Accidents in Bengaluru: ಬೆಂಗಳೂರು ರಸ್ತೆ ಅಪಘಾತ; ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ

| Updated By: ಗಣಪತಿ ಶರ್ಮ

Updated on: Jun 19, 2023 | 5:41 PM

ಬೆಂಗಳೂರು ನಗರದಲ್ಲಿ 2020 ಕ್ಕೆ ಹೋಲಿಸಿದರೆ 2022 ರಲ್ಲಿ ಅಪಘಾತಗಳ ಸಂಖ್ಯೆ 120 ಮತ್ತು ಮೃತಪಟ್ಟವರ ಸಂಖ್ಯೆ 115ರಷ್ಟು ಹೆಚ್ಚಾಗಿದೆ.

Accidents in Bengaluru: ಬೆಂಗಳೂರು ರಸ್ತೆ ಅಪಘಾತ; ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 2022 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 247 ಮಂದಿ ಪಾದಚಾರಿಗಳು ಸಾವನ್ನಪ್ಪಿರುವುದು ನಗರ ಸಂಚಾರ ಪೊಲೀಸರ (Bengaluru Traffic Police) ವಿಸ್ತೃತ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ. ಪಾದಚಾರಿಗಳ ಸಾವಿಗೆ ಕಾರಣವಾದ ಅಪಘಾತಗಳು (Accidents in Bengaluru) 2020, 2021 ಮತ್ತು 2022 ರಲ್ಲಿ ಅತಿ ಹೆಚ್ಚು ಸಂಭವಿಸಿವೆ ಎಂದು 48 ಪುಟಗಳ ವರದಿಯಲ್ಲಿ ಹೇಳಲಾಗಿದೆ. ಬೆಂಗಳೂರು ನಗರದಲ್ಲಿ 2020 ಕ್ಕೆ ಹೋಲಿಸಿದರೆ 2022 ರಲ್ಲಿ ಅಪಘಾತಗಳ ಸಂಖ್ಯೆ 120 ಮತ್ತು ಮೃತಪಟ್ಟವರ ಸಂಖ್ಯೆ 115ರಷ್ಟು ಹೆಚ್ಚಾಗಿದೆ ಎಂದು ಪೊಲೀಸರ ವಿಶ್ಲೇಷಣೆ ತಿಳಿಸಿರುವುದಾಗಿ ‘ನ್ಯೂಸ್9’ ವರದಿ ಮಾಡಿದೆ.

2022 ರಲ್ಲಿ ರಸ್ತೆ ಅಪಘಾತಗಳಿಂದಾಗಿ ಪಾದಚಾರಿಗಳ ಸಾವಿನ ಪ್ರಮಾಣ ಶೇಕಡಾ 53.41 ರಷ್ಟು ಹೆಚ್ಚಾಗಿದೆ. 2021 ಮತ್ತು 2020 ರಲ್ಲಿ ಕ್ರಮವಾಗಿ 161 ಮತ್ತು 164 ಪಾದಚಾರಿಗಳು ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಹೊರತಾಗಿಯೂ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. 2022 ರಲ್ಲಿ, ಬೆಂಗಳೂರು ಟ್ರಾಫಿಕ್ ಪೊಲೀಸರು 1,04,49,571 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದು 2021 ರಲ್ಲಿ ದಾಖಲಿಸಿದ್ದ ಪ್ರಕರಣಗಳಿಗಿಂತ ಶೇ 12.29 ರಷ್ಟು ಹೆಚ್ಚಾಗಿದೆ.

ದ್ವಿಚಕ್ರವಾಹನ ಅಪಘಾತವೇ ಹೆಚ್ಚು

ಪಾದಚಾರಿಗಳ ಸಾವಿಗೆ ಕಾರಣವಾಗಿರುವ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳು ಅಗ್ರಸ್ಥಾನದಲ್ಲಿವೆ. 2022ರಲ್ಲಿ ದ್ವಿಚಕ್ರ ವಾಹನಗಳ ಅಪಘಾತದಲ್ಲಿ 64 ಪಾದಚಾರಿಗಳು ಸಾವನ್ನಪ್ಪಿದ್ದರು. ಇದು 2021 ರಲ್ಲಿ 47 ಮತ್ತು 2020 ರಲ್ಲಿ 52 ಆಗಿತ್ತು. 2020 ರಿಂದ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಪಘಾತಗಳೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. 2022 ರಲ್ಲಿ 200 ದ್ವಿಚಕ್ರ ವಾಹನ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, ಈ ಪೈಕಿ 141 ಮಂದಿ ಸ್ವಯಂ ಅಪಘಾತಗಳಿಂದ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ. ಅದೇ ವರ್ಷ, 85 ಮಂದಿ ಹಿಂಬದಿ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪಿದ್ದರು.

ಹೆಲ್ಮೆಟ್ ಧರಿಸಿದ್ದ ದ್ವಿಚಕ್ರ ವಾಹನ ಸವಾರರು

2022 ರಲ್ಲಿ ಸಂಭವಿಸಿದ್ದ 252 ಅಪಘಾತಗಳಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಸವಾರರಲ್ಲಿ ಹೆಚ್ಚಿನವರು ಹೆಲ್ಮೆಟ್ ಧರಿಸಿದ್ದರು. ಇದರಿಂದ ಹೆಚ್ಚಿನ ದ್ವಿಚಕ್ರವಾಹನ ಸವಾರರು ಬಳಸುತ್ತಿರುವ ಹೆಲ್ಮೆಟ್ ಕಳಪೆ ಗುಣಮಟ್ಟದ್ದು ಮತ್ತು ಅನೇಕರು ಸರಿಯಾಗಿ ಹೆಲ್ಮೆಟ್ ಧರಿಸದೇ ಇರುವುದು ತಿಳಿದುಬಂದಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿ: ಬೆಂಗಳೂರಿನ ಜನರ ಸಹಾಯಕ್ಕೆ ಬಂತು ತುರ್ತು ಸಹಾಯವಾಣಿ

ಒಂದೇ ವರ್ಷದಲ್ಲಿ 89 ಅಪಘಾತಗಳಿಗೆ ಗುರಿಯಾಗಿರುವ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ. 2022 ರಲ್ಲಿ 23 ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ಗಳನ್ನು ಧರಿಸಿರಲಿಲ್ಲ ಮತ್ತು 67 ಪ್ರಕರಣಗಳಲ್ಲಿ ಧರಿಸಿದ್ದರು ಎಂದೂ ವರದಿ ತಿಳಿಸಿದೆ.

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಏರಿಕೆ

2022 ರಲ್ಲಿ ಬೆಂಗಳೂರಿನಲ್ಲಿ 232 ಹಿಟ್ ಅಂಡ್ ರನ್ ಪ್ರಕರಣಗಳು ವರದಿಯಾಗಿವೆ. 2021 ಕ್ಕೆ ಹೋಲಿಸಿದರೆ ಇದು ಶೇಕಡಾ 22.75 ರಷ್ಟು ಏರಿಕೆ ಕಂಡಿದೆ. 2021 ಮತ್ತು 2020 ರಲ್ಲಿ ಕ್ರಮವಾಗಿ 189 ಮತ್ತು 194 ಹಿಟ್ ಅಂಡ್ ರನ್ ಪ್ರಕರಣಗಳು ವರದಿಯಾಗಿದ್ದವು ಎಂದು ವರದಿ ಉಲ್ಲೇಖಿಸಿದೆ.

ಸಾವಿನ ಸಂಖ್ಯೆ; ಪುರುಷರೇ ಹೆಚ್ಚು

ಕಳೆದ ಮೂರು ವರ್ಷಗಳಲ್ಲಿ ಸರಾಸರಿ 600 ಪುರುಷರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, 94 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. 21 ರಿಂದ 40 ವರ್ಷದೊಳಗಿನ ಪುರುಷರು ಮತ್ತು 31 ರಿಂದ 50 ವರ್ಷದೊಳಗಿನ ಮಹಿಳೆಯರು ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಹೆಚ್ಚಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Mon, 19 June 23