ಪರಪ್ಪನ ಅಗ್ರಹಾರದಲ್ಲಿ ಅಕ್ರಮ ತಡೆಗೆ ಅಲೋಕ್ ಕುಮಾರ್ ಮಾಸ್ಟರ್ ಪ್ಲ್ಯಾನ್: ಇಲ್ಲಿದೆ ಮಾಹಿತಿ
ಡಿಜಿಪಿ ಅಲೋಕ್ ಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಕಠಿಣ ಪರಿಶೀಲನೆ ನಡೆಸಿದ್ದಾರೆ. ಕೈದಿಗಳ ಅಕ್ರಮ ಚಟುವಟಿಕೆಗಳ ವಿರುದ್ಧ 15 ದಿನಗಳ ಗಡುವು ನೀಡಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ದರ್ಶನ್ ಸೇರಿದಂತೆ ವಿಐಪಿ ಕೈದಿಗಳ ಸೆಲ್‌ಗಳಿಗೂ ಭೇಟಿ ನೀಡಿ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಜೈಲು ಸುಧಾರಣೆಗೆ ಸಿಬ್ಬಂದಿ ಕೊರತೆ ನೀಗಿಸಲು ಎಐ ತಂತ್ರಜ್ಞಾನ ಬಳಕೆಗೆ ಒತ್ತು ನೀಡೋದಾಗಿ ತಿಳಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 16: ಬಂದಿಖಾನೆ ವಿಭಾಗದ ನೂತನ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಅಲೋಕ್ ಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. 15 ದಿನಗಳ ಒಳಗಾಗಿ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಜೈಲು ಸಿಬ್ಬಂದಿಗೆ ಗಡುವು ನೀಡಿದ್ದು, ತಪ್ಪಾದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲು ಅಲೋಕ್ ಕುಮಾರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳು, ಸಾಧಾರಣ ಅಪರಾಧ ಪ್ರಕರಣಗಳಲ್ಲಿ ಬಂಧಿಯಾಗಿರುವ ಆರೋಪಿಗಳು ಮತ್ತು ಲಘು ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳು ಎಂದು ವಿಂಗಡಣೆಗೆ ಪ್ಲ್ಯಾನ್ ನಡೆದಿದೆ. ಆ ಮೂಲಕ ಘೋರ ಅಪರಾಧ ಮಾಡಿರುವ ಆರೋಪಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳುವ ಚಿಂತನೆ ನಡೆಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
