ನಕಲಿ ಔಷಧ ಜಾಲದ ಬಗ್ಗೆ ಮತ್ತಷ್ಟು ಶಾಕಿಂಗ್​ ವಿಚಾರ ಬಹಿರಂಗ: ಎಸ್​ಐಟಿ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ

ಬೆಂಗಳೂರು ಸಮೀಪದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಸಂಬಂಧ ಬಗೆದಷ್ಟೂ ಶಾಕಿಂಗ್​​ ವಿಚಾರಗಳು ಬಯಲಾಗ್ತಿವೆ. ಪ್ರತಿಷ್ಠಿತ MNC ಬ್ರ್ಯಾಂಡ್‌ಗಳ ಹೆಸರಿನಲ್ಲಿ ಜೀವಕ್ಕೇ ಕಂಟಕ ತರುವ ನಕಲಿ ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ಪೂರೈಸುತ್ತಿದ್ದ ಈ ಅಂತರರಾಜ್ಯ ದಂಧೆಯ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ಎಸ್​ಐಟಿ ರಚನೆಗೆ ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಮಾಹಿತಿ ನೀಡಿದ್ದು, ನಕಲಿ ಜಾಲ ಯಾವೆಲ್ಲಾ ಆಸ್ಪತ್ರೆಗಳಿಗೆ ತಲುಪಿದೆ? ಮತ್ತು ಇದರಿಂದ ಎಷ್ಟು ಜನರ ಆರೋಗ್ಯಕ್ಕೆ ಧಕ್ಕೆ ಆಗಿದೆ ಎಂಬುದೆಲ್ಲದರ ಬಗ್ಗೆ ತನಿಖೆ ನಡೆಸೋದಾಗಿ ತಿಳಿಸಿದ್ದಾರೆ.

ನಕಲಿ ಔಷಧ ಜಾಲದ ಬಗ್ಗೆ ಮತ್ತಷ್ಟು ಶಾಕಿಂಗ್​ ವಿಚಾರ ಬಹಿರಂಗ: ಎಸ್​ಐಟಿ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ
ನಕಲಿ ಔಷಧ
Image Credit source: Tv9 Kannada
Edited By:

Updated on: Aug 19, 2026 | 11:54 AM

ಬೆಂಗಳೂರು, ಆಗಸ್ಟ್​​ 19: ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಸಮೀಪದ ಸಿ.ಕೆ. ತಾಂಡ್ಯಾ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧ ತಯಾರಿ ಜಾಲ ಪತ್ತೆ ಸಂಬಂಧ ಬಗೆದಷ್ಟೂ ವಿಚಾರಗಳು ಬಯಲಾಗುತ್ತಿವೆ. ಪ್ರತಿಷ್ಠಿತ MNC ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ನೀಡಲಾಗುತ್ತಿತ್ತು. ಬಾಟಲ್‌ಗಳಿಗೆ ಲೇಬಲ್ ಅಂಟಿಸಿ, ಕ್ಯಾಪ್ ಹಾಕಿ ಮಾರುಕಟ್ಟೆಗೆ ರವಾನಿಸಲು ಸಿದ್ಧಪಡಿಸಲಾಗುತ್ತಿತ್ತು. ಔಷಧಿಗಳ ನಕಲಿ ತಯಾರಿಕೆ ಜೊತೆಗೆ ಪ್ಯಾಕಿಂಗ್ ಮತ್ತು ಲೇಬಲಿಂಗ್‌ನ ಸಂಪೂರ್ಣ ವ್ಯವಸ್ಥೆ ಘಟಕದಲ್ಲೇ ಇತ್ತು ಎಂಬುದು ಗೊತ್ತಾಗಿದೆ.

ಅವಧಿ ಮೀರಿದ ಉತ್ಪನ್ನಗಳೂ ಪತ್ತೆ

ಕೆಲವು ಔಷಧಿಗಳಲ್ಲಿ ಅವಧಿ ಮೀರಿದ ಉತ್ಪನ್ನಗಳೂ ಪತ್ತೆಯಾಗಿದ್ದು, ವಿಶೇಷವಾಗಿ ಇಂಜೆಕ್ಷನ್‌ಗಳನ್ನೇ ನಕಲಿ ಮಾಡಿರುವುದು ಅಧಿಕಾರಿಗಳು ಹೌಹಾರುವಂತೆ ಮಾಡಿದೆ. ಇವು ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‌ಗಳ ಮೂಲಕ ರೋಗಿಗಳಿಗೆ ತಲುಪಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಈ ಔಷಧಿಗಳು ಈಗಾಗಲೇ ಮಾರುಕಟ್ಟೆಗೆ ಹೋಗಿವೆಯೇ ಎಂಬುದರ ಬಗ್ಗೆಯೂ FDA ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಶಪಡಿಸಿಕೊಂಡಿರುವ ಔಷಧಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅಲ್ಲದೆ ನಕಲಿ ಔಷಧಿಗಳ ಮೂಲ, ಔಷಧಿಗಳನ್ನು ಯಾರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ದಂಧೆಯಲ್ಲಿ ಇನ್ನಷ್ಟು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆ ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸಂಬಂಧಪಟ್ಟವರ ವಿರುದ್ಧ ಔಷಧಿ ಮತ್ತು ಆರೋಗ್ಯ ಸುರಕ್ಷತಾ ಕಾನೂನುಗಳ ಅಡಿ ಕ್ರಮಕ್ಕೆ FDA ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೂಗಳತೆ ದೂರದಲ್ಲೇ ನಕಲಿ ಔಷಧ ಜಾಲ! ನಕಲಿ ಕ್ಯಾನ್ಸರ್ ಔಷಧಿ ಮಾರುತ್ತಿದ್ದ ಬೃಹತ್ ಜಾಲ ಪತ್ತೆ, ಕಿಂಗ್​ಪಿನ್​ಗೆ ಬಲೆ

‘ತನಿಖೆಗೆ ಎಸ್​ಐಟಿ ರಚನೆ’

ನಕಲಿ ಬ್ರಾಂಡ್​​​​ ಔಷಧ, ಕಾಸ್ಮೆಟಿಕ್ಸ್​ ಜಾಲಗಳ ಬಗ್ಗೆ ತನಿಖೆ ನಡಸಲು ಎಸ್​​ಐಟಿ ರಚನೆಗೆ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​ ತಿಳಿಸಿದ್ದಾರೆ. ಸಿದ್ದಯ್ಯ ಎಂಬುವರಿಗೆ ಸೇರಿದ ಫಾರ್ಮ್​ಹೌಸ್​ನಲ್ಲಿ ನಕಲಿ ಔಷಧಿ ಜಾಲ ಪತ್ತೆಯಾಗಿದ್ದು, ಈ ಜಾಗವನ್ನು ದುಬೈನಲ್ಲಿರುವ ಪ್ರಶಾಂತ್ ಎಂಬುವರಿಗೆ ಲೀಸ್​​ಗೆ ನೀಡಲಾಗಿತ್ತು. ಪ್ರಶಾಂತ್ ಈ ನಕಲಿ ಬ್ರಾಂಡ್​​​​ ಔಷಧ ಘಟಕ ನಡೆಸುತ್ತಿದ್ದ. ಸದ್ಯ ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಬೇರೆ ರಾಷ್ಟ್ರ, ರಾಜ್ಯಗಳ ನಕಲಿ ಔಷಧಿ, ಮಾತ್ರೆ ತಂದು ಇಲ್ಲಿ ಮಲ್ಟಿನ್ಯಾಷನಲ್ ಕಂಪನಿ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದರು. ಐಸಿಯುನಲ್ಲಿ ಬಳಸುವ ಔಷಧಿ ಕೂಡ ನಕಲಿ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇಂತಹ ಜಾಲ ಇರೋದು ಪತ್ತೆಯಾಗಿದೆ. ಹಿಮಾಚಲಪ್ರದೇಶ, ತೆಲಂಗಾಣ ಸೇರಿದಂತೆ ಹಲವೆಡೆ ಜಾಲ ಇದೆ. ಈ ನಕಲಿ ಜಾಲ ಯಾವೆಲ್ಲಾ ಆಸ್ಪತ್ರೆಗಳಿಗೆ ತಲುಪಿದೆ? ಇದರಿಂದ ಎಷ್ಟು ಜನರ ಆರೋಗ್ಯಕ್ಕೆ ಧಕ್ಕೆ ಆಗಿದೆ ಎಂಬುದೆಲ್ಲದರ ಬಗ್ಗೆ ಚರ್ಚಿಸಿ ಎಸ್​ಐಟಿ ರಚನೆ ಮಾಡ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us