ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ವಿವಾದಕ್ಕೆ ತೆರೆಳೆದ BMRCL

ಟಿಕೆಟ್‌ ದರ ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ ಶೌಚಾಲಯ ಬಳಕೆಗೂ ಶುಲ್ಕ ವಿಧಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಸಂಬಂಧ ಸಾಮಾಜಿಲ ಜಾಲತಾಣಗಳಲ್ಲಿ ನಮ್ಮ ಮೆಟ್ರೋ ನಡೆಗೆ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ಬಿಎಂಆರ್​ಸಿಎಲ್​ ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕದ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಮೂಲಕ ಅಂತೆ ಕಂತೆ ಗೊಂದಲಗಳಿಗೆ ತೆರೆ ಎಳೆದಿದೆ.

ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ವಿವಾದಕ್ಕೆ ತೆರೆಳೆದ BMRCL
ನಮ್ಮ ಮೆಟ್ರೋ

Updated on: May 23, 2025 | 10:19 PM

ಬೆಂಗಳೂರು, (ಮೇ 23): ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೂ ದುಡ್ಡು ಕೊಡಬೇಕು ಎನ್ನುವ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಇದೀಗ ಬಿಎಂಆರ್‌ಸಿಎಲ್ (BMRCL) ಸ್ಪಷ್ಟನೆ ನೀಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ವಿಧಿಸಲ್ಲ. ಬದಲಿಗೆ ಮೆಟ್ರೋ ಸ್ವೈಪ್ ಗೇಟ್​ಗಿಂತ ಹೊರಗಿರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಬಿಎಂಆರ್​ಸಿಎಲ್​ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಗಳಿಗೆ ಬಳಕೆದಾರರ ಶುಲ್ಕ ನಿಗದಿ ಮಾಡಿರುವುದಿಲ್ಲ. ಮೆಟ್ರೋ ಸ್ವೈಪ್ ಗೇಟ್ ಒಳಗೆ ಇರುವ ಶೌಚಾಲಯಗಳ ಬಳಕೆ ಮುಂದೆಯೂ ಉಚಿತವಾಗಿ ಇರುತ್ತದೆ. ಆದ್ರೆ, ಮೆಟ್ರೋ ಸ್ವೈಪ್​ಗೇಟ್ ಗಿಂತ ಹೊರಗಿರುವ ಶೌಚಾಲಯಗಳನ್ನು ಪ್ರಯಾಣಿಕರಲ್ಲದೇ ಬೇರೆ ಸಾರ್ವಜನಿಕರು ಬಳಸುತ್ತಾರೆ. ಹೀಗಾಗಿ ಅಂತಹ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿ ಮಾಡಲಾಗಿದೆ ಎಂದು ಬಿಎಂಆರ್​ಸಿಎಲ್​ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೂ ಶುಲ್ಕ: ಬಿಎಂಆರ್​ಸಿಎಲ್ ನಿರ್ಧಾರಕ್ಕೆ ವ್ಯಾಪಕ ವಿರೋಧ

ಸ್ವೈಪ್ ಗೇಟ್ ಹೊರಗಿರುವ ಶೌಚಾಲಯಗಳಿಗೆ ಶುಲ್ಕ

ನಮ್ಮ ಮೆಟ್ರೋ ಸ್ವೈಪ್ ಗೇಟ್ ಆಚೆ ಇರುವ 12 ಶೌಚಾಲಯ ಬಳಕೆಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಶುಲ್ಕ ನಿಗದಿಪಡಿಸಿದೆ. ಖಾಸಗಿ ಸಂಸ್ಥೆಯ ಜೊತೆಗೆ ಬಿಎಂಆರ್‌ಸಿಎಲ್ ನಿರ್ವಹಣೆ ಒಪ್ಪಂದ ಮಾಡಿಕೊಂಡಿದ್ದು, ಮೂತ್ರ ವಿಸರ್ಜನೆಗೆ 2 ರೂ., ಮಲ ವಿಸರ್ಜನೆಗೆ 5 ರೂ. ದರ ನಿಗದಿ ಮಾಡಿದೆ. ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌಥ್ ಆ್ಯಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಇನ್ನು ಮುಂದೆ ಪಾವತಿಸಿ ಬಳಸಬೇಕಾಗುತ್ತದೆ ಎಂದು ತಿಳಿಸಿತ್ತು.

ಈ ನಡುವೆ ಸರ್ಕಾರದ ಈ ನಡೆಗೆ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಪ್ರಯಾಣ ದರವನ್ನು ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಶೌಚಾಲಯಗಳನ್ನು ಬಳಸಲು ಜನರಿಂದ ಹಣ ಕೀಳಲು ಮುಂದಾಗಿದೆ. ಕಾಂಗ್ರೆಸ್ ನಾಟಕ ಪುಸ್ತಕದಲ್ಲಿ ಶೌಚಾಲಯಗಳು ಸಹ ಆದಾಯದ ಮೂಲವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯಗಳ ಬಳಸಲು ಜನರಿಂದ ಶುಲ್ಕ ಪಡೆಯುವ ಹಂತಕ್ಕೆ ಬಂದಿದೆ . ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಕುಸಿಯುತ್ತಿರುವ ಮೂಲಸೌಕರ್ಯಗಳೊಂದಿಗೆ ಹೋರಾಡುತ್ತಿರುವ ನಗರದಲ್ಲಿ, ಕಾಂಗ್ರೆಸ್ ಈಗ ಮೂಲಭೂತ ಮಾನವ ಅಗತ್ಯಗಳನ್ನು ಪೂರೈಸುವಲ್ಲಿಯೂ ಹಣ ಮಾಡುವ ಮಾರ್ಗವನ್ನು ಕಂಡುಕೊಂಡಿದೆ ಎಂದು ಕಿಡಿಕಾರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ