AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್

ಕರ್ನಾಟಕ ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಇತರೆ ಕೈದಿಗಳಿಗೆ ಆಹಾರ, ಹಾಸಿಗೆ ಬಟ್ಟೆಗಳನ್ನು ಒದಗಿಸುವ ಕುರಿತು ಇದೇ ಮೊದಲ ಬಾರಿಗೆ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಇಂತಹದ್ದೊಂದು ಹೊಸ ನಿಯಮವನ್ನು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ ಜಾರಿಗೆ ತಂದಿದ್ದಾರೆ. ಇದರಿಂದ ಜೈಲಿನಲ್ಲಿ ವಿಶೇಷ ಸೌಲಭ್ಯಕ್ಕೆ ಬ್ರೇಕ್ ಹಾಕಿದ್ದಾರೆ.

ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್
Alok Kumar
ರಮೇಶ್ ಬಿ. ಜವಳಗೇರಾ
|

Updated on: Jan 24, 2026 | 8:12 PM

Share

ಬೆಂಗಳೂರು, (ಜನವರಿ 24): ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ಮಹತ್ವದ ಸುತ್ತೋಲೆ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮವಹಿಸುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರಾಗೃಹ ಡಿಜಿಪಿ ಅವರ ಹೊಸ ಆದೇಶದಿಂದಾಗಿ ಕೊಲೆ ಆರೋಪದಲ್ಲಿ ಜೈಲಲ್ಲಿರುವ ದರ್ಶನ್ (Darshan) ಹೆಚ್ಚುವರಿ ಬ್ಲಾಂಕೆಟ್‌ ಸೌಲಭ್ಯಕ್ಕೆ ಕುತ್ತು ಎದುರಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಮನೆ ಊಟಕ್ಕೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ಹೈಕೋರ್ಟ್‌ ಮೌಖಿಕವಾಗಿ ಹೇಳಿತ್ತು. ಇದರ ಬೆನ್ನಲ್ಲೇ ಫುಡ್ ಮತ್ತು ಬೆಡ್ ಬಗ್ಗೆ ಹೊಸ ಆದೇಶ ಹೊರಬಿದ್ದಿದೆ.

ಇದನ್ನೂ ನೋಡಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ತಡೆಗೆ ಅಲೋಕ್​​ ಕುಮಾರ್​​ ಮಾಸ್ಟರ್​​ ಪ್ಲ್ಯಾನ್​​: ಇಲ್ಲಿದೆ ಮಾಹಿತಿ 

ವಿಚಾರಣಾಧೀನ ಕೈದಿಗಳು ಮತ್ತು ಸಿವಿಲ್ ಕೈದಿಗಳಿಗೆ ಆಹಾರ, ಹಾಸಿಗೆ ಮತ್ತು ಬಟ್ಟೆಗಳನ್ನು ಒದಗಿಸುವ ಬಗ್ಗೆ ಮೊದಲ ಬಾರಿಗೆ ನಿಯಮಗಳನ್ನು ರೂಪಿಸಲಾಗಿದೆ. ನಾವು ಹೊರಗಿನಿಂದ ಯಾವುದೇ ಆಹಾರವನ್ನು ಅನುಮತಿಸುವುದಿಲ್ಲ. ಬೆಂಗಳೂರು ಜೈಲಿನ ಆಹಾರವನ್ನು FSSAI ಪ್ರಮಾಣೀಕರಿಸಿದೆ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಸೂತ್ತೋಲೆಯಲ್ಲೇನಿದೆ?

ವಿಚಾರಣಾಧೀನ ಆರೋಪಿಗೆ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ನೀಡಲಾಗುತ್ತೆ. ಯಾವುದೇ ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಇನ್ನು ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಜೈಲಿನ ನಿಯಾಮವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗುತ್ತದೆ. ಇನ್ನು ಸಂದರ್ಶನ ವೇಳೆ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಸೂಚಿಸಲಾಗಿದೆ.

ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆ

ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಿರುವ ಆಹಾರ ನೀಡಲು ಅವಕಾಶವಿದ್ದು, ಬಾಳೆಹಣ್ಣು, ಸೇಬು, ಸೀಬೆಹಣ್ಣು, ಸಪೋಟ ಸೇರಿ 2 ಕೆಜಿಯಷ್ಟಿರಬೇಕು. ಡ್ರೈಫ್ರೂಟ್ಸ್, ಬೇಕರಿ ತಿನಿಸು ಸೇರಿದಂತೆ 500 ಗ್ರಾಮ್ ಮೀರುವಂತಿಲ್ಲ. ವಿಚಾರಣಾಧೀನ ಕೈದಿಗಳಿಗೆ 2 ಜೊತೆ ಬಟ್ಟೆ, 2 ಒಳಉಡುಪು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಜೈಲಿನಲ್ಲಿ ದೈಹಿಕ ತಪಾಸಣೆ, ಸೆಕ್ಯೂರಿಟಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದು, ಅಗತ್ಯವಿದ್ದರೆ ಜೈಲಿನ ಅಧಿಕಾರಿಗಳಿಂದ ಯಾವುದೇ ರೀತಿಯ ತಪಾಸಣೆ ಮಾಡಬಹುದು. ತಕ್ಷಣವೇ ಈ ನಿಯಮ ಜಾರಿಮಾಡುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ.

  • ಕರ್ನಾಟಕ ಕಾರಾಗೃಹ ಕಾಯ್ದೆ, 1963 ರ ಸೆಕ್ಷನ್ 30, ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೊಳಗಾಗದ ಕ್ರಿಮಿನಲ್ ಕೈದಿಗಳು, ಖಾಸಗಿ ಮೂಲಗಳಿಂದ ಆಹಾರ, ಬಟ್ಟೆ, ಹಾಸಿಗೆ ಅಥವಾ ಇತರ ಅಗತ್ಯ ವಸ್ತುಗಳನ್ನು ಸರಿಯಾದ ಸಮಯದಲ್ಲಿ, ಪರೀಕ್ಷೆಗೆ ಒಳಪಟ್ಟು ಮತ್ತು ಇನ್ಸ್‌ಪೆಕ್ಟರ್ ಜನರಲ್ ಅನುಮೋದಿಸಬಹುದಾದ ನಿಯಮಗಳಿಗೆ ಅನುಸಾರವಾಗಿ ಖರೀದಿಸುವ ಅಥವಾ ಸ್ವೀಕರಿಸುವ ಮೂಲಕ ತಮ್ಮನ್ನು ತಾವು ನಿರ್ವಹಿಸಲು ಅನುಮತಿಸುತ್ತದೆ.
  • ಕೈದಿಗಳು ಮತ್ತು ಶಿಕ್ಷೆಗೊಳಗಾಗದ ಕ್ರಿಮಿನಲ್ (ವಿಚಾರಣೆಯಲ್ಲಿರುವ) ಕೈದಿಗಳು ಸೇರಿದಂತೆ ಎಲ್ಲಾ ಕೈದಿಗಳಿಗೆ ಕರ್ನಾಟಕ ಕಾರಾಗೃಹ ಕಾಯ್ದೆ, 1963, ಕರ್ನಾಟಕ ಕಾರಾಗೃಹ ನಿಯಮಗಳು, 1974 ಮತ್ತು ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ, 2021 ರ ಪ್ರಕಾರ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯು ಈಗಾಗಲೇ ಸಾಕಷ್ಟು ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಒದಗಿಸುತ್ತಿದೆ.
  • ಜೈಲು ಭದ್ರತೆ, ಸುರಕ್ಷತೆ, ಸಿಬ್ಬಂದಿ ಕೊರತೆ, ಜನದಟ್ಟಣೆ, ಆಡಳಿತಾತ್ಮಕ ಕಾರ್ಯಸಾಧ್ಯತೆ ಮತ್ತು ಆರೋಗ್ಯ ಕಾಳಜಿಗಳ ಸಮಸ್ಯೆಗಳನ್ನು ಪರಿಗಣಿಸಿ, ಖಾಸಗಿ ಮೂಲಗಳಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಗಳ ಸ್ವೀಕೃತಿಯನ್ನು ನಿಯಂತ್ರಿಸುವುದು ಮತ್ತು ನಿರ್ಬಂಧಿಸುವುದು ಅಗತ್ಯವಾಗಿದೆ.

ಹೈಕೋರ್ಟ್ ಆದೇಶ ಸ್ವಾಗತಿಸಿದ್ದ ಅಲೋಕ್ ಕುಮಾರ್

ಪವಿತ್ರಗೌಡಗೆ ಮನೆಯೂಟಕ್ಕೆ ಹೈಕೋರ್ಟ್ ನಿಷೇಧ ಹೇರಿದ ಬಗ್ಗೆ ಪ್ರತಿಕ್ರಿಯಿಸಿದ್ದ ಅಲೋಕ್ ಕುಮಾರ್, ಪವಿತ್ರಗೌಡಗೆ (Pavitra Gowda) ಮನೆ ಊಟ ಕೊಡದೇ ಇರೋದು ಒಳ್ಳೆಯದು. ನಾವು ಕಾರಾಗೃಹದಲ್ಲಿ ಒಳ್ಳೆಯ ಊಟ ನೀಡುತ್ತಿದ್ದೇವೆ. ಮನೆಯಿಂದ ತರುವ ಊಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನು ಎಫ್ಎಸ್ಐಎಲ್‌ಗೆ ಪರೀಕ್ಷೆಗೆ ಕಳುಹಿಸಿ ಸರ್ಟಿಪೈಟ್ ಪಡೆದ ಬಳಿಕ ಕೈದಿಗಳಿಗೆ ನೀಡುತ್ತಿದ್ದೇವೆ ಎಂದಿದ್ದಾರೆ.

ಜೈಲಿನಲ್ಲಿರುವ ಕೈದಿಗಳಲ್ಲಿ ಪ್ರಭಾವಶಾಲಿ ಯಾರು, ಕೆಳಮಟ್ಟದಲ್ಲಿರೋರು ಯಾರು ಎಂದು ನೋಡಲು ಸಾಧ್ಯವಿಲ್ಲ. ಸೆಕ್ಷನ್ 30 ಕರ್ನಾಟಕ ಪ್ರಿಜನರ್ಸ್‌ ಆಕ್ಟ್ 1963 ಪ್ರಕಾರ ಕೈದಿಗಳಿಗೆ ಊಟ, ಬಟ್ಟೆ ಪುಸ್ತಕ ಕೂಡಬೇಕು. ಈ ನಿಯಮದ ಅಡಿ ತೀರ್ಮಾನ ಮಾಡಲಾಗುತ್ತದೆ. ಕಾರಗೃಹದ ಕೈದಿಗಳಿಗೆ ನಾವು ನೀಡುತ್ತಿರುವ ಊಟ ಸರ್ಟಿಫೈಡ್ ಆಗಿರುವುದರಿಂದ ಒಬ್ಬರಿಗೆ ಮನೆಯಿಂದ ಊಟ ನೀಡಿದ್ರೆ, ಮುಂದೆ ಸಾವಿರಾರು ಜನ ಇದೇ ರೀತಿ ಕೇಳುತ್ತಾರೆ. ಇದರಿಂದ ಪವಿತ್ರಗೌಡಗೆ ಮನೆ ಊಟ ನೀಡಲು ನಿರಾಕರಿಸಿರುವುದು ಒಳ್ಳೆಯದು ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ