
ಬೆಂಗಳೂರು, ಅಕ್ಟೋಬರ್ 02: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳಿಂದ ಭಾರಿ ಒತ್ತಡ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಒಕ್ಕೂಟಗಳ ಹಣಕಾಸು ಸ್ಥಿತಿಗತಿ ಕುರಿತು ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಪ್ರಸಕ್ತ ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿ ರಾಜ್ಯದ ಒಟ್ಟು 16 ಹಾಲು ಒಕ್ಕೂಟಗಳ ಪೈಕಿ 11 ಒಕ್ಕೂಟಗಳು ಶೇಖಡಾವಾರು ಭಾರಿ ಲಾಭದಲ್ಲಿದ್ದರೆ, 5 ಒಕ್ಕೂಟಗಳು ತೀವ್ರ ನಷ್ಟ ಎದುರಿಸುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಣಕಾಸು ವರದಿ ಪ್ರಕಾರ, ಲಾಭದಲ್ಲಿರುವ 11 ಒಕ್ಕೂಟಗಳು ಒಟ್ಟಾರೆಯಾಗಿ 39.95 ಕೋಟಿ ರೂ. ಲಾಭ ಗಳಿಸಿವೆ.
ದನಗಳ ಮೇವು, ಪಶು ಔಷಧ, ಇಂಧನ ಹಾಗೂ ಸಂಸ್ಕರಣಾ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿದೆ. ನೆರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದ್ದು, ಇಲ್ಲೂ ದರ ಹೆಚ್ಚಿಸದಿದ್ದರೆ ಹಾಲಿನ ಪೂರೈಕೆ ಹೊರರಾಜ್ಯಗಳಿಗೆ ಹರಿಯುವ ಆತಂಕವಿದೆ ಎಂದು ಒಕ್ಕೂಟಗಳು ವಾದಿಸಿವೆ.
“ದರ ಏರಿಕೆಯ ಸಂಪೂರ್ಣ ಲಾಭವನ್ನು ರೈತರಿಗಷ್ಟೇ ನೀಡದೆ, ಒಕ್ಕೂಟಗಳ ನಿರ್ವಹಣಾ ವೆಚ್ಚ ಭರಿಸಲು ಒಕ್ಕೂಟಗಳಿಗೂ ಒಂದಷ್ಟು ಪಾಲು ನೀಡಬೇಕು” ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ. ಪ್ರಸ್ತುತ ನೆರೆ ರಾಜ್ಯಗಳ ಹಾಲಿನ ದರ ಪರಿಶೀಲಿಸಿ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕವೇ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 am, Fri, 2 October 26