ಬೆಂಗಳೂರು, ನ.16: ಸಾಮಾಜಿಕ ಜಾಲತಾಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಂಸದ ಡಿ.ಕೆ. ಸುರೇಶ್ (DK Suresh) ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು (Jayanagar Police Station) ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ರಂಜಿತ್ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಈತ DK ಬ್ರದರ್ಸ್ ಬಗ್ಗೆ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಗ್ಗೆಯೂ ನಿಂದಿಸಿ ಪೋಸ್ಟ್ ಹಾಕಿದ್ದ. ಬೇರೆ ರಾಜ್ಯಗಳ ರಾಜಕಾರಣಿಗಳಿಗೂ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಖಾಸಗಿ ಕಂಪನಿ ನೌಕರ ರಂಜಿತ್, ಫೇಸ್‌ಬುಕ್ ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ‘ಕಿಲ್ ಡಿಕೆ ಬ್ರದರ್ಸ್’ ಎಂದು ಪೋಸ್ಟ್ ಹಾಕಿದ್ದ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಮತ್ತು ಡಿ.ಕೆ ಸಹೋದರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ. ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿದ್ದ ಎಂದು ಆರೋಪಿಸಿ ಜಯನಗರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶರತ್ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಜಯನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮತ್ತಷ್ಟು ಸತ್ಯ ಬಯಲಾಗಿದೆ. ಈತ ತಾನೂ ಸೈಬರ್ ಅಪರಾಧದ ಡಿಟೆಕ್ಟಿವ್ ಎಂದು ಹೇಳಿಕೊಂಡು ಓಡಾಟ ನಡೆಸುತ್ತಿದ್ದ. ತಾನು ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ ಎಂಬುದು ಬಯಲಾಗಿದೆ.
ಜೊತೆಗೆ ಆರೋಪಿ ರಂಜಿತ್, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರು, ಅಲ್ಲದೆ ಮುಸ್ಲಿಂ ಸಮುದಾಯದವರ ನಿಂದನೆ ಮಾಡಿದ್ದ. ಬೇರೆ ಬೇರೆ ರಾಜ್ಯದ ರಾಜಕಾರಣಿಗಳಿಗೂ ನಿಂದಿಸಿ ಪೋಸ್ಟ್ ಹಾಕಿದ್ದ ಎಂಬ ಬಗ್ಗೆ ತನಿಖೆ ವೇಳೆ ಬಯಲಾಗಿದೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕಿಲ್ ಡಿಕೆ ಬ್ರದರ್ಸ್ ಎಂದು ಪೋಸ್ಟ್: ದೂರು ದಾಖಲು
ಆರೋಪಿ ರಂಜಿತ್ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಕಿಕ್ ಔಟ್ ಕಾಂಗ್ರೆಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ರಂಜಿತ್ ವಿರುದ್ಧ ಧರ್ಮಗಳ ಮಧ್ಯೆ ದ್ವೇಷಕ್ಕೆ ಕಾರಣವಾಗುವ ಮತ್ತು ಮಾನಹಾನಿಕರವಾಗಿ ವರ್ತಿಸುವ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ