ನಮ್ಮ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿಲ್ಲ; ಇಂಧನ ಸಚಿವರ ಆರೋಪಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು

|

Updated on: Jun 13, 2023 | 11:59 AM

ನಮ್ಮ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿದ್ಯುತ್​ ದರ ಹೆಚ್ಚಳದ ವರದಿಗೆ ನಾವು ಒಪ್ಪಿಗೆ ನೀಡಿರಲಿಲ್ಲ.

ನಮ್ಮ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿಲ್ಲ; ಇಂಧನ ಸಚಿವರ ಆರೋಪಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಬರುತ್ತಿದ್ದಂತೆ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು ಜನ ಸಾಮಾನ್ಯರಿಗೆ ಬರೆ ಎಳೆದಂತಾಗಿದೆ. ಗೃಹಜ್ಯೋತಿ ಯೋಜನೆ( Gruha Jyothi Scheme) ಘೋಷಿಸಿ ಮತ್ತೊಂದೆಡೆ ದರ ಹೆಚ್ಚಿಸಿದ್ದಾರೆ ಎಂದು ಜನ ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಇತ್ತ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್(KJ George), ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿದ್ಯುತ್ ದರ ಏರಿಕೆಯಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಾರಿಗೆ ಬಂದಿರಲಿಲ್ಲ. ಈಗ ಜಾರಿಯಾಗಿದೆ ಎಂದು ​ಸಮಜಾಯಿಷಿ ನೀಡಿದ್ದರು. ಅಲ್ಲದೆ ಪ್ರಿಯಾಂಕ್ ಖರ್ಗೆ, ಡಾ ಜಿ ಪರಮೇಶ್ವರ್ ಸಹ ಇದೇ ಉಚ್ಛರಿಸಿದ್ದರು. ಕೆ.ಜೆ. ಜಾರ್ಜ್ ಹೇಳಿಕೆಗೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ತಿರುಗೇಟು ನೀಡಿದ್ದಾರೆ.

ನಮ್ಮ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿದ್ಯುತ್​ ದರ ಹೆಚ್ಚಳದ ವರದಿಗೆ ನಾವು ಒಪ್ಪಿಗೆ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ವರದಿಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ವಿದ್ಯುತ್​ ದರ ಹೆಚ್ಚಳವಾಗಿದೆ ಎನ್ನುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಗ್ಯಾರಂಟಿ ಯೋಜನೆ ವಿಚಾರದಲ್ಲಿ ಕಾದುನೋಡುವ ತಂತ್ರ ನಮ್ಮದು. ಉಚಿತ ಪ್ರಯಾಣ ವಿಚಾರದಲ್ಲಿ ಸರ್ಕಾರ ಆರಂಭ ಶೂರತ್ವ ತೋರುತ್ತಿದೆ. ಗ್ಯಾರಂಟಿ ಜಾರಿಗೆ ಹಣಕಾಸಿನ ಬಗ್ಗೆ ಸರ್ಕಾರ‌ ಸ್ಪಷ್ಟವಾಗಿ ಹೇಳುತ್ತಿಲ್ಲ. ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಒಂದು ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಯಲ್ಲಿ ಕೂಡುವಂತಾಗಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸ್ಪಷ್ಟನೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳು ಕಳೆಯುತ್ತಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ತಡವಾಗಿ ಬಿತ್ತನೆ ತಡವಾಗಿದೆ. ಮಾನ್ಸೂನ್ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಮಾತುಗಳು ಕೇಳಿ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಸನ್ನದ್ದವಾಗಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದ ಡ್ಯಾಂಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ. ಇಷ್ಟು ಬೇಗ ಬರಗಾಲ ಅಂತ ಹೇಳಲ್ಲ. ಹೀಗಾಗಿ ಸರ್ಕಾರದ ಸಮರ್ಪಕವಾಗಿ ಪ್ಲಾನ್ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಬೇಕು. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಆ ಟಾಸ್ಕ್ ಫೋರ್ಸ್​ನಲ್ಲಿರ ಬೇಕು ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ ನೂರು ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್​ಡಿಆರ್​ಎಫ್ ತಂಡಗಳನ್ನು ಚುರುಕುಗೊಳಿಸಬೇಕು. ಸ್ಥಳೀಯ ಮಟ್ಟದಲ್ಲಿ ಬಿಗಿ ಮಾಡಬೇಕು. ಇದು ಜವಾಬ್ದಾರಿ ಇಲ್ಲದ ಸರ್ಕಾರ, ಸಹಾಯಕವಲ್ಲದ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.

ವಿದ್ಯುತ್ ದರ ಹೆಚ್ಚು ಅನಿಸಿದರೆ ಮರುಪರಿಶೀಲನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ -ಕೆ.ಜೆ.ಜಾರ್ಜ್‌

ವಿದ್ಯುತ್ ದರ ಏರಿಕೆ ಮಾಡುವ ತೀರ್ಮಾನ ಕಾಂಗ್ರೆಸ್ ಸರ್ಕಾರದ್ದಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ್ದು. ಆದ್ದರಿಂದ ಈಗ ದರ ಏರಿಕೆ ಮಾಡಿರುವ ಕೆಇಆರ್‌ಸಿ ಕ್ರಮವನ್ನು ನಾವು ಜಾರಿ ಮಾಡಲೇಬೇಕಾಗುತ್ತದೆ. ದರ ಏರಿಕೆ ಹೊರೆಯಾಗಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ದರ ಏರಿಕೆ ಏಪ್ರಿಲ್‌ನಿಂದ ಜಾರಿಯಾಗಿರುವುದರಿಂದ ಮೇ ತಿಂಗಳ ಬಿಲ್‌ನಲ್ಲಿ ಹೆಚ್ಚು ಬಂದಿದೆ. ಜುಲೈನಿಂದ ಗೃಹಜ್ಯೋತಿ ಜಾರಿಯಾಗುವುದರಿಂದ ಯಾರಿಗೂ ಹೆಚ್ಚು ಹೊರೆಯಾಗಲಾರದು. ದರ ಏರಿಕೆ ಹೆಚ್ಚು ಎನಿಸಿದರೆ ಮರುಪರಿಶೀಲನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ