ಬೆಂಗಳೂರು, ಜುಲೈ 23: ಪಿಇಎಸ್ ಕಾಲೇಜಿನಲ್ಲಿ(PES University) ಎಂಜಿನಿಯರಿಂಗ್ ವಿದ್ಯಾರ್ಥಿ ಆದಿತ್ಯಾ ಪ್ರಭು(Aditya Prabhu) ಆತ್ಮಹತ್ಯೆ ಪ್ರಕರಣ ಸಂಬಂಧ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ. ಇನ್ನು ಮತ್ತೊಂದೆಡೆ ನಮ್ಮ ವಿಶ್ವವಿದ್ಯಾಲಯ ವಿರುದ್ಧ ಬಂದ ಆರೋಪಗಳು ಆಧಾರರಹಿತ ಎಂದು ಪಿಇಎಸ್ ಯೂನಿವರ್ಸಿಟಿ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನ ಮೈದಾನದಲ್ಲಿ #justiceforadityaprabhu ಎಂದು ಮೃತ ಆದಿತ್ಯ ಪೊಷಕರು, ಸ್ನೇಹಿತರು, ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ವಿದ್ಯಾರ್ಥಿ ಸಾವಿಗೆ ನ್ಯಾಯ ಕೊಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆ ವೇಳೆ ವಿದ್ಯಾರ್ಥಿ ಆದಿತ್ಯ ಪ್ರಭು ತಂದೆ ಗಿರೀಶ್ ಪ್ರಭು ಮಾತನಾಡಿ, ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ಮೇಲೆ ಕ್ರಮ ಆಗಬೇಕು. ಪ್ರೋಟೋಕಾಲ್ ಚೇಂಜ್ ಆಗಬೇಕು. ಈ ರೀತಿ ವಿದ್ಯಾರ್ಥಿಯಾಗಲೀ, ಪೋಷಕರನ್ನಾಗಲೀ ಟ್ರೀಟ್ ಮಾಡಬಾರದು. ತಪ್ಪು ಮಾಡಿದವರನ್ನ ಸಸ್ಪೆಂಡ್ ಮಾಡಬೇಕು ಅಂತಾ ಒತ್ತಾಯಿಸುತ್ತೇವೆ. ಈ ಬಗ್ಗೆ ಡಿಸಿಪಿಯವನರನ್ನ ಭೇಟಿಯಾಗಿ ದೂರು ಕೊಟ್ಟಿದ್ದೇವೆ ಎಂದರು.
ಆದಿತ್ಯ ಪ್ರಭು ತಾಯಿ ಆಶಾ ಅವರು ಮಾತನಾಡಿ, ಪೊಲೀಸ್ ತನಿಖೆ ನಡೆಯುತ್ತಿದೆ ನಿಜಾಂಶ ಹೊರಬರಬೇಕು. ಘಟನೆ ಬಳಿಕ ಕಾಲೇಜಿನಿಂದ ನಮಗೆ ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ. ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರೆಸ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಆದಿತ್ಯ ಒಳ್ಳೆ ವಿದ್ಯಾರ್ಥಿ, ಉನ್ನತ ವ್ಯಾಸಂಗದ ಆಸೆ ಹೊಂದಿದ್ದ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಕೇಸ್, ಕಾಲೇಜು ವಿರುದ್ಧ ಎಫ್ಐಆರ್
ಇನ್ನು ಈ ಘಟನೆ ಸಂಬಂಧ ಪಿಇಎಸ್ ಯೂನಿವರ್ಸಿಟಿ ಆಡಳಿತ ಮಂಡಳಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಆದಿತ್ಯ ಆತ್ಮಹತ್ಯೆಯಿಂದ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ನೋವಾಗಿದೆ. ವಿದ್ಯಾರ್ಥಿ ಆದಿತ್ಯ ಪ್ರಭು ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸುತ್ತೇವೆ. ಆದಿತ್ಯ ಪ್ರಭು ಉತ್ತಮ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದ ಹುಡುಗ. ನಮ್ಮ ವಿಶ್ವವಿದ್ಯಾಲಯ ವಿರುದ್ಧ ಬಂದ ಆರೋಪಗಳು ಆಧಾರರಹಿತ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಜುಲೈ 17 ರಂದು ಬೆಳಿಗ್ಗೆ ಪೂರ್ವಭಾವಿಯಾಗಿ ಆದಿತ್ಯ ಪ್ರಭು ತಾನು ಹಾಜರಾಗುವ ಪರೀಕ್ಷೆಗೆ ಸಂಬಂಧಿಸಿದ ವಿಷಯದೊಂದಿಗೆ ಮೊಬೈಲ್ ಫೋನ್‌ನೊಂದಿಗೆ ಬಂದಿದ್ದ. ವಿಶ್ವವಿದ್ಯಾನಿಲಯದ ಪ್ರೋಟೋಕಾಲ್ ಪ್ರಕಾರ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಘಟನೆಯನ್ನು ಸಮಿತಿಯಿಂದ ಪರಿಶೀಲಿಸಲಾಗುವುದು ಎಂದು ತಿಳಿಸಲಾಯಿತು. ಘಟನೆ ಬಗ್ಗೆ ಸಮಿತಿ ಮುಂದೆ ವಿವರಿಸಲು ಅವರಿಗೆ ಸಾಕಷ್ಟು ಅವಕಾಶವನ್ನು ನೀಡಲಾಗಿತ್ತು. ತನಿಖೆ ಮುಗಿದು ವರದಿಯನ್ನು ಪ್ರಕಟಿಸುವವರೆಗೆ, ಘಟನೆಯ ಅಂಶಗಳ ಬಗ್ಗೆ ಪ್ರತಿಕ್ರಿಯಿಸುವುದು ಬೇಡ ಎಂದು ವಿಶ್ವವಿದ್ಯಾಲಯವು ನಿರ್ಧರಿಸಿದೆ. ವಿಶ್ವವಿದ್ಯಾನಿಲಯವು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದೆ. ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವ ದೃಶ್ಯಾವಳಿಗಳು ಪೊಲೀಸರಿಗೆ ನೀಡಿದ್ದೇವೆ.
ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಬಂದಿವೆ. ವರದಿಗಳು ಎಲ್ಲಾ ಆಧಾರರಹಿತವಾಗಿವೆ ಎಲ್ಲಾ ಆರೋಪಗಳನ್ನು ವಿಶ್ವವಿದ್ಯಾಲಯವು ನಿರಾಕರಿಸುತ್ತದೆ. ವಿಶ್ವವಿದ್ಯಾನಿಲಯವು ಪ್ರಾಮಾಣಿಕತೆ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯಲು ಸಮಾಜಕ್ಕೆ ನೈತಿಕ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ