
ಬೆಂಗಳೂರು, ಮಾರ್ಚ್ 30: ಪರಪ್ಪನ ಅಗ್ರಹಾರದಲ್ಲಿ ನಿರಂತರವಾಗಿ ಅವ್ಯವಹಾರಗಳ ಪ್ರಕರಣಗಳು ವರದಿಯಾಗುತ್ತಿವೆ. ಡಿಜಿಪಿ ಅಲೋಕ್ ಕುಮಾರ್ರಿಂದ (DGP Alok Kumar) ಜಾರಿಯಾಗಿರುವ ಕಟ್ಟುನಿಟ್ಟಿನ ಕ್ರಮದ ನಂತರವೂ ಈ ಅವ್ಯವಹಾರಗಳಿಗೆ ಬ್ರೇಕ್ ಬಿದ್ದಿಲ್ಲ. ಜೈಲಿನಲ್ಲೇ ಕೂತು ಕೈದಿಗಳು ವೀಡಿಯೋ ಮಾಡಿರುವುದು ಚರ್ಚೆಯಾದ ಬೆನ್ನಲ್ಲೇ ಕಳೆದ ಗುರುವಾರ ನಡೆದ ಮತ್ತೊಂದು ಅಕ್ರಮ ತಡವಾಗಿ ಬೆಳಕಿಗೆ ಬಂದಿದೆ.ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಒಳಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ 27 ವರ್ಷದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಾರ್ಚ್ 26ರಂದು ಸಂಜೆ ಸುಮಾರು 4 ಗಂಟೆಗೆ ಸಾಮಾನ್ಯ ಭೇಟಿಯ ವಿಭಾಗದಲ್ಲಿ ಈ ಘಟನೆ ನಡೆದಿದೆ. ಆರೋಪಿಯಾಗಿರುವ ರಿತಿಕಾ ರೈ, ಅಂಡರ್‌ಟ್ರಯಲ್ ಕೈದಿ ಫರ್ಹಾನ್ ಖಾನ್ ಅವರನ್ನು ಭೇಟಿ ಮಾಡಲು ಮಾನ್ಯ ಪಾಸ್ ಪಡೆದು ಬಂದಿದ್ದಳು. ಸಾಮಾನ್ಯ ತಪಾಸಣೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅನುಮಾನ ಉಂಟಾಗಿ ಸವಿವರ ಪರಿಶೀಲನೆ ನಡೆಸಿದಾಗ, ಮಹಿಳೆ ತನ್ನ ದೇಹದ ಖಾಸಗಿ ಭಾಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳು ಹಾಗೂ ಏರ್ಟೆಲ್ 5ಜಿ ಸಿಮ್ ಕಾರ್ಡ್‌ಗಳನ್ನು ಅಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!
ತಕ್ಷಣವೇ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ರಿತಿಕಾ ರೈ ಮತ್ತು ಫರ್ಹಾನ್ ಖಾನ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.