ಆಟೋ ಸೀಟ್​​ ವಿಚಾರಕ್ಕೆ ಮಾರಾಮಾರಿ: ಕುಸಿದು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರಿನ ಪಾದರಾಯನಪುರದಲ್ಲಿ ಆಟೋ ಸೀಟ್ ವಿಚಾರಕ್ಕೆ ನಡೆದ ಗಲಾಟೆ ಮಾರಣಾಂತಿಕವಾಗಿ ಪರಿಣಮಿಸಿದೆ. ಆಟೋ ಚಾಲಕನಿಗೆ ಪರಿಚಯಸ್ಥ ವ್ಯಕ್ತಿಯೋರ್ವ ಮರದ ತುಂಡಿನಿಂದ ಹೊಡೆದಿದ್ದು, ಹಲ್ಲೆಗೊಳಗಾದ ಚಾಲಕ ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಕೊಲೆಯಲ್ಲಿ ಅಂತ್ಯವಾಗಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಆಟೋ ಸೀಟ್​​ ವಿಚಾರಕ್ಕೆ ಮಾರಾಮಾರಿ: ಕುಸಿದು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು
ಸಾಂದರ್ಭಿಕ ಚಿತ್ರ
Image Credit source: AI Image

Updated on: May 04, 2026 | 10:57 AM

ಬೆಂಗಳೂರು, ಮೇ 04: ಆಟೋ ಸೀಟ್​​ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ತೀವ್ರ ಹಲ್ಲೆಗೊಳಗಾಗಿದ್ದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಪಾದರಾಯನಪುರದಲ್ಲಿ ನಡೆದಿದೆ. ಮೃತನನ್ನು ಪರಿಚಿತನಿಂದ ಹಲ್ಲೆಗೊಳಗಾಗಿದ್ದ ಮುಬಾರಕ್​​ (26) ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಬ್ರೇಜ್ (46) ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಮೇ 1ರಂದು ಮುಬಾರಕ್ ತನ್ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ತಬ್ರೇಜ್ ಮೇಲೆ ಆರೋಪಿಸಿದ್ದ. ಇದೇ ವಿಚಾರವಾಗಿ ಬೆಳಗ್ಗೆ 10ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಇಬ್ಬರನ್ನೂ ಬೇರ್ಪಡಿಸಿದ್ದರು. ಹೀಗಿದ್ದರೂ ಮತ್ತೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ತಬ್ರೇಜ್ ಮರದ ತುಂಡಿನಿಂದ ಮುಬಾರಕ್ ಮೇಲೆ ದಾಳಿ ನಡೆಸಿದ್ದ. ಭೀಕರ ದಾಳಿ ವೇಳೆ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಪರಿಣಾಮ ಮುಬಾರಕ್ ಕುಸಿದು ಬಿದ್ದಿದ್ದ. ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮುಬಾರಕ್​​ ಕೋಮಾಗೆ ತಲುಪಿದ್ದು, ಚಿಕಿತ್ಸೆ ಫಲಿಸದೆ ಅಂತಿಮವಾಗಿ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಹಲ್ಲೆಗೊಳಗಾಗಿ ಮೃತಪಟ್ಟಿರುವ ಮುಬಾರಕ್​​ಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಎನ್ನಲಾಗಿದೆ. ಇನ್ನಯ ಘಟನೆ ಸಂಬಂಧ ಜಗಜೀವನರಾಮನಗರ ಪೊಲೀಸರು ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿ ತಬ್ರೇಜ್‌ನ್ನು ಬಂಧಿಸಿದ್ದರು. ಇದೀಗ ಮುಬಾರಕ್ ಸಾವಿನ ಹಿನ್ನೆಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಿದ್ದಾರೆ. ಕ್ಷುಲ್ಕ ವಿಚಾರಕ್ಕೆ ಶುರುವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us