Cubbon Park New Rules: ಕಬ್ಬನ್ ಪಾರ್ಕ್‌ಗೆ ಹೋಗುವ ಪ್ರೇಮಿಗಳೇ ಎಚ್ಚರ! ಈಗ ಬಂದಿದೆ ಹೊಸ ನಿಯಮ
ದಂಪತಿಗಳು/ಪ್ರೇಮಿಗಳು ಮಿತಿಮೀರಿ ಪರಸ್ಪರ ಹತ್ತಿರವಾಗುವಂತಿಲ್ಲ, ಆಹಾರವನ್ನು ಅನುಮತಿಸಲಾಗುವುದಿಲ್ಲ, ಫೋಟೋಗಳು ಮತ್ತು ವೀಡಿಯೊಗಳನ್ನು ನಿಷೇಧಿಸಲಾಗಿದೆ ಮತ್ತು ಕ್ರೀಡೆ, ಆಟ ಅಥವಾ ಮರ ಹತ್ತುವುದನ್ನು ಅನುಮತಿಸುವುದಿಲ್ಲ
ಬೆಂಗಳೂರು: ಸಂಜೆ ವೇಳೆ ಅಥವಾ ವಾರಾಂತ್ಯದಲ್ಲಿ ಬೆಂಗಳೂರಿಗರು (Bengalurians) ಹೆಚ್ಚು ಹೋಗುವ ಸ್ಥಳವೆಂದರೆ ಕಬ್ಬನ್ ಪಾರ್ಕ್ (Cubbon Park). ಇಲ್ಲಿನ ಪರಿಸರ ಯಾರನ್ನು ಬೇಕಾದರೂ ಸೆಳೆಯುತ್ತದೆ. ಆದರೆ ಹೀಗೆ ಹೋದವರು ಅಲ್ಲಿ ತಿಂಡಿ-ತಿನಿಸುಗಳನ್ನು ತಿಂದು ಅಲ್ಲಿನ ಪರಿಸರವನ್ನು ಹಾಳು ಮಾಡುತ್ತಿರುವ ಬಗ್ಗೆ ಈಗಾಗಲೇ ಹಲವಾರು ವರದಿಗಳು ಬಂದಿದೆ. ಇದರ ಜೊತೆ ದಂಪತಿಗಳು/ಪ್ರೇಮಿಗಳು ಅಶ್ಲೀಲವಾಗಿ ವರ್ತಿಸುವುದರಿಂದ ಮಕ್ಕಳನ್ನು ಉದ್ಯಾನವನಕ್ಕೆ ಕರೆ ತರಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲವನ್ನು ಪರಿಗಣಿಸಿದ ಇಲಾಖೆ ಕಬ್ಬನ್ ಪಾರ್ಕ್‌ಗೆ ಹೋಗುವವರಿಗೆ ಹೊಸ ನಿಯಮಗಳನ್ನು (New Rules) ಜಾರಿಗೆ ತಂದಿದೆ.
ಬೆಂಗಳೂರಿಗರ ಅತ್ಯಂತ ಪ್ರಿಯವಾದ ಸ್ಥಳವಾದ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವ ಇನ್ನು ಮುಂದೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಂಪತಿಗಳು/ಪ್ರೇಮಿಗಳು ಮಿತಿಮೀರಿ ಪರಸ್ಪರ ಹತ್ತಿರವಾಗುವಂತಿಲ್ಲ, ಆಹಾರವನ್ನು ಅನುಮತಿಸಲಾಗುವುದಿಲ್ಲ, ಫೋಟೋಗಳು ಮತ್ತು ವೀಡಿಯೊಗಳನ್ನು ನಿಷೇಧಿಸಲಾಗಿದೆ ಮತ್ತು ಕ್ರೀಡೆ, ಆಟ ಅಥವಾ ಮರ ಹತ್ತುವುದನ್ನು ಅನುಮತಿಸುವುದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಈಗ ಒಂದು ತಿಂಗಳಿನಿಂದ 300 ಎಕರೆ ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಗುಂಪುಗಳಿಗೆ ಧ್ವನಿವರ್ಧಕಗಳ ಮೂಲಕ ಅಥವಾ ಸಿಳ್ಳೆಗಳನ್ನು ಊದುವ ಮೂಲಕ ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಲವು ಚಟುವಟಿಕೆಗಳಿಂದ ಮಕ್ಕಳಿಗೆ ಉದ್ಯಾನದ ವಾತಾವರಣ ಸೂಕ್ತವಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವರು ಉದ್ಯಾನವನದ ವಾತಾವರಣವನ್ನು ಹಾಳು ಮಾಡದಂತೆ ಭದ್ರತಾ ಸಿಬ್ಬಂದಿಗೆ ಮೌಖಿಕ ಸೂಚನೆಗಳನ್ನು ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಾರ್ನಲ್ಲಿ ಎಣ್ಣೆ ಹೊಡೆಯುವಾಗ ಶುರುವಾಯ್ತು ಕಿರಿಕ್; ಮಾತಿಗೆ ಮಾತು ಬೆಳೆದು ಇಬ್ಬರು ಯುವಕರ ಕಿಡ್ನಾಪ್
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು TOI ಗೆ, “ನಾವು ಕುಟುಂಬಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ (ಪ್ರೇಮಿಗಳು/ದಂಪತಿಗಳು ಸಾರ್ವಜನಿಕವಾಗಿ ಪ್ರೀತಿಯನ್ನು ಪ್ರದರ್ಶಿಸುವ ಬಗ್ಗೆ) ಇದೊಂದೇ ಸಮಸ್ಯೆಯಲ್ಲ. ಇವರು ಪೊದೆಗಳ ಹಿಂದೆ ಅಡಗಿಕೊಳ್ಳುವುದರಿಂದ ಇದು ಸುರಕ್ಷತೆಯ ವಿಷಯವಾಗಿದೆ. ಅಲ್ಲಿನ ಹಾವುಗಳು ಮತ್ತು ಕೀಟಗಳು ಅವರಿಗೆ ಹಾನಿಯಾಗಬಹುದು. ಸ್ನೇಹಪರ ದಂಪತಿಗಳ ಮೇಲೆ ಧ್ವನಿವರ್ಧಕಗಳನು ಉಪಯೋಗಿಸುವ ಉದ್ದೇಶ ನಮಗಿಲ್ಲ; ಇದು ನಿಯಮಗಳನ್ನು ಉಲ್ಲಂಘಿಸಿ ಉದ್ಯಾನವನ್ನು ಹಾಳುಮಾಡುವವರಿಗೆ ಮಾತ್ರ.” ಎಂದು ಹೇಳಿದರು
ಕಬ್ಬನ್ ಪಾರ್ಕ್ ಭದ್ರತಾ ಸಿಬ್ಬಂದಿ, “ನಾವು ಪ್ರೇಮಿಗಳ ಮೇಲೆ ಹೆಚ್ಚು ಗಮನ ಹರಿಸುವುದಕ್ಕಿಂತ, ಸಾರ್ವಜನಿಕರ ಕಣ್ಣು ತಪ್ಪಿಸಿ ಪೊದೆಗಳಿಗೆ ನುಗ್ಗುವ ಜೋಡಿಗಳ ಬಗ್ಗೆ ಕಣ್ಣಿಟ್ಟಿರುತ್ತೇವೆ. ಇದು ಕೇವಲ ಅಸಭ್ಯ ವರ್ತನೆಯನ್ನು ತಡೆಯುವುದು ಮಾತ್ರವಲ್ಲದೆ ಅವರನ್ನು ಕೀಟ-ಹಾವುಗಳಿಂದ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ. ಪ್ರೇಮಿಗಳು, ಮಕ್ಕಳು ಸಂತೋಷವಾಗಿ ಕಾಲ ಕಳೆಯುವ ಈ ಸ್ಥಳದಲ್ಲಿ ಒಂದು ವರದ ಹಿಂದೆ ನಗರ ಹಾವನ್ನು ನಾವು ಹಿಡಿದಿದ್ದೇವೆ.” ಎಂದು ಹೇಳಿದರು
Published On - 1:02 pm, Thu, 13 April 23