೆ.
ವಿಧಾನಸಭೆ: ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರಿಗೆ ಹಣ ಬಿಡುಗಡೆ ಬಗ್ಗೆ ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥ್ ನಾರಾಯಣ ಪ್ರಸ್ತಾಪ ಮಾಡಿದರು. ಈ ವೇಳೆ ಅಶ್ವಥ್ ನಾರಾಯಣ ಸಾಹೇಬರು ಕೊಟ್ಟ ಸಲಹೆ ಪರಿಗಣಿಸುತ್ತೇನೆ ಎಂದು ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸಂಕ್ಷಿಪ್ತ ಉತ್ತರ ನೀಡಿದರು. ಈ ವೇಳೆ ಕುಳಿತಲ್ಲೇ ಏನು ಹೀಗೆ ಉತ್ತರ ನೀಡಿದ್ರಲ್ಲಾ ಎಂದು ಅಶ್ವಥ್ ನಾರಾಯಣ ಅವರು ಕೈ ತಿರುಗಿಸಿ ನಕ್ಕರು. ನಾನು 30 ವರ್ಷದಿಂದ ಇಲ್ಲಿ ಇದ್ದೇನೆ, ಹೇಗೆ ಉತ್ತರ ಕೊಡಬೇಕು ಅಂತಾ ನನಗೆ ಗೊತ್ತಿಲ್ವಾ ಎಂದು ಡಿಸಿಎಂ ಕಿಚಾಯಿಸಿದರು. ಆಗ ನಾನು ಹೆಚ್ಚು ಚರ್ಚೆ ಆಗಬಹುದು ಎಂದು ವಿಷಯವನ್ನು ಕೊನೆಯಲ್ಲಿ ಇಟ್ಟಿದ್ದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ವಿಧಾನಸಭೆ: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವಂತೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಪ್ರಸ್ತಾಪ ಮಾಡಿದರು. ತುಳು ಭಾಷೆಯಲ್ಲೇ ಮಾತನಾಡುತ್ತಾ ಸರ್ಕಾರದ ಗಮನ ಸೆಳೆದರು. ಇದಕ್ಕೆ ಸ್ಪೀಕರ್ ಯುಟಿ ಖಾದರ್ ಅವರು ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡಿದರು. ಈ ವೇಳೆ ತುಳುವಿನಲ್ಲೇ ಮಾತಾಡಲು ಮುಂದಾದ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಕನ್ನಡದಲ್ಲೇ ಮಾತನಾಡಿ ಎಂದು ಸೂಚಿಸಿದರು. ಬಳಿಕ ಕನ್ನಡ ಮತ್ತು ತುಳುವಿನಲ್ಲಿ ಮಾತನಾಡಿದರು. ಈ ವೇಳೆ ಮಾತನಾಡಿದ ರಾಯರೆಡ್ಡಿ, ತುಳು ಭಾಷೆ ಮಾತನಾಡುವುದಕ್ಕೆ ನಮ್ಮ ವಿರೋಧ ಇಲ್ಲ, ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದರು. ಅಲ್ಲದೆ, ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು. ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸ್ಪೀಕರ್ ಹೇಳಿದರು. ವರದಿ ಪಡೆದು ಪರಿಶೀಲನೆ ಮಾಡುವುದಾಗಿ ಶಿವರಾಜ ತಂಗಡಗಿ ಹೇಳಿದರು.
ದೇವನಹಳ್ಳಿ: ರಾಷ್ಟ್ರೀಯ ವಿಪಕ್ಷ ನಾಯಕರು ಮಹಾಘಟ್ಬ ಬಂಧನ್ ಸಭೆ ಮುಗಿಸಿ ದೆಹಲಿಗೆ ತೆರಳುತ್ತಿದ್ದಾರೆ. ವಿಮಾನ ನಿಲ್ದಾಣದ ಬಳಿ ಮಾತನಾಡಿದ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಭಯ ಆಗುತ್ತಿದೆ. ಆದ್ದರಿಂದ ದೆಹಲಿಯಲ್ಲಿ ಎನ್‌ಡಿಎ ಮೀಟಿಂಗ್ ನಡೆಸಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಮಿತ್ರ ಪಕ್ಷಗಳ ಮಹಾಘಟಬಂಧನ್ಗೆ ಜಯವಾಗಲಿದೆ ಎಂದರು.
ವಿಧಾನಪರಿಷತ್ ಸದಸ್ಯರಿಗೆ 2021-2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿದೆ. 2021 ಸಾಲಿನಲ್ಲಿ ಎಸ್ ಆರ್ ಪಾಟೀಲ್, 2022 ನೇ ಸಾಲಿನಲ್ಲಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಭಾಪತಿ ಬಸವರಾಜ್ ಹೊರಟ್ಟಿ, ಸಭಾ ನಾಯಕ ಬೋಸರಾಜ್, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅನೇಕ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.
ವಿಧಾನಸಭೆ: ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಂಕಿ ಅಂಶಗಳನ್ನು ಹೇಳಲು ಮುಂದಾದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಜಿಎಸ್ಟಿ ಹಣ ಪೂರ್ಣ ಕರ್ನಾಟಕಕ್ಕೇ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಹೆಚ್ಚು ತೆರಿಗೆ ಪಾವತಿ ಆಗುತ್ತದೆ, ಹಾಗಾದರೆ ನೀವು ಬೆಂಗಳೂರಿನ ಹಣ ಬೆಂಗಳೂರಿಗೆ ಕೊಡುತ್ತೀರಾ ಎಂದು ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ಪ್ರಶ್ನಿಸಿದರು. ಈ ವೇಳೆ ನರೇಂದ್ರಸ್ವಾಮಿ ಮತ್ತು ಅಶ್ವಥ್ ನಾರಾಯಣ ನಡುವೆ ತೀವ್ರ ಜಟಾಪಟಿ ನಡೆಯಿತು. ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಗುತ್ತಿದ್ದಂತೆ ಸ್ಪೀಕರ್ ಖಾದರ್ ಅವರು ಶಾಸಕರಿಗೆ ಬುದ್ದಿ ಹೇಳಿದರು. ಅವರಿಗೆ ಖುಷಿ ಆಗುವ ವಿಷಯ ಹೇಳಿ ಮಾರಾಯಾ, ಬೇಸರ ಆಗುವ ವಿಷಯ ಹೇಳಬೇಡಿ ಎಂದು ವೇದವ್ಯಾಸ ಕಾಮತ್ಗೆ ಸ್ಪೀಕರ್ ಸೂಚಿಸಿದರು. ಒಂದು ಪೇಜ್ಗೆ ಹೀಗೆ ಆದರೆ ನನಗೆ ಇಲ್ಲಿ 38 ಪೇಜ್ ಇದೆ ಹೇಳಲು ಎಂದು ವೇದವ್ಯಾಸ ಕಾಮತ್ ತಿಳಿಸಿದರು. ನಿಮ್ಮ 38 ಪೇಜ್ ಅವರು ಕೇಳಲು ನಾನು ಬ್ಯಾಂಕ್ವೆಟ್ ಹಾಲ್ನಲ್ಲಿ ಮೀಟಿಂಗ್ ಇಟ್ಟುಕೊಳ್ಳುತ್ತೇನೆ ಎಂದರು. ನಾನು ಸವಾಲು ಸ್ವೀಕರಿಸುತ್ತೇನೇ, ಅಂಕಿ ಅಂಶ ಸುಳ್ಳು ಆದರೆ ನೀವು ಆಕ್ಷನ್ ತೆಗೆದುಕೊಳ್ಳಿ ಎಂದು ವೇದವ್ಯಾಸ ಕಾಮತ್ ಸವಾಲೆಸೆದರು. ಈ ವೇಳೆ ಸಿಟ್ಟಿಗೆದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗೌಡರನ್ನು ಕುಳಿತುಕೊಳ್ಳುವಂತೆ ಹೇಳಿ ಹೇಳಿ ಸ್ಪೀಕರ್ ಸುಸ್ತಾದರು.
ವಿಧಾನಸಭೆ: ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಇದಕ್ಕೆ ಆಡಳಿತ ಪಕ್ಷ ಕಾಂಗ್ರೆಸ್ನಿಂದ ಆಕ್ಷೇಪ ವ್ಯಕ್ತವಾಯಿತು. ಆಡಳಿತ ಪಕ್ಷದ ಆಕ್ಷೇಪಕ್ಕೆ ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವೇಳೆ ಬೇಗ ಚರ್ಚೆ ಮುಗಿಸಿ ಎಂದು ವೇದವ್ಯಾಸ ಕಾಮತ್ ಅವರಿಗೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಹೆಚ್ಚು ಸಮಯ ಕೊಟ್ಟಿದ್ದೀರಿ, ನನಗೂ ಕೊಡಿ ಎಂದು ವೇದವ್ಯಾಸ ಕಾಮತ್ ಹೇಳಿದರು. ನಾರಾಯಣಸ್ವಾಮಿ ಮೂರನೇ ಬಾರಿಗೆ ಶಾಸಕ, ನೀವು ಎರಡನೇ ಬಾರಿಗೆ ಶಾಸಕ ಎಂದು ಸ್ಪೀಕರ್ ಹೇಳಿದರು. 2028ಕ್ಕೂ ನಾನೇ ಗೆದ್ದು ಬರುತ್ತೇನೆ ಎಂದು ಟಾಂಗ್ ಕೊಟ್ಟರು.
ಬೆಂಗಳೂರು: ದೇಶದ ಜನರ ಧ್ವನಿ ಅಡಗುಸುತ್ತಿರುವವರ ವಿರುದ್ಧವೇ ನಮ್ಮ ಸಮರವಾಗಿದೆ. ಇದಕ್ಕಾಗಿ ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಯುದ್ದ ಇಂಡಿಯಾ ಮತ್ತು ಎನ್‌ಡಿಎ ನಡುವೆ ನಡೆಯಲಿದೆ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದಾಹೊದೆ. ಇಂಡಿಯಾ ವಿರುದ್ದ ಯಾರೇ ಸಮರ ಸಾರಿದರೂ ಅದರ ಪರಿಣಾಮ ಏನಾಗುತ್ತೆ ನಿಮಗೇ ಗೊತ್ತು ಎಂದರು.
ಬೆಂಗಳೂರು: ಬಿಜೆಪಿ ಸಿದ್ಧಾಂತದ ವಿರುದ್ಧವೇ ನಮ್ಮ ಹೋರಾಟ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದು ವಿಪಕ್ಷ, ಬಿಜೆಪಿ ವಿರುದ್ಧ ನಡೆಯುತ್ತಿರುವ ಹೋರಾಟವಲ್ಲ. ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ವಿರುದ್ಧ ಹೋರಾಟ ಎಂದರು.
ಬೆಂಗಳೂರು: ಬಿಜೆಪಿ ಸರ್ಕಾರದ ದೌರ್ಬಲ್ಯ ಎತ್ತಿಹಿಡಿಯುವ ಕೆಲಸ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎನ್‌ಡಿಎ ಸಭೆಯಲ್ಲಿ ಪಾಲ್ಗೊಂಡು ಕೆಲವು ಪಕ್ಷಗಳ ಹೆಸರು ಚುಣಾವಣಾ ಆಯೋಗದಲ್ಲಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದಾರೆ. ಅವರ ಜೊತೆಗಿರೋ ಪಕ್ಷಗಳು ತುಕಡೇ ತುಕಡೇ ಆಗಿವೆ. ವಿಪಕ್ಷಗಳ ಸಭೆ ಮಾಡೋದನ್ನ ನೋಡಿ ಮೋದಿಗೆ ಭಯವಾಗಿದೆ. ಹೀಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು: ಎನ್‌ಡಿಎ ಸಭೆಯನ್ನು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ಎನ್‌ಡಿಎ ಮೈತ್ರಿಕೂಟದಲ್ಲಿ 30 ಪಕ್ಷಗಳಿವೆ, ಅದರ ಹೆಸರು ಗೊತ್ತಿಲ್ಲ. ಸದ್ಯ ತುಕುಡೆ ತುಕುಡೆಯಾಗಿರುವ ಮೈತ್ರಿ ಪಕ್ಷಗಳನ್ನು ಒಂದು ಮಾಡಲು ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ಸಂವಿಧಾನ ನಾಶ ಮಾಡಲಿ ಹೊರಟಿದ್ದಾರೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆಮಾಡಿಕೊಂಡು ವಿಪಕ್ಷಗಳ ವಿರುದ್ದ ಆಯುಧವಾಗಿ ಬಳಸುತ್ತಿದ್ದಾರೆ. ದೇಶದ ರಕ್ಷಣೆ ನಮ್ಮ ಹೊಣೆ ಅದೇ ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದರು.
ಬೆಂಗಳೂರು: ಇದು ಅತ್ಯಂತ ಪ್ರಮುಖ ಸಭೆ ಆಗಿತ್ತು. ಪ್ರಜಾಪ್ರಭುತ್ವ ರಕ್ಷಣೆಗೆ ದೇಶದ ಜನರ ರಕ್ಷಣೆಗೆ ಅತ್ಯಗತ್ಯವಾಗಿತ್ತು. ಹೀಗಾಗಿ ನಾವೆಲ್ಲ ಒಂದುಗೂಡಿ ಒಂದೇ ಧ್ವನಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಒಕ್ಕೂಟಕ್ಕೆ INDIA (Indian National Development Inclusive Alliance) ಎಂದು ಹೆಸರಿಟ್ಟಿದ್ದೇವೆ. ಮುಂದಿನ ಸಭೆ ಆಗಸ್ಟ್ 6ಕ್ಕೆ ಮುಂಬೈನಲ್ಲಿ ನಡೆಯಲಿದೆ. ಕ್ಯಾಂಪೇನ್ ಮ್ಯಾನೇಜ್ಮೆಂಟ್ ನಿರ್ಣಯಕ್ಕೆ ಉಪ ಸಮಿತಿ ರಚನೆ ಮಾಡಲಾಗುವುದು ಎಂದರು.
ಬೆಂಗಳೂರು: ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ‘INDIA’ ಎಂಬ ಹೆಸರಿಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಸಭೆ ಮಾಡಿದ್ದೇವೆ. ಈ ಸಭೆಯಲ್ಲಿ 26 ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ ಎಂದರು.
ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆಯಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ವಿಧೇಯಕ, ಭೂ ಕಂದಾಯ ತಿದ್ದುಪಡಿ ವಿಧೇಯಕ, ಸರ್ಕಾರಿ ವ್ಯಾಜ್ಯ ನಿರ್ವಹಣಾ ವಿಧೇಯಕ, ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ ಮತ್ತು ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.
ಮಲ್ಪೆ ಸಮೀಪ ಆಳ ಸಮುದ್ರದಲ್ಲಿ ದೋಣಿ ಮುಳುಗಡೆಯಾಗಿದ್ದು, ತಮಿಳುನಾಡು ಮೂಲದ ಐವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರಿನಿಂದ ಮಲ್ಪೆ ಬಂದರಿಗೆ ಬರುತ್ತಿದ್ದಾಗ ದೋಣಿ ಮುಳುಗಡೆಯಾಗಿದೆ.
ಬೆಂಗಳೂರು: ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ 26 ರಾಷ್ಟ್ರೀಯ ವಿಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿಕೊಂಡಿದ್ದು, ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ನಿರ್ಧಾರ ಮಾಡಿವೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಕೈಗೊಂಡಿದ್ದು, ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪವಾಗಿದೆ. ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ ಮಾಡುವ ನಿರ್ಣಯ ಕೈಗೊಂಡಿದ್ದು, ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿಗಳ ರಚನೆಗೆ ಚರ್ಚೆ ನಡೆಸಲಾಗಿದೆ. ಯಾವ ಯಾವ ರಾಜ್ಯ ಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯವಾರು ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪಿಸಿದ ಶಾಸಕ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹಾವೇರಿ ಜಿಲ್ಲೆಯಲ್ಲೇ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಯು.ಬಿ.ಬಣಕಾರ್, ರೈತರ ಆತ್ಮಹತ್ಯೆ ಪ್ರಕರಣದ ವಿಚಾರವಾಗಿ ಕ್ಷೇತ್ರವಾರು ಹೇಳುತ್ತೀರಾ? ಹಾವೇರಿ ಜಿಲ್ಲೆಯದ್ದು ಮಾತ್ರ ಯಾಕೆ ಹೇಳುತ್ತೀರಾ ಎಂದು ಪ್ರಶ್ನಿಸಿದರು. ಅವರ ವಿಚಾರ ಹೇಳಲು ಬಿಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಹೀಗಾಗಿ ದರ್ಶನ್ ಮಾತು ಮುಂದುವರಿಸಿದರು.
ವಿಧಾನ ಪರಿಷತ್: ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ ಪಡೆಯಿತು.
ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ತರುತ್ತೇವೆ. ಸರಿಯಾಗಿ ಟ್ಯಾಕ್ಸ್ ಕಲೆಕ್ಟ್ ಆಗಬೇಕು. ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾನೆ ಅವನು ದೇಶಭಕ್ತ. ದೇಶ ಕಟ್ಟಲು ತೆರಿಗೆ ಕಟ್ಟೋರಿಗೆ ಸಲಾಮ್ ಹೇಳ ಬೇಕು. ತೆರಿಗೆ ಕಛೇರಿಯಲ್ಲಿ ಟ್ಯಾಕ್ಸ್ ಕಟ್ಟೋರಿಗೆ ಗೌರವ ಕೊಡಬೇಕು ಎಂದು ಸಚಿವ ಹೆಚ್ ಕೆ ಪಾಟೀಲ್ ಸದನದಲ್ಲಿ ಹೇಳಿದರು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ಉಪವಿಭಾಗದ ಅತ್ತಿಬೆಲೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಕಿರಾತಕರು ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಹಣ ವಸೂಲಿಗೆ ಯತ್ನಿಸಿದ್ದಾರೆ. ಕಿಡಿಗೇಡಿಗಳು ನಕಲಿ ಅಕೌಂಟ್ ತೆರೆದ ಬಗ್ಗೆ ಕೆ.ವಿಶ್ವನಾಥ್ ಅವರಿಗೆ ಮಾಹಿತಿ ಸಿಕ್ಕಿದ್ದು ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯತೆ ಇಲ್ಲ. ಪಡಿತರ ಚೀಟಿಯ ಸಂಖ್ಯೆಯನ್ನ 8147500500 ಈ ಸಂಖ್ಯೆ ಎಸ್ ಎಂಎಸ್ ಮಾಡಬಹುದು. ಕೂಡಲೇ ಮುಖ್ಯಸ್ಥೆಗೆ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಹೀಗಾಗಿ ಯೋಜನೆಯಲ್ಲಿ ಯಾವುದೇ ಗೊಂದಲ ಇಲ್ಲ. ಯಾವ ಕೇಂದ್ರ, ದಿನಾಂಕ, ಸಮಯ ಎಲ್ಲ ಮಾಹಿತಿಯೂ ಫಲಾನುಭವಿ ಮಹಿಳೆಗೆ ಹೋಗಲಿದೆ. ಇನ್ನೂ ಗೊಂದಲವಿದ್ದರೆ ಇಲಾಖೆ 1902 ನಂಬರ್ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಬೇರೆ ಯೋಜನೆಗಳಲ್ಲಿ ತೊಂದರೆ ಆದ ಕಾರಣ, ಈ ಯೋಜನೆಯನ್ನ ಆರಂಭದಲ್ಲೇ ಸರಳವಾಗಿ ಮಾಡಿದ್ದೀವಿ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಟಿವಿ9ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ಗೆ ಅಧಿಕಾರ ಅಥವಾ ಪ್ರಧಾನಿ ಹುದ್ದೆ ಬಗ್ಗೆ ಆಸಕ್ತಿ ಇಲ್ಲ. ನಮ್ಮ ಪ್ರಮುಖ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ರಕ್ಷಣೆಯೇ ನಮ್ಮ ಉದ್ದೇಶ. ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ಒಕ್ಕೂಟ ವ್ಯವಸ್ಥೆಗೆ ಕೈಜೋಡಿಸಿಲ್ಲ ಎಂದು ಮಹಾ ಮೈತ್ರಿಕೂಟದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಚಿಪ್ಪು ಎಂದು ಸಿ.ಟಿ.ರವಿ ಟೀಕೆ ವಿಚಾರಕ್ಕೆ ಸಂಬಂಧಿಸಿ ಸಿ.ಟಿ.ರವಿ ಹೇಳಿಕೆಗೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು ಕೊಟ್ಟಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜನರಿಗೆ ವಂಚಿಸಿ ಚಿಪ್ಪು ಕೊಟ್ಟಿದೆ. ಕೊಟ್ಟ ಭರವಸೆಯಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ. ಪ್ರಧಾನಿ ಮೋದಿ ದೇಶಕ್ಕೆ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ರು. ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ಹಣ ಹಾಕ್ತೇವೆಂದು ಹಾಕಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಅದನ್ನೂ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಭರವಸೆ ಈಡೇರಿಸಿದೆ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜನರಿಗೆ ಚಿಪ್ಪು ಕೊಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ಚಿಪ್ಪು ಕೊಡಲಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ನಗರದ ಮರಳೂರುದಿಣ್ಣೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ವೀರ್ ಸಾವರ್ಕರ್ ಫ್ಲೆಕ್ಸ್ ಹಾಕಲಾಗಿದ್ದು ಇದಕ್ಕೆ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಮರಳೂರು ದಿಣ್ಣೆಯಲ್ಲಿ 46ನೇ ವರ್ಷದ ಜಾಡಾಳಮ್ಮ ಜಾತ್ರೋತ್ಸವ ನಡೆಯುತ್ತಿದೆ. ಹೀಗಾಗಿ ಜಾತ್ರಾ ಮಹೋತ್ಸವಕ್ಕೆ ಶುಭಕೋರಿ ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ವೀರ್ ಸಾವರ್ಕರ್ ಫ್ಲೆಕ್ಸ್ ಹಾಕಲಾಗಿದೆ. ಎರಡು ಕೋಮಿನ ಜನರು ಹೆಚ್ಚಾಗಿ ವಾಸವಿರೋ ಮರಳೂರುದಿಣ್ಣೆಯಲ್ಲಿ ಸೌಹಾರ್ದಯುತ ದೃಷ್ಟಿಯಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ಆರಂಭವಾಗಿದೆ. ಮಹಾಘಟಬಂಧನ್ ಸಭೆಯಲ್ಲಿ 40ಕ್ಕೂ ಹೆಚ್ಚು ನಾಯಕರು ಉಪಸ್ಥಿತರಿದ್ದಾರೆ. ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಕೇಜ್ರಿವಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ‘ಕೈ’ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್,
ಪಂಜಾಬ್ ಸಿಎಂ ಭಗವಂತ್ ಮಾನ್, ಜಾರ್ಖಂಡ್ ಸಿಎಂ ಸೊರೇನ್, ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಉದ್ಧವ್ ಠಾಕ್ರೆ, ಲಾಲೂ ಪ್ರಸಾದ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಸಿಎಂ ಅಖಿಲೇಶ್ ಯಾದವ್, ಮುಖಂಡರಾದ ಅಭಿಷೇಕ್ ಬ್ಯಾನರ್ಜಿ, ಆದಿತ್ಯ ಠಾಕ್ರೆ ಸೇರಿದಂತೆ ಮಹಾಮೈತ್ರಿಕೂಟದಲ್ಲಿ 40ಕ್ಕೂ ಹೆಚ್ಚು ನಾಯಕರು ಉಪಸ್ಥಿತರಿದ್ದಾರೆ.
ಕಾಂಗ್ರೆಸ್ನ ಮೇಕೆದಾಟು ಹೋರಾಟ ಬರೀ ನಾಟಕ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಸ್ಟಾಲಿನ್ ವಿರೋಧಿಸಿದ್ದಾರೆ. ಈಗ ಸಿಎಂ ಸ್ಟಾಲಿನ್ಗೆ ಬೊಕೆ ನೀಡಿ ಕಾಂಗ್ರೆಸ್ ಸ್ವಾಗತ ಮಾಡಿದೆ. ಹಿಂದೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ನೀರಿಗಾಗಿ ನಾವು ಹೋರಾಟ ಮಾಡಿದ್ದೇವೆಂದು ಬೊಗಳೆ ಬಿಟ್ಟಿತ್ತು. ಆದರೆ ಸಿಎಂ ಸ್ಟಾಲಿನ್ ಮೇಕೆದಾಟು ಯೋಜನೆಗೆ ವಿರೋಧ ಮಾಡಿದ್ದಾರೆ. ನಮ್ಮ ಯೋಜನೆಗೆ ವಿರೋಧ ಮಾಡಿದವರನ್ನು ಕಾಂಗ್ರೆಸ್ ಸ್ವಾಗತಿಸಿದೆ. ಕಾಂಗ್ರೆಸ್ನವರಿಗೆ ನಾಚಿಕೆ ಆಗಬೇಕೆಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಗೆ IASಗಳ ನಿಯೋಜನೆ ವಿಚಾರಕ್ಕೆ ಸಂಬಂಧಿಸಿ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. IAS ಅಧಿಕಾರಿಗಳನ್ನು ಸ್ವಾಗತ ಕೋರಲು ಬಳಸಿಕೊಂಡಿದ್ದು ಸರಿಯಲ್ಲ. ಕಾಂಗ್ರೆಸ್ ಆರ್ಭಟ ನೋಡಿದ್ರೆ ಇಡೀ ದೇಶವನ್ನೇ ಗೆದ್ದ ರೀತಿ ಆಡ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ಇದಕ್ಕೆ ಉತ್ತರ ಕೊಡಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಐಎಎಸ್ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅಧಿಕಾರಿಗಳು ಮಾತ್ರವಲ್ಲ ಜನರು ಕೂಡ ಅಸಹಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿ ಮುಳುಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಗೆ IASಗಳ ನಿಯೋಜನೆ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾನೆ. ಯಾವ ಸರ್ಕಾರದಲ್ಲಿ ಅಧಿಕಾರಿಗಳನ್ನು ಹೀಗೆ ನಿಯೋಜಿಸಲಾಗಿತ್ತು. ರಾಮಕೃಷ್ಣ ಹೆಗಡೆ ಅವಧಿಯಲ್ಲೂ ಇಂತಹ ಸಭೆ ನಡೆಸಲಾಗಿತ್ತು. ಗಾಜಿನ ಭವನದಲ್ಲಿ ಅಂದು ಕಾಂಗ್ರೆಸ್ ಪಕ್ಷ ಸಭೆ ನಡೆಸಿತ್ತು. ಎಂದೂ ಕೂಡ ಹೀಗೆ ಅಧಿಕಾರಿಗಳನ್ನು ನಡೆಸಿಕೊಂಡಿಲ್ಲ. ಈಗ ಅಧಿಕಾರಿಗಳನ್ನು ಗನ್ಮ್ಯಾನ್ ರೀತಿ ನಡೆಸಿಕೊಳ್ಳಲಾಗ್ತಿದೆ ಎಂದು ಸರ್ಕಾರದ ನಡೆ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟ ಸಭೆ ವಿಚಾರಕ್ಕೆ ಸಂಬಂಧಿಸಿ ದೇಶದ ಸಮಗ್ರ ಅಭಿವೃದ್ಧಿಯಷ್ಟೇ ನಮ್ಮ ಸರ್ಕಾರದ ಗುರಿ. ಬೇರೆ ಪಕ್ಷಗಳಿಗೆ ಅವರ ಕುಟುಂಬಗಳ ಅಭಿವೃದ್ಧಿಯಷ್ಟೇ ಮುಖ್ಯ ಎಂದು ವಿಪಕ್ಷಗಳ ಸಭೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳಿಗೆ ದೇಶ ಮುಖ್ಯ ಅಲ್ಲ, ಅವರ ಕುಟುಂಬ ಅಭಿವೃದ್ಧಿ ಮುಖ್ಯ. ವಾಮಮಾರ್ಗದಲ್ಲಿ ಹಣ ಗಳಿಸುವುದು, ಕುಟುಂಬ ವೃದ್ಧಿಯೇ ಮುಖ್ಯ. ಭ್ರಷ್ಟಾಚಾರದ ಗ್ಯಾರಂಟಿಯೇ ವಿಪಕ್ಷಗಳ ಸಭೆಯ ಮುಖ್ಯ ಅಜೆಂಡಾ. ಕೆಲ ಪಕ್ಷಗಳ ಕುಟುಂಬದ ಸದಸ್ಯರು ಈಗಾಗಲೇ ಬೇಲ್ನಲ್ಲಿದ್ದಾರೆ ಎಂದು ಸೋನಿಯಾ, ರಾಹುಲ್ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ವಿದ್ಯಾರ್ಥಿಗಳ ಪರದಾಟ. ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಟ. ಬಸ್ ಯಾಕೆ ನಿಲ್ಲಿಸಲ್ಲ ಅಂತಾ ವಿದ್ಯಾರ್ಥಿನಿಯರ ಗಲಾಟೆ. ತುಮಕೂರು ತಾಲೂಕಿನ ನೆಲಹಾಲ್ ಗ್ರಾಮದಲ್ಲಿ ಘಟನೆ. ಬಸ್ ನಿಲ್ಲಿಸದಿದ್ದಕ್ಕೆ ವಿದ್ಯಾರ್ಥಿನಿಯರ ಆಕ್ರೋಶ. ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ಗಲಾಟೆಗೆ ಹೋದ ಚಾಲಕ. KSRTC ಚಾಲಕನಿಂದ ವಿದ್ಯಾರ್ಥಿನಿಯರ ಮೇಲೆ ಅವಾಜ್. ಪದೇ ಪದೇ ಮನವಿ ಮಾಡಿದರೂ ಶಿರಾದಿಂದ ತುಮಕೂರಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಭಾಗ್ಯವಿಲ್ಲ.
ಬೆಂಗಳೂರಿನ ಇಂದಿರಾ ನಗರದಲ್ಲಿರುವ ಕೇರಳಾ ಮಾಜಿ ಸಿಎಂ ಉಮನ್ ಚಾಂಡಿ ಅಂತಿಮ ದರ್ಶನ ಪಡೆಯಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿರಾನಗರದತ್ತ ತೆರಳಿದ್ದಾರೆ.
ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟ ಸಭೆ ಹಿನ್ನೆಲೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಹೆಚ್ಎಎಲ್ಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಗಮಿಸಿದ್ದಾರೆ. ಹೆಚ್ಎಎಲ್ನಿಂದ ತಾಜ್ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಸತಾರಾ, ಕರಾಡ, ಕೊಲ್ಹಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಕೃಷ್ಣಾ ನದಿ ಒಳ ಹರಿವು ಹೆಚ್ಚಳವಾಗಿದೆ. ಮಾಂಜರಿ – ಬಾವನಸೌದತ್ತಿ ಸಂಪರ್ಕಿಸುವ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತಗೊಂಡಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಹೊರವಲಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು 17 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಪರಸಪ್ಪ ಎಂಬುವರಿಗೆ ಸೇರಿದ 13 ಕುರಿ, 2 ಟಗರು, 2 ಮೇಕೆ ಮೃತಪಟ್ಟಿವೆ. ಕುರಿಗಳ ಪಕ್ಕದಲ್ಲೇ ನಿಂತಿದ್ದ ಪರಸಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಕಾರವಾರ, ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರದಲ್ಲಿ ಇಂದಿನಿಂದ 5 ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿರುಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರ ಉರುಳಿಬಿದ್ದಿದೆ. ಮರ ಬಿದ್ದ ಹಿನ್ನೆಲೆ 4 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ನಲ್ಲಿ ದಟ್ಟ ಮಂಜು ಆವರಿಸಿದ್ದು ಮಂಜಿನಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಜಿನಿಂದ ವಾಹನ ಚಾಲನೆ ಮಾಡಲು ಸವಾರರು ಪರದಾಡುತ್ತಿದ್ದಾರೆ. ಕಿರಿದಾದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ವಾಹನ ಚಾಲನೆಗೆ ಮಂಜು ಅಡ್ಡಿಯಾಗುತ್ತಿದೆ. ವಾಹನಗಳ ಹೆಡ್ ಲೈಟ್ ಹಾಕಿ ಸವಾರರು ಚಾಲನೆ ಮಾಡುತ್ತಿದ್ದಾರೆ.
ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್ನಲ್ಲಿ ಅಪರೂಪದ ಮೀನು ಪತ್ತೆಯಾಗಿದೆ. ಸ್ಪಾಟೆಡ್ ಮೊರೈ ಈಲ್ಸ್ ಹೆಸರಿನ ಅಪರೂಪದ ಮೀನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿ ಕಾಣುವ ಈ ಮೀನು, ದ್ವೀಪದ ಬಳಿಯ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಬ್ಬರದಿಂದ ತೀರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಆರೋಳಿ ಎಂದು ಕರೆಯಲ್ಪಡುವ ಈ ಮೀನನ್ನು ಸ್ಥಳೀಯರು ತಿನ್ನಲ್ಲ ಎಂದು ಮೀನುಗಾರರು ಮಾಹಿತಿ ನೀಡಿದರು.
ಘಟಬಂಧನ್ ಸಭೆಗೆ ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವಿಟ್ ಮೂಲಕ ಮಾಜಿ ಸಿಎಂ HD ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಐಎಎಸ್ ನೀತಿ ಸಂಹಿತೆ ಉಲ್ಲಂಘನೆ ಆರೋಪ ರಾಜ್ಯಕ್ಕೆ ಎಸಗಿದ ಅಪಮಾನ, ಮಹಾ ದುರಂತ. ಕಾಂಗ್ರೆಸ್ ಕರ್ನಾಟಕದ ಹೆಮ್ಮೆ, ಪರಂಪರೆ, ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಸರಕಾರದ ನಡೆ ತಪ್ಪು
ನುಡಿದಂತೆ ನಡೆಯುವುದು ಎಂದರೆ ಇದೇನಾ? ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ @INCKarnataka ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ?1/6@IASassociation pic.twitter.com/R1zsE0JCzn
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 18, 2023
ಚಿಕ್ಕಬಳ್ಳಾಪುರ ನಗರದಲ್ಲಿ ಪೌರಕಾರ್ಮಿಕರ ಜೊತೆ ಪೊರಕೆ ಹಿಡಿದು ಜಿಲ್ಲಾಧಿಕಾರಿ ನಗರ ಸ್ವಚ್ಚತೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ನಿರಂತರವಾಗಿ 8 ಗಂಟೆವರೆಗೂ ಸ್ವಚ್ಚತೆ ಕಾರ್ಯ ನಡೆದಿದೆ. ಹಸಿರು ಚಿಕ್ಕಬಳ್ಳಾಪುರ ಸ್ವಚ್ಚ ಚಿಕ್ಕಬಳ್ಳಾಪುರ ಅಭಿಯಾನದಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಲಿಕೆ ಹಿಡಿದು ಪೌರಕೆ ಹಿಡಿದು ಪೌರ ಕಾರ್ಮಿಕರಂತೆ ಕಸ ಗುಡಿಸಿ ಸ್ವಚ್ಚಗೊಳಿಸಿದರು.
ಕೇರಳ ಮಾಜಿ ಸಿಎಂ ಉಮನ್ಚಾಂಡಿ(79) ನಿಧನಕ್ಕೆ ಹೆಚ್.ಸಿ.ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ. ಉಮನ್ಚಾಂಡಿ ಜನಸೇವೆ ಎಲ್ಲರಿಗೂ ಮಾದರಿಯಾಗಿತ್ತು. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್ ಮೂಲಕ ಸಚಿವ ಹೆಚ್.ಸಿ.ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ.
Deeply saddened by the loss of veteran Sri. @Oommen_Chandy.
He served for the people and strived for the healthy democracy.
His legacy will forever resonate in our hearts.#Rip pic.twitter.com/D3GU1UG97G
— Dr H.C.Mahadevappa (@CMahadevappa) July 18, 2023
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಮುದಾಸೀರ್, ಮುಜಾಯಿದ್, ಅಹ್ಮದ್ ಪಾಷಾ ಮೃತ ದುರ್ದೈವಿಗಳು. ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು ಉಳಿದ ಮೂವರಿಗೆ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರ ಭೇಟಿ, ಪರಿಶೀಲನೆ.
ತುಂಗಭದ್ರ ನದಿಗೆ ನೀರು ಹರಿದು ಬಂದಿದ್ದು ಮೀನುಗಾರಿಕೆಗೆ ನದಿ ಪಾತ್ರದ ಜನ ಮುಂದಾಗಿದ್ದಾರೆ. ಛತ್ರಿ ಬಳಸಿ ಮೀನು ಶಿಕಾರಿ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಬಳಿ ಛತ್ರಿ ಬಳಸಿ ಮೀನು ಹಿಡಿಯುತ್ತಿದ್ದಾರೆ.
ಎನ್‌ಡಿಎ ಜೊತೆ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಕಾದು ನೋಡುವ ತಂತ್ರ ಮೊರೆ ಹೋಗಿದೆ. ಎನ್‌ಡಿಎ ಮೈತ್ರಿಕೂಟಗಳ ಸಭೆಯಿಂದ ಹೆಚ್ಡಿ ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಇಂದು ಎನ್‌ಡಿಎ ಮೈತ್ರಿಕೂಟಗಳ ಸಭೆ ಇದ್ದು ಸಭೆ ಬಳಿಕ ಮೈತ್ರಿ ಬಗ್ಗೆ ಜೆಡಿಎಸ್ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ.
ಮೈಸೂರು ಕಾಂಗ್ರೆಸ್‌ನಲ್ಲಿ ಅಂತರಿಕ ಜಗಳ ಹೆಚ್ಚಾಗಿದೆ. ವಾಸು ವಿರುದ್ಧ ತಮ್ಮ ಬೆಂಬಲಿಗರನ್ನು ಸಿದ್ದರಾಮಯ್ಯ ಚೂ ಬಿಟ್ಟಿದ್ದಾರೆ. ವಾಸು ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಸಿದ್ದರಾಮಯ್ಯ ಬೆಂಬಲಿಗನಿಂದ ಪತ್ರ ರವಾನೆಯಾಗಿದೆ. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿಗೆ ನಗರ ಪಾಲಿಕೆ ಮಾಜಿ ಸದಸ್ಯ, ಸಿದ್ದರಾಮಯ್ಯ ಬೆಂಬಲಿಗ ಆರ್.ಸುನಂದಕುಮಾರ್ ಪತ್ರ ಬರೆದು ವಾಸು ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯಲಿದ್ದು ಸಭೆಗೆ ಸಚಿವರು, ಶಾಸಕರು ಯಾರಿಗೂ ಪ್ರವೇಶವಿಲ್ಲ. ಕೆಲ ಸಚಿವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಭದ್ರತೆ ಕಾರಣದಿಂದ ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೆಲಹೊತ್ತು ಮಾತ್ರ ಮಾಧ್ಯಮಗಳಿಗೆ ಚಿತ್ರೀಕರಣಕ್ಕೆ ಅವಕಾಶ ಇದೆ. ಇದನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
Published On - 7:55 am, Tue, 18 July 23