ಡಿಕೆ ಶಿವಕುಮಾರ್ ವಿರುದ್ಧ ಕೇಳಿಬಂತು ಕಮಿಷನ್ ಆರೋಪ, ಬಿಬಿಎಂಪಿ ಗುತ್ತಿಗೆದಾರರ ಬಳಿ ಹಣಕ್ಕೆ ಬೇಡಿಕೆ ಇಟ್ಟರಾ ಡಿಸಿಎಂ?
ಅಧಿಕಾರಿಗಳ ಬಳಿ ಕೃಷಿ ಸಚಿವ ಚಲುವರಾಯಸ್ವಾಮಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಎಂದು ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ.
ಬೆಂಗಳೂರು, (ಆಗಸ್ಟ್ 08): ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಸಚಿವರ ವಿರುದ್ಧ ಒಂದಲ್ಲ ಒಂದು ಗಂಭೀರ ಆರೋಪಗಳು ಕೇಳಿರುತ್ತಿವೆ. ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ, ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಕಮಿಷನ್ ಆರೋಪಗಳನ್ನು ಮಾಡುತ್ತಿವೆ. ಇದರ ಬೆನಲ್ಲೇ ಇದೀಗ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar)ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ. ಬಾಕಿ ಬಿಲ್ ಪಾವತಿಗಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ತನಿಖೆ ಆರಂಭ
ಬಿಬಿಎಂಪಿ ಗುತ್ತಿಗೆದಾರರ ಸಂಘ ನಿನ್ನೆ(ಆಗಸ್ಟ್ 08) ಸುದ್ದಿಗೋಷ್ಟಿ ನಡೆಸಿದ್ದರು. ಆದ್ರೆ, ಸುದ್ದಿಗೋಷ್ಟಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡದಕ್ಕಾಗಿ ಅವರಲ್ಲೇ ವಾಗ್ವಾದ ನಡೆದಿತ್ತು. ಈ ವೇಳೆ ಗುತ್ತಿಗೆದಾರ ಹೇಮಂತ್ ಎನ್ನುವರು ಡಿಕೆ ಶಿವಕುಮಾರ್ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹಣ ಕೇಳಿಲ್ಲ ಎನ್ನುವುದಾದರೆ ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ. ಹಣ ಕೇಳಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಹೇಮಂತ್ ಎನ್ನುವವರು ಚಾಲೆಂಜ್ ಮಾಡಿದ್ದಾರೆ.
ನಾವು ನ್ಯಾಯಯುತವಾಗಿ ಕೆಲಸ ಮಾಡಿದ್ದೇವೆ. ಇಷ್ಟು ದಿನ ಅವರೇ ಅಲ್ವಾ ಬಿಲ್ ಪಾವತಿ ಮಾಡುತ್ತಿರುವುದು. ಈಗ ಯಾಕೆ ಅವರು ಬಿಲ್ ತಡೆಯುತ್ತಾರೆ. ಅವರಿಗೆ ಬಿಲ್ ತಡೆ ಹಿಡಿಯುವಂತೆ ಹೇಳಿರುವುದು ಯಾರು ಅವರ ಬಗ್ಗೆ ಮಾತನಾಡಿ. ಈಗ ಸಮಿತಿ ಮಾಡಿದ್ದಾರೆ. ಬಿಲ್ ಬಿಡುಗಡೆ ಮಾಡಿಸಿಕೊಳ್ಳುತ್ತೀರಾ? ಎಂದು ಗುತ್ತಿಗೆದಾರ ಪ್ರಶ್ನಿಸಿದ್ದು, ನಾವೇನು ಕಳ್ಳತನ ಮಾಡಿಲ್ಲ. ಕೋರ್ಟ್ಗೆ ಹೋಗೋಣ ನಡೆಯಿರಿ. ನಾನು ಕೂಡ ಕಾಂಗ್ರೆಸ್ ಗೆ ಓಟ್ ಹಾಕಿದವನು. 94 ಕೋಟಿ ರೂ, ಬಿಲ್ ಬಾಕಿ ಬಿಲ್ ಬರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಗುತ್ತಿಗೆದಾರನ ಮಾತುಗಳು ಈಗ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.
ಗುತ್ತಿಗೆದಾರರ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು
ಬಾಕಿ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಇದಕ್ಕೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ಯಾರಿಗೂ ಉತ್ತರ ಕೊಡಲ್ಲ. ನನಗೂ ಪ್ರಜ್ಞೆ ಇದೆ. ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆಂದು ನನಗೂ ಗೊತ್ತಿದೆ. ಯಾವ ಬ್ಲ್ಯಾಕ್ಮೇಲ್ ಕೂಡ ನನ್ನ ಮುಂದೆ ನಡೆಯುವುದಿಲ್ಲ. ನಾವು ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ಆಗುವುದಿಲ್ಲ. ಯಾರಿಗೋ ಬ್ಲ್ಯಾಕ್ಮೇಲ್ ಮಾಡಿದಂತೆ ನನಗೆ ಮಾಡಲು ಬರಬೇಡಿ ಎಂದು ಖಡಕ್ ಆಗಿ ತಿರುಗೇಟು ನೀಡಿದರು.
ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ? ಯಾವ ಒತ್ತಡ ಇದ್ದರೂ ತಡೆದುಕೊಳ್ಳಲು ರೆಡಿ. ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ. ನನಗೆ ಬೆದರಿಕೆ ಹಾಕಿದ್ರೆ ಕೇಳ್ತೀನಾ.? ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವಥ್ ನಾರಾಯಣ್, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಹೇಳಿದ್ದು ಸತ್ಯ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:45 pm, Tue, 8 August 23