ನಕಲಿ ಛಾಪಾ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ ಸಹ ನಕಲಿ; ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು
ಕೋಲಾರ ಮತ್ತು ಬೆಂಗಳೂರು ಹೊರವಲಯದ ಸಬ್ ರಿಜಿಸ್ಟಾರ್ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಕಾಲ್ ಲಿಸ್ಟ್ನಲ್ಲಿ ಕೋಲಾರದ ಸಬ್ ರಿಜಿಸ್ಟಾರ್ನ ಬ್ರೋಕರ್ ಜೊತೆ ಹುಸೇನ್ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಬೆಂಗಳೂರು: ನಕಲಿ ಛಾಪಾ ಕಾಗದ (Stamp paper) ಮಾರಾಟದಿಂದ ಕೋಟಿ ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗೋವಿಂದಪುರ ಪೊಲೀಸರ ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು, ಛಾಪಾ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ ಸಹ ನಕಲಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಎಸ್‌ಐಟಿ (SIT) ರಚನೆ ಮಾಡಿ ತನಿಖೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಹೈಕೋರ್ಟ್ ಆದೇಶದಂತೆ ಎಸ್‌ಐಟಿ ರಚನೆ ಮಾಡಿದ್ದ ಪೂರ್ವ ವಿಭಾಗದ ಪೊಲೀಸರು, ನವೆಂಬರ್ 19 ರಂದು ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಗುಂಪನ್ನು ಬಂಧಿಸಿದ್ದಾರೆ. ಈ ವೇಳೆ ಛಾಪ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ಗಳನ್ನೇ ನಕಲು ಮಾಡಿರುವುದು ಬೆಳಕಿಗೆ ಬಂದಿದೆ. ಜಮೀನೊಂದರ ಜಡ್ಜ್ ಮೆಂಟ್ ಅನ್ನು ನಕಲು ಮಾಡಿ ಮಾರಾಟ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ತಮಗೆ ಬೇಕಾದವರ ಹೆಸರಿಗೆ ತೀರ್ಪು ಬರೆದು ನ್ಯಾಯಾಲಯದ ಸೀಲ್ ನಕಲು ಮಾಡಿದ್ದಾರೆ. ತನಿಖೆಯಲ್ಲಿ ಈ ನಕಲಿ ಸೀಲ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಕೋಲಾರ ಮತ್ತು ಬೆಂಗಳೂರು ಹೊರವಲಯದ ಸಬ್ ರಿಜಿಸ್ಟಾರ್ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಕಾಲ್ ಲಿಸ್ಟ್ನಲ್ಲಿ ಕೋಲಾರದ ಸಬ್ ರಿಜಿಸ್ಟಾರ್ನ ಬ್ರೋಕರ್ ಜೊತೆ ಹುಸೇನ್ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಸದ್ಯ ಬೆಂಗಳೂರು ಹೊರವಲಯದ ಸಬ್ ರಿಜಿಸ್ಟರ್ನ ಹಲವು ಬ್ರೋಕರ್ಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹುಸೇನ್ ನಕಲಿ ಛಾಪಾ ಕಾಗದ ಕೋಲಾರ ಸಬ್ ರಿಜಿಸ್ಟರ್ನಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೇ ಸೂಕ್ತ ಮಾಹಿತಿ, ಬ್ರೋಕರ್ಗಳ ವಿಚಾರಣೆ ಬಳಿಕ ಹಲವರ ಬಂಧನವಾಗುವ ಸಾಧ್ಯತೆ ಇದೆ.
ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳ ಬಂಧನ ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ತಿರುವು ಸಿಕ್ಕಿದೆ. ವಿಧಾನಸೌಧದಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನಕಲಿ ಛಾಪಾ ಕಾಗದ ದಂಧೆ ನಡೆಸುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಎಂಬ ವ್ಯಕ್ತಿಯನ್ನು ಸದ್ಯ ಎಸ್‌ಐಟಿ ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಪರಿಷತ್‌ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಾಬು ಪತ್ನಿ ಸೀಮಾ ಈಗಾಗಲೇ ಬಂಧನಕ್ಕೊಳಗಾಗಿದ್ದಾಳೆ. ಸೀಮಾ ಬಂಧನದ ನಂತರ ಆರೋಪಿ ಬಾಬು ಛಾಪಾ ಕಾಗದವನ್ನು ಪಡೆದು, ವಿಧಾನಸೌಧದ ಆವರಣದಲ್ಲೇ ಮಾರುತ್ತಿದ್ದ ಎಂಬ ಸತ್ಯ ಬಯಲಾಗಿದೆ.
ಬಾಬು ಏನು ಕೆಲಸ ಮಾಡುತ್ತಾನೆಂದು ಯಾರಿಗೂ ಹೇಳುತ್ತಿರಲಿಲ್ಲ. ಸದ್ಯ ಎಸಿಪಿ ಸಕ್ರಿ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡ ಬಂಧಿತರಿಂದ 63 ಲಕ್ಷ ರೂ. ಮೌಲ್ಯದ ಛಾಪಾ ಕಾಗದ ಜಪ್ತಿ ಮಾಡಿದ್ದು, ಬಾಬು ಸೇರಿ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳ ಬಂಧನ; ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಡೀಲ್
ಬೆಂಗಳೂರು: ಎಸ್‌ಐಟಿ ತಂಡದಿಂದ 63 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ವಶ; ಐವರು ಆರೋಪಿಗಳ ಬಂಧನ
Published On - 1:48 pm, Fri, 26 November 21