ಬೆಂಗಳೂರು, ಫೆ.24: ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲಾಘಾತ ಕೂಡ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ನೀರಿಗೆ ಹಾಹಾಕಾರ ಎದ್ದಿದೆ (Drinking Water Crisis). ಒಂದೆಡೆ ಸುಡುಬಿಸಿಲು ಜನರನ್ನ ಹೈರಾಣಾಗಿಸಿದ್ರೆ, ಮತ್ತೊಂದೆಡೆ ನೀರಿನ ಅಭಾವದಿಂದ ಜನರು ನಲುಗಿಹೋಗಿದ್ದಾರೆ. ದುಪ್ಪಟ್ಟು ಹಣ ಕೊಟ್ಟರೂ ಟ್ಯಾಂಕರ್ ನೀರು ಕೂಡ ಸಿಗದೇ ಜನರು ಕಂಗಾಲಾಗಿದ್ದಾರೆ. ನಮಗೇನು ಬೇಡ ನೀರು ಕೊಡಿ ಅಂತಾ ಅಂಗಲಾಚುತ್ತಿದ್ದಾರೆ.
ಬಿಸಿಲ ತಾಪ ಹೆಚ್ಚಾಗ್ತಿರೋ ಹೊತ್ತಲ್ಲೇ ರಾಜ್ಯ ರಾಜಧಾನಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕುಡಿಯೋ ನೀರಿನ ಅಭಾವದಿಂದ ನಲ್ಲಿ ನೀರು ಮರೆಯಾಗ್ತಿದ್ರೆ, ಅತ್ತ ದುಪ್ಪಟ್ಟು ಹಣ ಕೊಟ್ಟರು ಟ್ಯಾಂಕರ್ ನೀರು ಕೂಡ ಸಿಗದೇ ಜನ ಹೈರಾಣಾಗ್ತಿದ್ದಾರೆ. ಅತಿಹೆಚ್ಚು ಕೆರೆಗಳಿರೋ ಮಹದೇವಪುರ ವಲಯದಲ್ಲೇ ಜಲಕ್ಷಾಮ ತಾಂಡವವಾಡ್ತಿದ್ದು, ವರ್ತೂರಿನ ಜನರು ಜೀವಜಲವಿಲ್ಲದೇ ಹೈರಾಣಾಗಿದ್ದಾರೆ.
ವರ್ತೂರಿನ ಪ್ರತಿ ಮನೆ ಮನೆಗೂ ಟ್ಯಾಂಕರ್ ನೀರೆ ಗತಿಯಾಗಿಬಿಟ್ಟಿದೆ. ನಲ್ಲಿ ನೀರಿಲ್ಲದೇ ಪರದಾಡ್ತಿರೋ ಜನರು, ನೀರಿನ ಸಮಸ್ಯೆ ನೀಗಿಸದ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕುಡಿಯೋ ನೀರಿಲ್ಲದೇ, ದಿನನಿತ್ಯ ಬಳಕೆಗೂ ನೀರಿಲ್ಲದೇ ಇಲ್ಲಿನ ಜನರು ಕಂಗಾಲಾಗಿದ್ದಾರೆ. ಇನ್ನು ಟ್ಯಾಂಕರ್ ನೀರು ಬೇಕು ಅಂದ್ರೆ ಮೂರು ದಿನ ಮೊದಲೇ ಬುಕ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಹಣ ಕೊಟ್ಟರೂ ಟ್ಯಾಂಕರ್ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಏರಿಯಾದಲ್ಲಿ ಬೋರ್ ವೆಲ್ ಗಳು ಕೂಡ ಬತ್ತಿ ಹೋಗಿದ್ದು, ಜನರು ಮನೆಗೆ ಬಂದ್ರೆ ಊಟ ಕೊಡ್ತೀವಿ, ಆದ್ರೆ ನೀರು ಕೊಡೋಕೆ ಆಗ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ನೀರಿಲ್ಲದೇ ಇರೋದರಿಂದ ಬಾಡಿಗೆದಾರರು ಮನೆ ತೊರೆಯುತ್ತಿದ್ದು, ಮನೆ ಮಾಲೀಕರು ಕೂಡ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ; ನಾಲ್ಕು ಜಿಲ್ಲೆಯ ವಿವಿಧ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ
ಇನ್ನು ನೀರಿನ ಸಮಸ್ಯೆ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆಯಿಂದ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಎಲ್ಲಾ ವಲಯಗಳ ಆಯುಕ್ತರು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ನೀರು ಪೂರೈಕೆ, ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಬೆಂಗಳೂರಿಗೆ ಜೂನ್‌ವರೆಗೆ 10ರಿಂದ 15 ಟಿಎಂಸಿ ನೀರು ಅವಶ್ಯಕತೆ ಹಿನ್ನೆಲೆ ನೀರು ಸಮರ್ಪಕವಾಗಿ ಬಳಕೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗೂ ಪ್ರತಿ ವಾರ್ಡ್‌ಗೆ 40 ಟ್ಯಾಂಕರ್ ಮೂಲಕ ನೀರು ಸರಬರಾಜು ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ