ಸರ್ಕಾರದ ಖಜಾನೆ ಲೂಟಿ ಮಾಡುತ್ತಿದೆ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಮೋದಿ ವ್ಯಂಗ್ಯ!

PM Modi in Bengaluru: ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಚುನಾವಣಾ ಗೆಲುವನ್ನು ರಾಷ್ಟ್ರದ ಅಭಿವೃದ್ಧಿಯ ಹೊಸ ಪರ್ವ ಎಂದು ಬಣ್ಣಿಸಿದರು. ಕರ್ನಾಟಕದ ತಾಂತ್ರಿಕ ಪ್ರಗತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಶ್ಲಾಘಿಸಿದ ಅವರು, ಅಧಿಕಾರ ಹಂಚಿಕೆ ಕಿತ್ತಾಟದ ವಿಚಾರವಾಗಿ ಕಾಂಗ್ರೆಸ್​ಗೆ ಟಾಂಗ್ ನೀಡಿದರು. ಮೋದಿ ಭಾಷಣದ ಪೂರ್ಣ ವಿವರ ಇಲ್ಲಿದೆ.

ಸರ್ಕಾರದ ಖಜಾನೆ ಲೂಟಿ ಮಾಡುತ್ತಿದೆ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಮೋದಿ ವ್ಯಂಗ್ಯ!
ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಜನರತ್ತ ಕೈಬೀಸಿದ ಪ್ರಧಾನಿ ಮೋದಿ
Image Credit source: tv9

Updated on: May 10, 2026 | 11:36 AM

ಬೆಂಗಳೂರು, ಮೇ 10: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ (BJP) ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಬಂಗಾಳದ ಗೆಲುವಿನ ಸಂಭ್ರಮದ ಜೊತೆಗೆ ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧ ಮತ್ತು ದೇಶದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಮುಖ್ಯಾಂಶಗಳು

  • ಗಂಗೋತ್ರಿಯಿಂದ ಅರಬ್ಬೀ ಸಮುದ್ರದವರೆಗೆ ಈಗ ಕಮಲ ಅರಳಿದೆ ಎಂದ ಪ್ರಧಾನಿ.
  • ‘ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ ಮೋದಿ.
  • ದೇಶದ ಪ್ರಗತಿಗೆ ‘ವಿಜ್ಞಾನ ಮತ್ತು ಆಧ್ಯಾತ್ಮ’ ಎರಡು ಕಣ್ಣುಗಳಿದ್ದಂತೆ ಎಂದು ಮೋದಿ ಪ್ರತಿಪಾದನೆ.

ಕಾಂಗ್ರೆಸ್​​ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಒಂದೊಂದು ಸಮಸ್ಯೆ ಇದ್ದೇ ಇರುತ್ತದೆ. ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ದೊರೆಯುತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಕೇರಳದಲ್ಲಿ ಬಹುಮತದೊಂದಿಗೆ ಚುನಾವಣೆ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಕರ್ನಾಟಕದಲ್ಲೂ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಆಂತರಿಕ ಕಚ್ಚಾಟವನ್ನು ಮೋದಿ ಲೇವಡಿ ಮಾಡಿದರು.

ಕಾಂಗ್ರೆಸ್ ಇರುವಲ್ಲೆಲ್ಲ ಖಜಾನೆ ಲೂಟಿಯಾಗುತ್ತಿದೆ: ಮೋದಿ

ಕಾಂಗ್ರೆಸ್​ ಸರ್ಕಾರ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಖಜಾನೆ ಲೂಟಿ ಹೊಡೆಯುತ್ತಿದ್ದಾರೆ. ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸರ್ಕಾರದ ನಾಯಕರು ಮಾತ್ರ ಲೂಟಿ ಹೊಡೆದ ಹಣಕ್ಕಾಗಿ ಆಂತರಿಕ ಜಗಳ ಮತ್ತು ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದಾರೆ. ರಾಜಸ್ಥಾನದಲ್ಲಿ ಏನಾಯಿತು ಎಂಬುದು ನಿಮಗೆ ಗೊತ್ತಿದೆ, ಕರ್ನಾಟಕದಲ್ಲೂ ಅದೇ ಹಾದಿ ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದರು.

ಬೆಂಗಳೂರಿನ ಹೆಚ್​ಎಎಲ್​​ನಲ್ಲಿ ಮೋದಿ ಭಾಷಣ

ಭಾಷಣದುದ್ದಕ್ಕೂ ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಮಾತನಾಡಿದ ಮೋದಿ, ‘ಬಂಗಾಳದ ಜನರು ಇತಿಹಾಸ ನಿರ್ಮಿಸಿದ್ದಾರೆ. ದಶಕಗಳ ಅರಾಜಕತೆಯನ್ನು ಕೊನೆಗಾಣಿಸಿ ವಿಕಾಸದ ಹಾದಿ ಹಿಡಿದಿದ್ದಾರೆ. ಈ ಗೆಲುವು ಕೇವಲ ಬಿಜೆಪಿಯದ್ದಲ್ಲ, ಇದು ಪ್ರಜಾಪ್ರಭುತ್ವದ ಗೆಲುವು’ ಎಂದರು. ಅಸ್ಸಾಂನಲ್ಲಿ ಸತತ ಎರಡನೇ ಬಾರಿಗೆ ಜನಾದೇಶ ನೀಡಿರುವುದು ನವ ಭಾರತದ ನಿರ್ಮಾಣಕ್ಕೆ ಸಿಕ್ಕ ಶಕ್ತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಗೆಲುವಿಗೆ ಕಾರಣರಾದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಕೊನೆಗೆ 3 ಸ್ಥಾನ ದೊರೆಯಿತು. ಮತ್ತೆ ಚುನಾವಣೆಯಲ್ಲಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದೇ ರಾಜ್ಯದಲ್ಲಿ ಈಗ 200ಕ್ಕೂ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಿದ್ದೇವೆ. ಕೇರಳದಲ್ಲಿಯೂ ಈಗ 3 ಸ್ಥಾನ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಬಂಗಾಳದ ರೀತಿ ಕೇರಳದಲ್ಲಿಯೂ ಕಮಲ ಅರಳಲಿದೆ ಎಂದು ಮೋದಿ ಹೇಳಿದರು.

ಭಾರತದ ಭವಿಷ್ಯದ ಎಂಜಿನ್ ಬೆಂಗಳೂರು: ಮೋದಿ

ಬೆಂಗಳೂರನ್ನು ಭಾರತದ ಭವಿಷ್ಯದ ಎಂಜಿನ್ ಎಂದು ಕರೆದ ಪ್ರಧಾನಿ, ‘ಇಂದು ಇಡೀ ಜಗತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಬೆಂಗಳೂರಿನ ಯುವಶಕ್ತಿಯೇ ಕಾರಣ. ಕರ್ನಾಟಕದ ಐಟಿ ನೈಪುಣ್ಯ ಮತ್ತು ಸಂಶೋಧನೆಗಳು ದೇಶವನ್ನು ಸ್ವಾವಲಂಬಿಯಾಗಿಸುತ್ತಿವೆ’ ಎಂದರು. ಅಲ್ಲದೆ, ಕೊರೊನಾ ನಂತರದ ಆರ್ಥಿಕ ಚೇತರಿಕೆಯಲ್ಲಿ ಕರ್ನಾಟಕದ ರೈತರು ಮತ್ತು ಉದ್ಯಮಿಗಳ ಕೊಡುಗೆಯನ್ನು ಸ್ಮರಿಸಿದರು.

ಆಧ್ಯಾತ್ಮಿಕ ಶಕ್ತಿಯೇ ಭಾರತದ ಬಲ: ಮೋದಿ

ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ‘ಭಾರತವು ಬಲಿಷ್ಠವಾಗಬೇಕಾದರೆ ಅದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬಲವೂ ಬೇಕು. ಶ್ರೀ ಶ್ರೀ ರವಿಶಂಕರ್ ಗುರೂಜಿಯವರಂತಹ ಮಹನೀಯರು ಈ ಕೆಲಸವನ್ನು ಜಾಗತಿಕ ಮಟ್ಟದಲ್ಲಿ ಮಾಡುತ್ತಿದ್ದಾರೆ. ಅವರ 70ನೇ ಜನ್ಮೋತ್ಸವದ ಸಂದರ್ಭದಲ್ಲಿ ಹೊಸ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ’ ಎಂದು ಹೇಳಿದರು.

ಮಹಿಳಾ ವಿರೋಧಿ ಕಾಂಗ್ರೆಸ್: ಮೋದಿ ಕಿಡಿ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ಕಾಂಗ್ರೆಸ್‌ನವರು ಮಹಿಳಾ ಮೀಸಲಾತಿಯನ್ನು ತಡೆದರು. ಇದು ಜಾರಿಯಾಗಿದ್ದರೆ ಸಾಮಾನ್ಯ ವರ್ಗದ ಮಹಿಳೆಯರು ಕೂಡ ಇಂದು ವಿಧಾನಸಭೆ ಮತ್ತು ಸಂಸತ್ತಿಗೆ ಆಯ್ಕೆಯಾಗಿರುತ್ತಿದ್ದರು. ಕರ್ನಾಟಕದ ಮಹಿಳೆಯರು ಈ ದ್ರೋಹವನ್ನು ಎಂದಿಗೂ ಕ್ಷಮಿಸಬಾರದು ಎಂದು ಕರೆ ನೀಡಿದರು.

ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿಯ ಪ್ರತಿಮೆ ನೀಡಿ ಸನ್ಮಾನ ಮಾಡಿದರು

ಭಾಷಣಕ್ಕೂ ಮುನ್ನ, ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿಯ ಪ್ರತಿಮೆ ನೀಡಿ ಸನ್ಮಾನ ಮಾಡಿದರು. ಬಂಗಾಳ, ಅಸ್ಸಾಂ, ಪುದುಚೇರಿ ಚುನಾವಣೆಯಲ್ಲಿ ಪಕ್ಷ ಗೆಲುವು ಹಿನ್ನೆಲೆ ಈ ಗೌರವಾರ್ಪಣೆ ಮಾಡಲಾಯಿತು. ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಪರಿಷತ್​ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಶಾಸಕ ಅಶ್ವತ್ಥ್ ನಾರಾಯಣ್, ಎಸ್​.ಆರ್.ವಿಶ್ವನಾಥ್​, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರಿನ ಹೆಚ್​ಎಎಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ, ನೇರ ಪ್ರಸಾರ

ಅನೇಕ ಮಕ್ಕಳು ಬಿಡಿಸಿ ತಂದಿದ್ದ ತಮ್ಮ ಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಕೊನೆಯಲ್ಲಿ ‘ಭಾರತ್ ಮಾತಾ ಕೀ ಜೈ’ ಘೋಷಣೆಯೊಂದಿಗೆ ಮಾತು ಮುಗಿಸಿದ ಪ್ರಧಾನಿ, ಸಾವಿರಾರು ಕಾರ್ಯಕರ್ತರತ್ತ ಕೈಬೀಸಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:03 am, Sun, 10 May 26

Follow Us