ಬೆಂಗಳೂರು: 545 ಪಿಎಸ್ಐ ಅಭ್ಯರ್ಥಿಗಳ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್(Amrit Paul) ಅವರಿಗೆ ಸಂಕಷ್ಟ ಎದುರಾಗಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ 24ನೇ ಸಿಸಿಹೆಚ್ ನ್ಯಾಯಾಲಯದ ನ್ಯಾ.ಕೆ. ಲಕ್ಷ್ಮಿ ನಾರಾಯಣ ಭಟ್ ಅವರು ಜಾಮೀನು ತಿರಸ್ಕರಿಸಿ ಆದೇಶ ಹೊರಡಿಸಿದ್ದರು. ಈಗ ಅಮೃತ್ ಪಾಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಸರ್ಕಾರ ಅನುಮತಿ ನೀಡಿದೆ.
ಐಪಿಸಿ ಸೆಕ್ಷನ್ 120B(ಅಪರಾಧಿಕ ಒಳಸಂಚು), 409(ಸರ್ಕಾರಿ ನೌಕರನಾಗಿ ಅಪರಾಧಿಕ ನಂಬಿಕೆ ದ್ರೋಹ), 420(ವಂಚನೆ), 465(ಸುಳ್ಳು ಸ್ಪಷ್ಟನೆಗೆ ದಂಡನೆ), 468(ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 471(ಸುಳ್ಳು ಸ್ಪಷ್ಟನೆ ದಾಖಲಿಸಿ, ದಸ್ತಾವೇಜು ಅಭಿಲೇಖ ನೈಜವಾದುದೆಂದು ಬಳಕೆ), 420, IPC 34 (ಏಕೋದ್ದೇಶವನ್ನು ಮುಂದುವರೆಸಲು ಅನೇಕ ವ್ಯಕ್ತಿಗಳೊಂದಿಗೆ ಮಾಡಿದ ಕೃತ್ಯಲೋಪ)ಅಡಿ ಕೇಸ್ ದಾಖಲಾಗಿತ್ತು.
ಅಮೃತ್ ಪಾಲ್ ವಿರುದ್ದ ಸಾಲು ಸಾಲು ಸಾಕ್ಷ್ಯ ಲಭ್ಯ
ಅಮೃತ್ ಪಾಲ್ ವಿರುದ್ದ ಹಲವು ಸಾಕ್ಷ್ಯಗಳು ಸಿಕ್ಕಿವೆ. CRPC 164 ಅಡಿಯಲ್ಲಿ ನ್ಯಾಯಾಲಯದ ಮುಂದೆ ಅಮೃತ್ ಪಾಲ್ ವಿರುದ್ಧದ ಹೇಳಿಕೆಗಳನ್ನು ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ. ಕಳೆದ ಮೇ ನಲ್ಲಿಯೇ ಪಿಎಸ್ಐ ಪರೀಕ್ಷಾ ಅಕ್ರಮ ನೇಮಕಾತಿ ಕುರಿತಂತೆ ದೂರು ಬಂದಿದ್ದವು. ಅಕ್ಟೋಬರ್ ನಲ್ಲಿ ಬಂಧಿತ ಡಿವೈಎಸ್ಪಿ ಶಾಂತರಾಜು ಸೇರಿ ಪಿಎಸ್ಐ ಅವ್ಯವಹಾರದ ಬಗ್ಗೆ ಪಿಟೇಶನ್ ಹಾಕಲಾಗಿತ್ತು. ನೇಮಕಾತಿ ವಿಭಾಗದ ಆಡಳಿತಾಧಿಕಾರಿ ಸುನೀತಾ ಬಾಯಿಗೆ ಕೆಲವರು ದೂರು ನೀಡಿದ್ರು. ಈ ವೇಳೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಗಮನಕ್ಕೆ ತಂದಿದ್ದರು. ಈ ವೇಳೆ ಪಿಎಸ್ಐ ಪರೀಕ್ಷಾ ಅಕ್ರಮ ದೂರಿನ ಪ್ರತಿ ಕಸದ ಬುಟ್ಟಿಗೆ ಎಸೆಯುವಂತೆ ಅಮೃತ್ ಪಾಲ್ ಹೇಳಿದ್ದರು. ಈ ಬಗ್ಗೆ ಸಿಐಡಿ ತನಿಖೆ ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕದ್ದು ದಾಖಲಾಗಿದೆ. ಈ ಕುರಿತು ನ್ಯಾಯಾಲಯದ ಮುಂದೆ ಸುಮೀತಾ ಬಾಯಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: IPS ಅಧಿಕಾರಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾ
ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ADGP ಅಮೃತ್ ಪಾಲ್ ಅಣತಿಯಂತೆ ಪಿಎಸ್ಐ ಸ್ಕ್ಯಾಮ್ ಮಾಡಲಾಗಿದೆ. ಜೂನ್ 6 ಮತ್ತು 12 ರಂದು ಕೆಲ ಅಭ್ಯರ್ಥಿಗಳು ಖುದ್ದು ಅಮೃತ್ ಪಾಲ್ ಅವರನ್ನು ಸಿಐಡಿ ಕಾರ್ಲ್ ಟನ್ ಭವನ ಆವರಣದಲ್ಲೇ ಇರುವ ಅಮೃತ್ ಪಾಲ್ ಕಚೇರಿಯಲ್ಲಿ ಭೇಟಿ ಮಾಡಿದ್ದರು. 545 ಪಿಎಸ್ಐ ಅಭ್ಯರ್ಥಿಗಳಿಂದ ಎಡಿಜಿಪಿ ಅಮೃತ್ ಪಾಲ್ ಖುದ್ದು ದೂರು ಆಲಿಸಿದ್ದರು. ಬ್ಲೂಟೂತ್ ಸೇರಿದಂತೆ ಇನ್ನೂ ಕೆಲ ಮಾದರಿಯಲ್ಲಿ ಅವ್ಯಹಾರ ನಡೆದಿರುವ ಕುರಿತು ಅಭ್ಯರ್ಥಿಗಳು ಹೇಳಿದ್ದರು. ಈ ವೇಳೆ ಅಮೃತ್ ಪಾಲ್ ದೂರನ್ನು ಗಂಭೀರವಾಗಿ ಪರಿಗಣಿಸದೆ, ಕ್ರಮ ಜರುಗಿಸದೆ ಅರಿವಿದ್ದು ಇಲ್ಲದಂತೆ ವರ್ತನೆ ಮಾಡಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕವೂ ಕ್ರಮ ಜರುಗಿಸದೆ ಕಳ್ಳಾಟ ಮುಂದುವರೆಸಿದ್ದರು. ಈ ಎಲ್ಲಾ ಅಂಶಗಳನ್ನ ಸಿಐಡಿ ಅಧಿಕಾರಿಗಳು ತನಿಖೆ ವೇಳೆ ಎಳೆ-ಎಳೆಯಾಗಿ ದಾಖಲಿಸಿಕೊಂಡಿದ್ದಾರೆ.
ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ 1 ಕೋಟಿ 35 ಲಕ್ಷ ಹಣವನ್ನು ಪಡೆದಿದ್ದ ಅಮೃತ್ ಪಾಲ್
ಇನ್ನು ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಇಂಚಿಂಚೂ ಮಾಹಿತಿ ಲಭ್ಯವಾಗಿದೆ. ಹರ್ಷ ಎಂಬುವವರು ಪಿಎಸ್ಐ ಅಕ್ರಮ ನೇಮಕಾತಿಗೆ ಅಭ್ಯರ್ಥಿಗಳಿಂದ ಹಣ ಸಂಗ್ರಹಿದ್ದರು. ಬರೋಬ್ಬರಿ 1 ಕೋಟಿ 35 ಲಕ್ಷ ಹಣವನ್ನು ಅಭ್ಯರ್ಥಿಗಳಿಂದ ಪಡೆದಿದ್ದರು. ಬೆಂಗಳೂರಿನ ಕಾರ್ಪೋರೇಷನ್ ಸಮೀಪದ ಹಡ್ಸನ್ ಸರ್ಕಲ್ ಬಳಿ ಲಂಚದ ಹಣ ಪಡೆದಿದ್ದರು. ಹರ್ಷ ಪಡೆದಿದ್ದ ಲಂಚದ ಹಣ ಬ್ಯಾಗ್ ಅನ್ನು ಡಿವೈಎಸ್ ಪಿ ಶಾಂತಕುಮಾರ್ ಪಡೆದುಕೊಂಡಿದ್ದರು. ನೀಲಿಬಣ್ಣದ ಬ್ಯಾಗ್ ನಲ್ಲಿ 2000 ಮತ್ತು 500 ಮುಖಬೆಲೆಯ ಹಣವಿತ್ತು.
ಮೈಸೂರು ಬ್ಯಾಂಕ್ ಸಮೀಪದ ಮುನೇಶ್ವರ ದೇವಾಲಯದ ಬಳಿ ಡಿವೈಎಸ್ ಪಿ ಶಾಂತಕುಮಾರ್ ಹಣದ ಬ್ಯಾಗ್ ಪಡೆದಿದ್ದರು. ಮರುದಿನ ಸಿಐಡಿ ಶನೇಶ್ವರ ದೇವಾಲಯದ ಬಳಿ ಹಣದ ಸಮೇತ ಬರುವಂತೆ ಅಮೃತ್ ಪಾಲ್ ಕರೆ ಮಾಡಿ ಹಣ ಪಡೆದಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಅಮೃತ್ ಪಾಲ್ಗೆ ಖುದ್ದು ಡಿವೈಎಸ್ಪಿ ಶಾಂತಕುಮಾರ್ 1 ಕೋಟಿ 35 ಲಕ್ಷ ಹಣವನ್ನು ನೀಡಿದ್ದರು. ಹಣವನ್ನು ಪಡೆದುಕೊಂಡ ಎಡಿಜಿಪಿ ಅಮೃತ್ ಪಾಲ್ ತನ್ನ ಮನೆಗೆ ತೆಗೆದುಕೊಂಡಿ ಹೋಗಿದ್ದರು ಎಂಬ ಬಗ್ಗೆ ಸಿಐಡಿ ತನಿಕೆ ವೇಳೆ ಮಾಹಿತಿ ಸಿಕ್ಕಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:21 am, Sat, 3 December 22