ಸಣ್ಣ ಮಳೆಗೆ ಮೋದಿ ಉದ್ಘಾಟಿಸಿದ್ದ ಬೆಂಗಳೂರಿನ ಮೆಟ್ರೋ ನಿಲ್ದಾಣ ಜಲಾವೃತ: ವಿಡಿಯೋ ಇಲ್ಲಿದೆ

|

Updated on: Apr 05, 2023 | 3:08 PM

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ನಮ್ಮ ಮೆಟ್ರೋ ಒಂದು ಸಣ್ಣ ಮಳೆಗೆ ಜಲಾವೃತಗೊಂಡಿದೆ. ಇದೀಗ ವಿಡಿಯೋಗಳು ವೈರಲ್ ಆಗಿವೆ.

ಸಣ್ಣ ಮಳೆಗೆ ಮೋದಿ ಉದ್ಘಾಟಿಸಿದ್ದ ಬೆಂಗಳೂರಿನ ಮೆಟ್ರೋ ನಿಲ್ದಾಣ ಜಲಾವೃತ: ವಿಡಿಯೋ ಇಲ್ಲಿದೆ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣ (Namma Metro) ಒಂದು ಮಳೆಗೆ(Rain)  ಜಲಾವೃತವಾಗಿದೆ. ನಿನ್ನೆ(ಏಪ್ರಿಲ್ 04) ರಾತ್ರಿ ಸುರಿದ ಮಳೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಪ್ರಯಾಣಿಕರು ಹರಸಾಹಸಪಟ್ಟರು. ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿರುವ ವೀಡಿಯೋಗಳನ್ನು ಜನಪ್ರಿಯ ನಾಗರಿಕರ ಆಂದೋಲನ ವೈಟ್‌ಫೀಲ್ಡ್ ರೈಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿದೆ. ಒಂದು ಮಳೆಗೆ ಹೀಗೆ ಸಂಪೂರ್ಣ ಜಲಾವೃತವಾಗಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿದೆ.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆ


ನಿಲ್ದಾಣದ ಹೌಸ್ ಕೀಪಿಂಗ್ ಸಿಬ್ಬಂದಿ ಸಲಿಕೆಗಳು ಮತ್ತು ಬಕೆಟ್‌ಗಳನ್ನು ಬಳಸಿ ನೀರನ್ನು ತೆಗೆಯುವುದು ಮತ್ತು ನೆಲವನ್ನು ಒಣಗಿಸಲು ಮಾಪ್ ನ್ನು ಬಳಸುತ್ತಿರುವುದು, ಸಾರ್ವಜನಿಕರು ನೀರಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದನ್ನು ವಿಡಿಯೋನಲ್ಲಿ ಕಾಣಬಹುದಾಗಿದೆ. ಈ ಟ್ವೀಟ್​ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಚುನಾವಣೆಗೆ ಮುನ್ನ ತರಾತುರಿಯಲ್ಲಿ ಮೆಟ್ರೋ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ ಅಂತೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಪ್ರತಿನಿಧಿ ಅಶೋಕ್ ಮೃತ್ಯುಂಜಯ ಅವರು ಟ್ವೀಟ್ ಮಾಡಿದ್ದು, ನೀವು ಚುನಾವಣೆಗಾಗಿ ಅರೆಬೆಂದ ಕಾಮಗಾರಿಗಳನ್ನು ಉದ್ಘಾಟಿಸಿದಾಗ ಹೀಗಾಗುತ್ತದೆ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉತ್ತಮ ಪಕ್ಷವನ್ನು ಈಗಲಾದರೂ ಜನರು ಅರಿತು ಮತ ಚಲಾಯಿಸಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಇದಕ್ಕೆ ಕಾಂಗ್ರೆಸ್​ ಸಹ ಟ್ವೀಟ್ ಮಾಡಿದ್ದು, ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಒಂದು ಸಾಧಾರಣ ಮಳೆಗೆ ಮುಳುಗಿತ್ತು. ಈಗ ಮೋದಿ ಉದ್ಘಾಟಿಸಿದ ಮೆಟ್ರೋ ನಿಲ್ದಾಣ ಒಂದು ಸಣ್ಣ ಮಳೆಗೆ ಮುಳುಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಉದ್ಘಾಟನೆಗೆ ಹಾತೊರೆಯುವ ಪ್ರಚಾರ ಜೀವಿಗೆ ಜನರ ಹಿತ ಮುಖ್ಯವಲ್ಲ, ಪ್ರಚಾರವೇ ಮುಖ್ಯ. ಮೆಟ್ರೋ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ್ದು 40% ಕಮಿಷನ್‌ಗೆ ಸಾಕ್ಷಿ ಎಂದು ಚಾಟಿ ಬೀಸಿದೆ.


ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:04 pm, Wed, 5 April 23