ಬೆಂಗಳೂರು: ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿ ಮುಚ್ಚಿ ಅಂತ್ಯಕ್ರಿಯೆ ಮಾಡಿದ ಪ್ರತಿಭಟನಾಕಾರರು; ಪಾಲಿಕೆ ವಿರುದ್ಧ ಆಕ್ರೋಶ

| Updated By: shivaprasad.hs

Updated on: Nov 26, 2021 | 2:28 PM

ಬೆಂಗಳೂರಿನಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಇಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಿಬಿಎಂಪಿ ಅಣಕು ಶವಯಾತ್ರೆಯ ಮುಖಾಂತರ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿ ಮುಚ್ಚಿ ಅಂತ್ಯಕ್ರಿಯೆ ಮಾಡಿದ ಪ್ರತಿಭಟನಾಕಾರರು; ಪಾಲಿಕೆ ವಿರುದ್ಧ ಆಕ್ರೋಶ
ಬಿಬಿಎಂಪಿ ಅಣಕು ಶವಯಾತ್ರೆ ಮಾಡುತ್ತಿರುವ ಪ್ರತಿಭಟನಾಕಾರರು
Follow us on

ಬೆಂಗಳೂರು: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ (BBMP) ವಿರುದ್ಧ ರಾಜಧಾನಿಯಲ್ಲಿ ವಿನೂತನ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಬಿಬಿಎಂಪಿ ಪ್ರತಿಕೃತಿಯ ಶವಯಾತ್ರೆ ನಡೆಸಿದ್ದು, ಅದೇ ಪ್ರತಿಕೃತಿಯನ್ನ ಮರಳು- ಜಲ್ಲಿಕಲ್ಲು ಹಾಕಿ ರಸ್ತೆ ಗುಂಡಿಯಲ್ಲಿ ಮುಚ್ಚಿದ್ದಾರೆ. ಬಳಿಕ ಮಡಿಕೆ ಹೊಡೆದು, ತಲೆ ಬೋಳಿಸಿಕೊಂಡು, ಹಾಲು ತುಪ್ಪ ಬಿಟ್ಟು, ಶಾಸ್ತ್ರಬದ್ದವಾಗಿ ಅಂತ್ಯಕ್ರಿಯೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಪಾಲಿಕೆ ವಿರುದ್ಧ ಸುಂಕದಕಟ್ಟೆ ಬಸ್ ನಿಲ್ದಾಣದ ಮುಂದೆ ಸ್ಥಳೀಯ ವ್ಯಾಪಾರಸ್ಥರು, ಆಟೋ ಚಾಲಕರು ಕಾರ್ಮಿಕ ಒಕ್ಕೂಟದ ಸದಸ್ಯರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. 11 ದಿನದ ಪುಣ್ಯತಿಥಿಯೊಳಗೆ ರಸ್ತೆ ಗುಂಡಿ ಮುಚ್ಚಬೇಕು. ಇಲ್ಲವಾದರೆ, ಪಾಲಿಕೆ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಪ್ರತಿಭಟನೆಯ ಕುರಿತು ಮಾತನಾಡಿದ್ದಾರೆ. ಬಿಬಿಎಂಪಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘‘ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗುಂಡಿಗಳನ್ನು ಮುಚ್ಚದಿದ್ದರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ’’ ಎಂದಿದ್ದಾರೆ. ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆಯನ್ನು ತೆರೆದಿಟ್ಟ ಅವರು, ‘‘ಎರಡೂವರೆ ವರ್ಷಗಳಿಂದ ರಸ್ತೆಗಳ ಸ್ಥಿತಿ ಹೀಗೆ ಇದೆ. ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಇವತ್ತು ಗುಂಡಿಯಲ್ಲಿ ಶವ ಸಂಸ್ಕಾರ ಮಾಡಿದ್ದೇವೆ. ೧೧ ದಿನಗಳಲ್ಲಿ ಗುಂಡಿಗಳನ್ನು ಮುಚ್ಚದಿದ್ದರೆ ಪಾಲಿಕೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ’’ ಎಂದಿದ್ದಾರೆ. ನಿಗದಿತ ಅವಧಿಯೊಳಗೆ ಗುಂಡಿಗಳನ್ನು ಮುಚ್ಚದಿದ್ದರೆ, ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆಯ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ.

ಇದನ್ನೂ ಓದಿ:

ಹೊಸಕೋಟೆ ನೀಲಗಿರಿ ತೋಪಿನಲ್ಲಿ ಯುವತಿ ಮೇಲೆ ರೇಪ್, 10 ದಿನ ಆದರೂ ನ್ಯಾಯ ಸಿಕ್ಕಿಲ್ಲ ಎಂದು ಪೋಷಕರ ಕಣ್ಣೀರು

ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

Published On - 2:24 pm, Fri, 26 November 21