ಮೈಸೂರಿನಲ್ಲಿ ಮನೆಯ ಪಕ್ಕದ ಗಲ್ಲಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಬೆಂಗಳೂರಿನಲ್ಲೂ ಓರ್ವ ಬಂಧನ

ವಶಕ್ಕೆ ಪಡೆದ ಆರೋಪಿಯನ್ನು ಕುಂಟ ಸಿಂಗ್ರಯ್ಯ ಎಂದು ಗುರುತಿಸಲಾಗಿದ್ದು, ಆತನಿಂದ 5.8 ಕೆಜಿ ತೂಕದ ಗಾಂಜಾ ಗಿಡ ವಶಕ್ಕೆ ಪಡೆಯಲಾಗಿದೆ. ಇಷ್ಟು ಪ್ರಮಾಣದ ಗಾಂಜಾವನ್ನು ಕುಂಟ ಸಿಂಗ್ರಯ್ಯ ವಡೆಯರಹೊಸಹಳ್ಳಿಯ ತನ್ನ ಮನೆಯ ಪಕ್ಕದ ಗಲ್ಲಿಯಲ್ಲೇ ಬೆಳೆದಿದ್ದ.

ಮೈಸೂರಿನಲ್ಲಿ ಮನೆಯ ಪಕ್ಕದ ಗಲ್ಲಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಬೆಂಗಳೂರಿನಲ್ಲೂ ಓರ್ವ ಬಂಧನ
ಗಾಂಜಾ ಗಿಡ ವಶಕ್ಕೆ ಪಡೆದ ಪೊಲೀಸರು (ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿಕರ)
Edited By:

Updated on: Jun 29, 2021 | 7:41 AM

ಮೈಸೂರು: ಮನೆಯ ಪಕ್ಕದ ಗಲ್ಲಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವಡೆಯರಹೊಸಹಳ್ಳಿ ಎಂಬಲ್ಲಿ ವ್ಯಕ್ತಿಯೊಬ್ಬ ಗಾಂಜಾ ಬೆಳೆದಿದ್ದು, ಬಿಳಿಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಆರೋಪಿಯನ್ನು ಕುಂಟ ಸಿಂಗ್ರಯ್ಯ ಎಂದು ಗುರುತಿಸಲಾಗಿದ್ದು, ಆತನಿಂದ 5.8 ಕೆಜಿ ತೂಕದ ಗಾಂಜಾ ಗಿಡ ವಶಕ್ಕೆ ಪಡೆಯಲಾಗಿದೆ. ಇಷ್ಟು ಪ್ರಮಾಣದ ಗಾಂಜಾವನ್ನು ಕುಂಟ ಸಿಂಗ್ರಯ್ಯ ವಡೆಯರಹೊಸಹಳ್ಳಿಯ ತನ್ನ ಮನೆಯ ಪಕ್ಕದ ಗಲ್ಲಿಯಲ್ಲೇ ಬೆಳೆದಿದ್ದು, ಅದನ್ನು ಯಾವ ರೀತಿ ಬಳಸುತ್ತಿದ್ದ ಎನ್ನುವುದು ತಿಳಿದುಬಂದಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕುಂಟ ಸಿಂಗ್ರಯ್ಯನನ್ನು ವಶಕ್ಕೆ ಪಡೆದ ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಬಂಧನ
ಬೆಂಗಳೂರು: ಬೆಂಗಳೂರಿನ ಗ್ರೈನ್ ಬಜಾರ್ ಬಳಿ ಅಕ್ರಮವಾಗಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಟಿ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ನಾಯಂಡನಹಳ್ಳಿ ನಿವಾಸಿ ಬೇರಾರಾಮ್ (33) ಎಂಬುವವನನ್ನು ಬಂಧಿಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತ ಆರೋಪಿ ಹಾಗೂ ಆತನಿಂದ ವಶಕ್ಕೆ ಪಡೆದ ಮಾದಕ ವಸ್ತು (ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿಕರ)

ಬಂಧಿತ ಬೇರಾರಾಮ್​ನಿಂದ 1 ಕೆಜಿ 50 ಗ್ರಾಂ ಆಫೀಮ್, ಒಂದು ದ್ವಿಚಕ್ರವಾಹನ ಹಾಗೂ 2,050 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಈತ ಗ್ರೈನ್ ಬಜಾರ್ ಬಳಿ ಅಕ್ರಮವಾಗಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಅನ್​ಲಾಕ್​ ಬೆನ್ನಲ್ಲೇ ಮೈಮರೆತ ಜನ
ಮೈಸೂರು: ಮೈಸೂರಿನಲ್ಲಿ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಜನರು ನಿರ್ಲಕ್ಷ್ಯ ತೋರಲಾರಂಭಿಸಿದ್ದು, ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ರಸ್ತೆಗಿಳಿಯಲಾರಂಭಿಸಿದ್ದಾರೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಬೇಜವಾಬ್ದಾರಿ ತೋರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ ನಗರದಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ.

ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಕೊರೊನಾ ನಿಯಮಾವಳಿಗಳ ಉಲ್ಲಂಘನೆ ಮಾಡುವವರಿಂದ 1 ಲಕ್ಷದ 33 ಸಾವಿರದ 150 ರೂಪಾಯಿ ದಂಡ ಸಂಗ್ರಹ ಮಾಡಿದ್ದಾರೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿಸಲಾಗುತ್ತಿದ್ದು, ಇಂದು ಕೂಡಾ ಕಾರ್ಯಾಚರಣೆ ಮುಂದುವರೆಸಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
ನಮ್ಮ ಜವಾಬ್ದಾರಿ ಕೇವಲ ಡ್ರಗ್ ಪೆಡ್ಲರ್​ಗಳ ಬಂಧನವಲ್ಲ, ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧ; ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್