
ಬೆಂಗಳೂರು, ಜನವರಿ 04: ನಗರದ ನಾಗರಬಾವಿಯ ಮಲೇ ಮಹದೇಶ್ವರ ದೇವಸ್ಥಾನದ ಸಮೀಪ ಹೋಗುತ್ತಿದ್ದ ಬೈಕ್‌ಗೆ ಲಾರಿಯೊಂದು ಹಿಂದಿನಿಂದ ಬಂದು ಗುದ್ದಿದ್ದು, ಸವಾರ ಕೊನೆಯುಸಿರೆಳೆದಿದ್ದಾನೆ. ಇನ್ನೊಂದೆಡೆ ಚಾಮರಾಜನಗರದಲ್ಲಿ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಪವಾಡದಂತೆ ಪ್ರಾಣಾಪಾಯದಿಂದ ಪಾರಾಗಿದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುಮಾರು 10:30ರ ವೇಳೆಗೆ ನಾಗರಭಾವಿಯ ನಮ್ಮೂರ ತಿಂಡಿ ಸಮೀಪದ ಮಲೇ ಮಹದೇಶ್ವರ ದೇವಸ್ಥಾನದ ಬಳಿ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮದ ನಿವಾಸಿ ಪ್ರಕಾಶ್ ಎಂ. ಡಿ. (29) ಬೈಕ್‌ನಲ್ಲಿ ಸ್ನೇಹಿತನೊಂದಿಗೆ ಪರಿಚಿತನ ಮಗುವಿನ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿ ಮರಳುವ ವೇಳೆ, ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಗುದ್ದಿತ್ತು. ಅಪಘಾತದಲ್ಲಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಬೈಕ್‌ನಲ್ಲಿ ಜೊತೆಗಿದ್ದ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಗೋಲ್ಡ್ ಲೋನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಸಾವಿಗೆ ಕುಟುಂಬಸ್ಥರಲ್ಲಿ ಶೋಕ ಆವರಿಸಿದ್ದು, ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಬಳಿ ದಟ್ಟ ಮಂಜಿನಿಂದಾಗಿ ಈಚರ್ ವಾಹನ ಚಾಲಕನಿಗೆ ರಸ್ತೆ ಕಾಣದೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನಿಂದ ವೆಸ್ಟ್ ಪೇಪರ್ ತುಂಬಿಕೊಂಡು ಬರುತ್ತಿದ್ದ ವಾಹನ ಎಲ್ಲಿ ಸಾಗುತ್ತಿತ್ತು ಎಂಬುದರ ಕುರಿತು ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.