ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವದ ಬಗ್ಗೆ ಟಿವಿ9 ಜತೆ ಅಭಿಪ್ರಾಯ ಹಂಚಿಕೊಂಡ ಹೆಮ್ಮಿಗೆಪುರ ನಿವಾಸಿ

ಬೆಂಗಳೂರಿನ ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಕಗ್ಗಲೀಪುರ ಸೇರಿದಂತೆ ಹಲವೆಡೆ ನವೆಂಬರ್ 26ನೇ ತಾರೀಕಿನ ಶುಕ್ರವಾರ ಭೂಕಂಪನದ ಅನುಭವ ಆಗಿದೆ. ಆ ಬಗ್ಗೆ ಹೆಮ್ಮಿಗೆಪುರ ನಿವಾಸಿ ಅನಿಲ್ ಶಾಮ್​ರಾವ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವದ ಬಗ್ಗೆ ಟಿವಿ9 ಜತೆ ಅಭಿಪ್ರಾಯ ಹಂಚಿಕೊಂಡ ಹೆಮ್ಮಿಗೆಪುರ ನಿವಾಸಿ
ಅನಿಲ್ ಶಾಮರಾವ್

ಬೆಂಗಳೂರು: “ಇವತ್ತಿನ ಅನುಭವ ಬಹಳ ಭಯಾನಕ ಆಗಿತ್ತು. ಮೊದಲಿಗೆ ಕೇಳಿದ್ದು ಸಣ್ಣ ಪ್ರಮಾಣದ ಶಬ್ದ. ಆದರೆ ಅದಾಗಿ ಕೆಲ ಹೊತ್ತಿಗೆ ದೊಡ್ಡ ಪ್ರಮಾಣದ ಶಬ್ದ ಹಾಗೂ ಮನೆ ಕೋಣೆಯ ಕಿಟಕಿಯೇ ಅಲುಗಾಡಿಹೋಯಿತು. ಅಷ್ಟೇ, ಕಿಟಕಿ ಹಾಗೂ ಗೋಡೆ ಕುಸಿದೇ ಹೋಯಿತು ಅಂತ ಗಾಬರಿ ಆದೆ. ವರ್ಕ್​ ಫ್ರಮ್ ಹೋಮ್ ಇದ್ದುದರಿಂದ ಟೀಮ್​ ಮೀಟಿಂಗ್​ನಲ್ಲಿದ್ದೆ. ಆ ತಕ್ಷಣವೇ ನಿಲ್ಲಿಸಿ. ಅಡುಗೆ ಮನೆಯಲ್ಲಿ ಇದ್ದ ಅಮ್ಮನನ್ನ ಹೊರಗಡೆ ಕರೆದುಕೊಂಡು ಹೋದೆ. ಆ ಮೇಲೆ ಅದಾಗಲೇ ರಸ್ತೆಯಲ್ಲಿದ್ದ ಎದುರು ಮನೆಯವರು ಕಂಡರು. ಅವರದು ಅದೇ ಅನುಭವ. ಮತ್ತು ನಮ್ಮಲ್ಲಿದ್ದ ಗಾಬರಿಯೇ… ಕೆಲ ಹೊತ್ತು ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಮನೆಯೊಳಗೆ ಹೋಗಬೇಕೋ ಬೇಡವೋ ಗೊಂದಲ ಹಾಗೇ ಇತ್ತು. ಅದಾದ ಮೇಲೆ ಧೈರ್ಯ ಮಾಡಿ ಮನೆಯೊಳಗೆ ಹೋಗಿ ಟೀವಿ ಹಾಕಿದೆ. ಟಿವಿ9 ಕನ್ನಡದಲ್ಲಿ ಸುದ್ದಿ ಬರ್ತಿತ್ತು. ಅದಕ್ಕೆ ಫೋನ್ ಮಾಡಿ ನಿಮಗೆ ತಿಳಿಸುತ್ತಿದ್ದೇನೆ,” ಎಂದು ಒಂದೇ ಉಸಿರಿನಲ್ಲಿ ಹೇಳಿದರು 198ನೇ ವಾರ್ಡ್ ಹೆಮ್ಮಿಗೆಪುರ ವ್ಯಾಪ್ತಿಗೆ ಬರುವ ಎಚ್​.ಗೊಲ್ಲಹಳ್ಳಿಯ ಅನಿಲ್​ ಶಾಮರಾವ್.

ಬೆಂಗಳೂರಿನ ರಾಜರಾಜೇಶ್ವರಿ ನಗರ, ಕಗ್ಗಲೀಪುರ, ಜ್ಞಾನಭಾರತಿ, ಕೆಂಗೇರಿ ಸುತ್ತಮುತ್ತ ಸೇರಿದಂತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ನವೆಂಬರ್ 26ನೇ ತಾರೀಕಿನ ಶುಕ್ರವಾರ ಆಗಿದೆ. ಆದರೆ ಇದು ಭೂಕಂಪನವೇ ಅಥವಾ ಅಲ್ಲವೆ ಎಂಬ ಬಗ್ಗೆ ಖಾತ್ರಿ ಆಗಬೇಕಿದೆ. ಆದರೆ ಈ ಅನುಭವ ಮಾತ್ರ ನಗರದ ವಿವಿಧ ಭಾಗಗಳಲ್ಲಿ ಆಗಿರುವುದರಿಂದ ಭೂಕಂಪನವೇ ಎಂದು ಮಾತನಾಡಿಕೊಳ್ಳುವಂತಾಗಿದೆ. ಅನಿಲ್ ಅವರಂತೆ ಹಲವರು ತಮ್ಮ ಆತಂಕವನ್ನು ಹಂಚಿಕೊಳ್ಳುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಕೂಡ ಇದೇ ರೀತಿ ಅನುಭವ ಆಗಿತ್ತು ಎಂದು ತಮ್ಮ ಕಾಲೇಜು ದಿನಗಳಲ್ಲಿ ಆಗಿದ್ದ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕಿದ ಅವರು, ಇಂದಿನದು ಬಹಳ ಗಾಬರಿ ಹುಟ್ಟಿಸುವಂತೆ ಇತ್ತು ಎಂದು ಹೇಳಿಕೊಂಡರು.

ಇವತ್ತು ಮೊದಲ ಬಾರಿಗೆ ಶಬ್ದ ಆದಾಗ ಜತೆಯಲ್ಲಿದ್ದ ಸ್ನೇಹಿತನಿಗೆ ಹೇಳಿದೆ. ಆದರೆ ಆತ ನಂಬಲಿಲ್ಲ. ಆ ನಂತರ ಮಾತ್ರ ಹೇಳುವುದಕ್ಕೆ ಈಗಲೂ ಗಂಟಲಿನ ಪಸೆ ಆರುತ್ತಿದೆ. ಮತ್ತೆ ಮನೆಯಲ್ಲಿ ಕೂತು ಕೆಲಸ ಮಾಡುವುದಕ್ಕೆ ಧೈರ್ಯ ಸಾಲುತ್ತಿಲ್ಲ. ಕೂಡಲೇ ನನ್ನ ಹೆಂಡತಿ ಕೆಲಸ ಮಾಡುವ ಶಾಲೆಯಲ್ಲೂ ಹಾಗೇ ಆಯಿತಾ ಎಂದು ಕೇಳಿ, ತಿಳಿದುಕೊಂಡೆ. ಅಲ್ಲೂ ಹಾಗೇ ಆಯಿತು ಅಂದರು. ಬೆಂಗಳೂರು ಬಹಳ ಸೇಫ್​ ಅನ್ನೋದು ಎಲ್ಲ ಕಡೆ ಇರುವ ಅಭಿಪ್ರಾಯ. ಅದು ಸುಳ್ಳು ಅಂತೇನಲ್ಲ. ಆದರೆ ಇವತ್ತು ನನಗೆ ಆದ ಅನುಭವ ಸ್ವಲ್ಪ ಮಟ್ಟಿಗೆ ಆ ನಂಬಿಕೆಯನ್ನು ಅಲುಗಾಡಿಸುವಂತಿದೆ. ವಿಜ್ಞಾನಿಗಳು ಈ ಘಟನೆ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು ಎಂದು ಮಾತು ಮುಗಿಸಿದರು.

ಇದನ್ನೂ ಓದಿ: Bengaluru Earthquake: ಬೆಂಗಳೂರಿನಲ್ಲಿ ಎರಡೆರಡು ಬಾರಿ ಭೂಕಂಪದ ಅನುಭವ; ಮಂಡ್ಯದಲ್ಲಿ ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ!

Click on your DTH Provider to Add TV9 Kannada