ವೋಟರ್​ ಐಡಿ ಅಕ್ರಮ: 15 ಬಿಬಿಎಂಪಿ ಆರ್​ಒಗಳಿಗೆ ಪೊಲೀಸರಿಂದ ನೊಟೀಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 22, 2022 | 12:53 PM

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬಿಬಿಎಂಪಿಯ 15 ಆರ್​ಒಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.

ವೋಟರ್​ ಐಡಿ ಅಕ್ರಮ: 15 ಬಿಬಿಎಂಪಿ ಆರ್​ಒಗಳಿಗೆ ಪೊಲೀಸರಿಂದ ನೊಟೀಸ್
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 15 ರಿಟರ್ನಿಂಗ್ ಆಫೀಸರ್​ಗಳಿಗೆ (ಆರ್​ಒ) ನೊಟೀಸ್ ಜಾರಿ ಮಾಡಿದ್ದಾರೆ. ಚಿಲುಮೆ ಸಂಸ್ಥೆಯು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿರುವ ವಿಚಾರ ಆರ್​ಒಗಳಿಗೆ ತಿಳಿದಿದ್ದರೂ ಅವರು ಏನೂ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹಲವು ಹಂತಗಳಲ್ಲಿ ಎಲ್ಲ 15 ಮಂದಿಯ ವಿಚಾರಣೆ ನಡೆಯಲಿದೆ.

ದೂರು ವಾಪಸ್ ಪಡೆಯಲು ಒತ್ತಡ: ಸುಮಂಗಲ

ಬೆಂಗಳೂರಿನಲ್ಲಿ ಮತದಾರರ ಯಾದಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಚಿಲುಮೆ’ ಸಂಸ್ಥೆಯ ವಿರುದ್ಧ ನೀಡಿರುವ ದೂರು ಹಿಂದಕ್ಕೆ ಪಡೆಯುವಂತೆ ನನ್ನ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ‘ಸಮನ್ವಯ’ ಸಂಸ್ಥೆಯ ಸುಮಂಗಲಾ ‘ಟಿವಿ9’ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ದೂರು ನೀಡಿದಾಗ ನಮ್ಮ ಕಚೇರಿಗೆ ಬಂದಿದ್ದ ಚಿಲುಮೆ ಸಂಸ್ಥೆಯ ರವಿಕುಮಾರ್, ದೂರು ವಾಪಸ್​ ಪಡೆಯುವಂತೆ ಒತ್ತಡ ಹಾಕಿದ್ದರು. ನನ್ನ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಪ್ರಾದೇಶಿಕ ಆಯುಕ್ತರು ನನಗೆ ನೊಟೀಸ್ ನೀಡಿ, ಸಂಗ್ರಹಿಸಿರುವ ಸಾಕ್ಷ್ಯಗಳನ್ನು ನೀಡುವಂತೆ ಸೂಚಿಸಿದ್ದಾರೆ. ವರದಿ ಸಲ್ಲಿಸುವುದಕ್ಕೆ ನಮಗೆ ಹೆಚ್ಚಿನ ಕಾಲಾವಕಾಶವನ್ನೂ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.

ಪೊಲೀಸರಿಂದ ಕಿಂಗ್​ಪಿನ್ ರವಿಕುಮಾರ್ ವಿಚಾರಣೆ

ಚಿಲುಮೆ ಸಂಸ್ಥೆಯಿಂದ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್​ಪಿನ್ ರವಿಕುಮಾರ್​ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಮೇಲಿದ್ದ ಒತ್ತಾಯ, ತಾನು ಮಾಡಿದ ಕೆಲಸಗಳ ಬಗ್ಗೆ ಪೊಲೀಸರ ಮುಂದೆ ರವಿಕುಮಾರ್ ಬಾಯಿಬಿಡುತ್ತಿದ್ದಾನೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ವಿಚಾರಣೆಯ ನಿಗಾವಹಿಸಿದ್ದಾರೆ. ‘ತಪ್ಪು ಮಾಡಿದ್ದೀನಿ ಸರ್, ಕ್ಷಮಿಸಿ ಬಿಡಿ. ಕೆಲವರ ಒತ್ತಡದಿಂದ ಈ ರೀತಿ ಮಾಡಿದ್ದೇನೆ’ ಎಂದು ರವಿಕುಮಾರ್ ಪೊಲೀಸರ ಎದುರು ಗೋಗರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.