ಕೋರ್ಟ್ ಛೀಮಾರಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ತೆರವಿಗೆ ಸೂಚನೆ

| Updated By: Rakesh Nayak Manchi

Updated on: Aug 08, 2023 | 4:52 PM

ನ್ಯಾಯಾಲಯದ ಆದೇಶದಂತೆ ಬೆಂಗಳೂರಿನಲ್ಲಿ ಯಾವುದೇ ಅನಧಿಕೃತ ಫ್ಲೆಕ್ಸ್, ಬ್ಯಾನರ್​ ಅಳವಡಿಸುವಂತಿಲ್ಲ ಎಂದು ಉಪ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೋರ್ಟ್ ಛೀಮಾರಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ತೆರವಿಗೆ ಸೂಚನೆ
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
Follow us on

ಬೆಂಗಳೂರು, ಆಗಸ್ಟ್ 8: ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್​ ಅಳವಡಿಸುವಂತಿಲ್ಲ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D. K. Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ (Bengaluru) ಹಾಕಿರುವ ಫ್ಲೆಕ್ಸ್, ಬ್ಯಾನರ್​ಗಳನ್ನು ಹಾಕಿದ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಬ್ಯಾನರ್​ಗಳನ್ನು ತೆರವುಗೊಳಿಸಲು ಮುಂದಾಗಿದೆ.

ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಸೌಂದರ್ಯ ಕಾಪಾಡಲು ಬ್ಯಾನರ್​ಗಳನ್ನು ನಿಷೇಧಿಸುತ್ತಿದ್ದೇವೆ. ಮುಖ್ಯಮಂತ್ರಿ, ಡಿಸಿಎಂ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ರೀತಿಯ ಫ್ಲೆಕ್ಸ್ ಹಾಕುವಂತಿಲ್ಲ ಎಂದರು.

ಸರ್ಕಾರಿ ಜಾಹೀರಾತು ಪ್ರಕಟಿಸುವ ಬಗ್ಗೆ ಶೀಘ್ರದಲ್ಲೇ ನಿಯಮ ರೂಪಿಸ್ತೇವೆ. ಬ್ಯಾನರ್ ಹಾಕದಂತೆ ವೈಯಕ್ತಿಕವಾಗಿ ವಿನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ. ಧಾರ್ಮಿಕ, ರಾಜಕೀಯ, ಸಾಮಾಜಿಕ ಫ್ಲೆಕ್ಸ್ ಹಾಕದಂತೆ ಮನವಿ ಮಾಡುವೆ. ಆಗಸ್ಟ್ 15 ರ ಒಳಗಾಗಿ ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳ್ನು ತೆರವು ಮಾಡುತ್ತೇವೆ. ಯಾರಾದರೂ ಅಕ್ರಮವಾಗಿ ಫ್ಲೆಕ್ಸ್ ಹಾಕಿದ್ದರೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ಕೇಳಿಬಂತು ಕಮಿಷನ್ ಆರೋಪ, ಬಿಬಿಎಂಪಿ ಗುತ್ತಿಗೆದಾರರ ಬಳಿ ಹಣಕ್ಕೆ ಬೇಡಿಕೆ‌ ಇಟ್ಟರಾ ಡಿಸಿಎಂ?

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನನಗೆ ಶುಭಾಶಯ ಕೋರಿ ನನ್ನ ಅಭಿಮಾನಿ ಫ್ಲೆಕ್ಸ್ ಹಾಕಿದರೂ ಕ್ರಮ ಕೈಗೊಳ್ಳುತ್ತೇವೆ. ಫ್ಲೆಕ್ಸ್, ಬ್ಯಾನರ್ ಹಾಕಿದವರ ವಿರುದ್ಧ ಕೇಸ್ ದಾಖಲಿಸಿ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯಪಾಲರಿಗೆ ದೂರು ಕೊಡಲಿ, ಸಿಎಂಗೂ ದೂರು ಕೊಡಲಿ: ಡಿಕೆ ಶಿವಕುಮಾರ್

ಬಿಲ್ ಪಾವತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ನೀಡಿದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯಪಾಲರಿಗೆ ದೂರು ಕೊಡಲಿ, ಮುಖ್ಯಮಂತ್ರಿ ಅವರಿಗೂ ದೂರು ಕೊಡಲಿ ಎಂದರು. ನಮಗೂ‌ ಸಾಕಷ್ಟು ವರದಿ ಬಂದಿದೆ, ನೈಜತೆ ಪರಿಶೀಲಿಸಿ ಎಂದಿದ್ದಾರೆ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್​ ಪಾವತಿ ಮಾಡುತ್ತೇವೆ. ಹಲವು ನಕಲಿ ಬಿಲ್​ಗಳು ನನ್ನ ಗಮನಕ್ಕೆ ಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುತ್ತಿಗೆದಾರರು ಬ್ಲ್ಯಾಕ್​ಮೇಲ್ ಅಲ್ಲ, ಪ್ರೀತಿ ತೋರಿಸುತ್ತಿದ್ದಾರೆ. ನ್ಯಾಯಬದ್ಧವಾಗಿ ಕೆಲಸ ಮಾಡಿದವರಿಗೆ ಹಣ ಸಿಗಲೇಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ