ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಮುಖ್ಯ ಅಧೀಕ್ಷಕ ಎತ್ತಂಗಡಿ, ಇಬ್ಬರು ಸಸ್ಪೆಂಡ್​

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋಗಳು ವೈರಲ್​ ಆಗಿರುವ ಬೆನ್ನಲ್ಲೇ ಗೃಹ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಓರ್ವ ಅಧಿಕಾರಿಯನ್ನ ಎತ್ತಂಗಡಿ ಮಾಡಿದ್ದರೆ, ಘಟನೆ ಸಂಬಂಧ ಇಬ್ಬರನ್ನು ಸಸ್ಪೆಂಡ್​ ಮಾಡಲಾಗಿದೆ. ಜೈಲಿನ ಮುಖ್ಯಸ್ಥರನ್ನಾಗಿ ಇನ್ನು ಮುಂದೆ ಐಪಿಎಸ್ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಮುಖ್ಯ ಅಧೀಕ್ಷಕ ಎತ್ತಂಗಡಿ, ಇಬ್ಬರು ಸಸ್ಪೆಂಡ್​
ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ
Edited By:

Updated on: Nov 10, 2025 | 2:14 PM

ಬೆಂಗಳೂರು, ನವೆಂಬರ್​ 10: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಜೊತೆಗೆ ಈ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಗೃಹ ಸಚಿವರು ಆದೇಶಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್​, ಘಟನೆ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ 5,000 ಕೈದಿಗಳಿದ್ದು, ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು ಒಟ್ಟಿಗೆ ಇರುತ್ತಾರೆ. ಹೀಗಾಗಿ ಜೈಲುಗಳ ಮೇಲೆ ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದ್ದು, 15 ದಿನದೊಳಗೆ ಇದು ಕಾರ್ಯನಿರ್ವಹಿಸಲಿದೆ. ಇನ್ಮುಂದೆ ಜೈಲಿನ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ, ವೈರಲ್ ವೀಡಿಯೋ ಬಗ್ಗೆ ಅಧಿಕಾರಿಗಳಿಗೆ ಗೃಹ ಸಚಿವರ ಕ್ಲಾಸ್​

5 ವರ್ಷಗಳ ನಂತರ ಜೈಲಿನ ಅಧಿಕಾರಿಗಳ ವರ್ಗಾವಣೆ ಕಡ್ಡಾಯವಾಗಲಿದ್ದು, ದೀರ್ಘಕಾಲ ಒಂದೇ ಕಡೆ ಕೆಲಸ ಮಾಡಿದರೆ ಬೇರು ಬಿಡುತ್ತಾರೆ. ಅವರು ಪ್ರಭಾವ ಬೀರುವ ಸಾಧ್ಯತೆ ಹಿನ್ನಲೆ ಅಂತವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಲಾಗಿದ್ದು, ಕೆಪಿಎಸ್​ಸಿ ಮೂಲಕ ಅಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಸಹಾಯಕ ಅಧೀಕ್ಷಕರು ಸೇರಿದಂತೆ 1,000 ಸಿಬ್ಬಂದಿ ನೇಮಕ ಮಾಡಲು ಉದ್ದೇಶಿಸಲಾಗಿದ್ದು, ಸಿಬ್ಬಂದಿ ಕೊರತೆ ನೀಗಿಸಿದರೆ ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸಬಹುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕಾನೂನು ಬಾಹಿರ ಚಟುವಟಿಕೆ ಆಗಿದೆ ಎಂದು ವರದಿಗಳು ಪ್ರಸಾರ ಆಗಿವೆ. ಮಾಧ್ಯಮಗಳಲ್ಲಿ ಆ ಬಗ್ಗೆ ಬಂದಿದ್ದನ್ನು ಗಮನಿಸಿದ್ದೇನೆ. ಆ ಪೈಕಿ ಮುಖ್ಯವಾದ ಕೆಲವು ವಿಡಿಯೋಗಳು 2023ರಲ್ಲಿ ಆಗಿರುವುದು. ಒಂದೆರಡು ವಿಡಿಯೋಗಳು ಮಾತ್ರ 3-4 ತಿಂಗಳ ಹಿಂದೆ ಆಗಿದ್ದು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:12 pm, Mon, 10 November 25