
ಬೆಂಗಳೂರು, ಆಗಸ್ಟ್ 16: ನಗರದ ಅತ್ಯಂತ ದಟ್ಟಣೆಯ ಔಟರ್ ರಿಂಗ್ ರೋಡ್ (ORR) ಮತ್ತು ಐಟಿ ಕಾರಿಡಾರ್‌ಗಳನ್ನು ಜೋಡಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ಸಿಲ್ಕ್ ಬೋರ್ಡ್ – ಕೆ.ಆರ್. ಪುರ) ವಾಣಿಜ್ಯ ಕಾರ್ಯಾಚರಣೆಯ ಗಡುವು ಮತ್ತಷ್ಟು ವಿಳಂಬವಾಗಿದೆ. 2026ರ ಕೊನೆಯ ವೇಳೆಗೆ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗುರಿ ಹೊಂದಿತ್ತು. ಆದರೆ ಸಿವಿಲ್ ಮತ್ತು ಸಿಸ್ಟಮ್ ಕಾಮಗಾರಿಗಳು ಬಾಕಿ ಇರುವ ಕಾರಣ, ವಾಣಿಜ್ಯ ಸಂಚಾರವು 2027ರ ಆರಂಭಕ್ಕೆ ಅಥವಾ ಮಧ್ಯಭಾಗಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದೆ.
ಕೆ.ಆರ್. ಪುರ ಮತ್ತು ಎಚ್‌ಎಸ್‌ಆರ್ ಲೇಔಟ್ ನಡುವೆ 2026ರ ಅಕ್ಟೋಬರ್ ವೇಳೆಗೆ ಟ್ರಯಲ್ ರನ್ ಆರಂಭಿಸಲು ಬಿಎಂಆರ್‌ಸಿಎಲ್ ಪ್ರಯತ್ನಿಸುತ್ತಿದೆ. ಆದರೆ ವಾಣಿಜ್ಯ ಕಾರ್ಯಾಚರಣೆ 2026ರಲ್ಲಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಔಟರ್ ರಿಂಗ್ ರೋಡ್‌ನಲ್ಲಿ 450 ಕೋಟಿ ರೂ. ವೆಚ್ಚದ ‘ವೈಟ್ ಟಾಪಿಂಗ್’ ಕಾಮಗಾರಿಯನ್ನು 2026ರ ಅಕ್ಟೋಬರ್‌ನಿಂದ ಆರಂಭಿಸಲು ಯೋಜನೆ ರೂಪಿಸಿದೆ. ಮೆಟ್ರೋ ಬ್ಲೂ ಲೈನ್ ಆರಂಭವಾಗುವ ಮುನ್ನವೇ ರಸ್ತೆ ಕಾಮಗಾರಿ ಆರಂಭವಾದರೆ, ಐಟಿ ಕಾರಿಡಾರ್‌ನಲ್ಲಿ ನಿತ್ಯ ಸಂಚರಿಸುವ 8 ರಿಂದ 10 ಲಕ್ಷ ಉದ್ಯೋಗಿಗಳು ಹಾಗೂ ವಾಹನ ಸವಾರರು ತೀವ್ರ ಟ್ರಾಫಿಕ್ ಕಿರಿಕಿರಿ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಶೇ. 50ರಷ್ಟು ‘ವರ್ಕ್ ಫ್ರಮ್ ಹೋಮ್’ (WFH) ನೀಡುವ ಕುರಿತು ಚರ್ಚಿಸಲು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ