ಡಿ.31 ರಿಂದ 15 ದಿನ ಮಾಲ್ ಆಫ್ ಏಷ್ಯಾ ಬಾಗಿಲು ಬಂದ್: ಕಾರಣ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Dec 31, 2023 | 10:42 AM

ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಲ್ ಆಫ್ ಏಷ್ಯಾಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಹಿನ್ನಲೆ ನಾಳೆಯಿಂದ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ(Mall Of Asia) ಬಾಗಿಲು ಬಂದ್​ ಆಗಲಿದೆ.

ಡಿ.31 ರಿಂದ 15 ದಿನ ಮಾಲ್ ಆಫ್ ಏಷ್ಯಾ ಬಾಗಿಲು ಬಂದ್: ಕಾರಣ ಇಲ್ಲಿದೆ
ಮಾಲ್​ ಆಫ್​ ಏಷ್ಯಾ
Follow us on

ಬೆಂಗಳೂರು, ಡಿ.31: ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಟ್ರಾಫಿಕ್ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ  ಬೆಂಗಳೂರು ಪೊಲೀಸರು ಮಾಲ್ ಆಫ್ ಏಷ್ಯಾವನ್ನು (Mall of Asia) 15 ದಿನಗಳವರೆಗೆ ಬಂದ್​ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್ ಆಫ್ ಏಷ್ಯಾ ಸುತ್ತಮುತ್ತ ಮಾಲ್ ಬಳಿ ಸೆಕ್ಷನ್ 144(1), 144(2) ಸೆಕ್ಷನ್ ಜಾರಿ ಮಾಡಿ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. 15 ದಿನ ಮಾಲ್ ಆಫ್ ಏಷಿಯಾಗೆ ಸಾರ್ವಜನಿಕರ ಪ್ರವೇಶವಿಲ್ಲ. ಅಕ್ಟೋಬರ್​ನಲ್ಲಿ ಉದ್ಘಾಟನೆಗೊಂಡಿದ್ದ ಮಾಲ್​ ಆಫ್​ ಏಷ್ಯಾ ಬಂದ್​ ಆಗಲು ಕಾರಣವೇನು? ಇಲ್ಲಿದೆ ಓದಿ.

ಈಶಾನ್ಯ ಡಿಸಿಪಿ ಮತ್ತು ಸಂಚಾರ ಜಂಟಿ ಪೊಲೀಸ್ ಆಯುಕ್ತರ ವರದಿ ಮತ್ತು ಕೊಡಿಗೇಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವಿಶೇಷ ವರದಿ ಮತ್ತು ನಗರದ ಸ್ಪೆಷಲ್ ಬ್ಯ್ರಾಂಚ್​ನಿಂದ ದೊರೆತ ಆಂತರಿಕ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ವರದಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರು ನಗರ ಆಯುಕ್ತ ಬಿ. ದಯಾನಂದ್​ ಅವರು ಖುದ್ದು ಮಾಲ್​ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾಲ್​ನಲ್ಲಿ ಹಲವು ಅಸ್ತವ್ಯಸ್ತಗಳು ಕಂಡುಬಂದವು.

ಈ ಮಾಲ್​ನಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಾಲ್​ಗೆ ಬರುವ ಗ್ರಾಹಕರಿಂದ ದೊಡ್ಡ ಮಟ್ಟದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ, ವಿಮಾನ ನಿಲ್ದಾಣ, ಆಸ್ಪತ್ರೆ, ಕಛೇರಿಗಳಿಗೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿ ಅನುಮತಿ ಪ್ರಕಾರ ಮಾಲ್ ನಲ್ಲಿ 2,324 ಕಾರ್ ಮತ್ತು ಬೈಕ್​ಗಳನ್ನು ಮಾತ್ರ ಪಾರ್ಕ್​ ಮಾಡಬಹುದು. ಆದರೆ ಈ ಮಾಲ್​​ನಲ್ಲಿ ಇದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ವಾಹನಗಳು ಬರುತ್ತಿವೆ. ಜೊತೆಗೆ ಮಾಲ್​ನಲ್ಲಿ ಶಬ್ದ ಮಾಲಿನ್ಯವೂ ಮಿತಿ ಮೀರಿತ್ತು. ಮಾಲ್​ನಲ್ಲಿ ಪರಿಸ್ತಿತಿ ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದೆಂದು ಬಂದ್​ ಮಾಡಲಾಗಿದೆ.

ಇದನ್ನೂ ಓದಿ:ಹೆಚ್ಚಾದ ಟ್ರಾಫಿಕ್ ಕಿರಿಕಿರಿ; ಮಾಲ್ ಆಫ್ ಏಷ್ಯಾ ವಿರುದ್ಧ ಬ್ಯಾಟರಾಯನಪುರ ನಿವಾಸಿಗಳ ಆಕ್ರೋಶ

ಹೊಸ ವರ್ಷಾಚರಣೆ ಮತ್ತು ಸಂಕ್ರಾತಿಗೆ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿ.31ರಿಂದ ಜ.15ರವರೆಗೆ ಮಾಲ್​ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಮಾಲ್​ಗೆ ನೀಡರುವ ಭಾಗಶಃ ಸ್ವಾಧೀನ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳುವುದು / ರದ್ದುಗೊಳಿಸಲು ಪೊಲೀಸ್ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ.

ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾ ಮೇಲೆ ದಾಳಿ‌ ನಡೆಸಿದ್ದ ಕರವೇ

ಮೊನ್ನೆಯಷ್ಟೇ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಮಾಲ್​ ಆಫ್​ ಏಷ್ಯಾ ಮೇಲೆ ದಾಳಿ ನಡೆಸಿ, ನಾಮಪಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಮುಂಜಾಗ್ರತೆ ಹಿನ್ನೆಲೆ ಮುಂದಿನ‌‌ 15 ನೇ ತಾರೀಖಿನವರೆಗೂ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Sat, 30 December 23