ಬೆಂಗಳೂರು: ನಗರದ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಪ್ರಕರಣ ಸಂಬಂಧ ಗೋವಿಂದಪುರ ಪೊಲೀಸರು ಈವರೆಗೂ 7 ಬಿಎಂಆರ್ಸಿಎಲ್ ಅಧಿಕಾರಿಗಳು ಹಾಗೂ 18 ಎನ್ಸಿಸಿ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೆ ಪ್ಲಾನಿಂಗ್ ಕೊಟ್ಟಿದ್ದ NECOM ಕಂಪನಿಗೂ ನೋಟಿಸ್ ನೀಡಿದ್ದಾರೆ. ವಿಚಾರಣೆ ವೇಳೆ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿ, ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗೆ BMRCL ಅಧಿಕಾರಿಗಳು ಗುತ್ತಿಗೆ ನೀಡಿದ್ದೇವೆ ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇನ್ನು ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಬೇರೆಯದೆ ವರಸೆ ಶರುವಹಚ್ಚಿಕೊಂಡಿದೆ. ಗುತ್ತಿಗೆ ಕಂಪನಿ ಕಾಮಗಾರಿ ನಡೆಸಿದ್ದೇವೆ, ಆದರೆ ನಮ್ಮದೇನು ತಪ್ಪಿಲ್ಲ ಎಂದಿದೆ. ಈ ಮಧ್ಯೆಯೇ ಹೈದರಾಬಾದ್‌ನ ಐಐಟಿ ತಂಡ ಮತ್ತೊಂದು ತನಿಖಾ ವರದಿಯನ್ನು 2 ದಿನದಲ್ಲಿ ಪೊಲೀಸರ ಕೈಗೆ ಒಪ್ಪಿಸಲಿದೆ. ಐಐಟಿ ತಂಡ ಈಗಾಗಲೇ ಒಂದು ವರದಿ ಸಲ್ಲಿಸಿದೆ.
ಪಿಲ್ಲರ್ನ ಸಪೋರ್ಟ್ ಸಿಸ್ಟಮ್ ವೈಫಲ್ಯದಿಂದ ದುರಂತ ಸಂಭವಿಸಿದೆ ಎಂದು ಹೈದರಾಬಾದ್‌ನ ಐಐಟಿ ತಜ್ಞರ ತಂಡ (Hyderabad IIT Team) ಬೆಂಗಳೂರು ಪೊಲೀಸರಿಗೆ (Bengaluru Police) ವರದಿ ನೀಡಿದೆ. ದುರಂತದ ಬಳಿಕ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜ.18 ವರದಿ ನೀಡಿದ್ದು, ಮೆಟ್ರೋ ಪಿಲ್ಲರ್ ನಿರ್ಮಿಸುವಾಗ ಅದಕ್ಕೆ ರಾಡ್, ಇತರೆ ವಸ್ತುಗಳನ್ನು ಬಳಸಿ ಸಪೋರ್ಟ್ ನೀಡಬೇಕು. ಆದರೆ ಈ ಮೆಟ್ರೋ ಪಿಲ್ಲರ್‌ಗೆ ಸರಿಯಾದ ರೀತಿಯಲ್ಲಿ ಸಪೋರ್ಟ್ ನೀಡಿರಲಿಲ್ಲ. ಹೀಗಾಗಿ ಮೆಟ್ರೋ ಪಿಲ್ಲರ್ ವಾಲಿ ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಬಿದ್ದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಪ್ರಕರಣ ಸಂಬಂಧ ಮಾಧ್ಯಮಗಳ ಸುದ್ದಿ ಆಧರಿಸಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತಿಕೊಂಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ನೇತೃತ್ವದ ಪೀಠ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ BMRCL, BBMP ಮತ್ತು ಸಂಬಂಧಪಟ್ಟ ಗುತ್ತಿಗೆದಾರರನ್ನು ಪ್ರತಿವಾದಿಗಳನ್ನಾಗಿಸಲು ಸೂಚನೆ ನೀಡಿದೆ.
ಈ ಪ್ರಕರಣವು ಸಾರ್ವಜನಿಕರಲ್ಲಿ ಕಳವಳ ಮತ್ತು ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ ಮೂಡಿಸುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಮತ್ತು ಟೆಂಡರ್ ನೀಡುವ ಸಂದರ್ಭದಲ್ಲಿ ಸುರಕ್ಷರತೆಯು ಟೆಂಡರ್ನ ಭಾಗವಾಗಿರಲಿಲ್ಲವೇ? ಟೆಂಡರ್ ಸಮಯದಲ್ಲಿ ಸರ್ಕಾರ ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ಪಾಲಿಸಿದ್ದಾರೆಯೇ ? ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ: ಐವರ ವಿರುದ್ಧ ಕೇಸ್ ಬುಕ್
ಜನವರಿ 10 ರಂದು ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಮೃತ ತೇಜಸ್ವಿನಿ ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ