ಹೈಕೋರ್ಟ್​ ದಾರಿ ತಪ್ಪಿಸಲು ಯತ್ನಿಸಿದ ಅತ್ಯಾಚಾರ ಆರೋಪಿ ಕಾನ್​ಸ್ಟೇಬಲ್; ಮತ್ತೆ ಜಾಮೀನು ರುದ್ದು

| Updated By: Rakesh Nayak Manchi

Updated on: Mar 12, 2024 | 9:43 PM

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಮಹದೇವಪುರ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ನ್ಯಾಯಾಲಯದ ದಾರಿ ತಪ್ಪಿಸಿದ ಹಿನ್ನೆಲೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್, ಫಕೀರಪ್ಪನನ್ನು ವಶಕ್ಕೆ ಪಡೆಯುವಂತೆ ಡಿಸಿಪಿಗೆ ಸೂಚನೆ ನೀಡಿದೆ.

ಹೈಕೋರ್ಟ್​ ದಾರಿ ತಪ್ಪಿಸಲು ಯತ್ನಿಸಿದ ಅತ್ಯಾಚಾರ ಆರೋಪಿ ಕಾನ್​ಸ್ಟೇಬಲ್; ಮತ್ತೆ ಜಾಮೀನು ರುದ್ದು
ಪಾದರಾಯನಪುರ ಗಲಭೆ ಕೇಸ್
Follow us on

ಬೆಂಗಳೂರು, ಮಾ.12: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಮಹದೇವಪುರ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಪಡಿಸಿದೆ. ಅಲ್ಲದೆ, ಫಕೀರಪ್ಪ ಹಟ್ಟಿ​ ವಶಕ್ಕೆ ಪಡೆಯಲು ಡಿಸಿಪಿಗೆ ಸೂಚನೆ ನೀಡಿದ ಕೋರ್ಟ್, 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.

ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಠಾಣೆಗೆ ತೆರಳಿದ್ದಾಗ ಮಹದೇವಪುರ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಂತ್ರಸ್ತೆ ಪರಿಚಯ ಮಾಡಿಕೊಂಡಿದ್ದ. ಬಳಿಕ ವಿವಾಹವಾಗುವುದಾಗಿ ನಂಬಿಸಿ 2019 ರಿಂದ 2022 ರ ವರೆಗೆ ಆಕೆಯ ಮೇಲೆ ಫಕೀರಪ್ಪ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಳು. ಆದರೆ, ಪೊಲೀಸರು ಎಫ್​ಐಆರ್ ದಾಖಲಿಸಿರಲಿಲ್ಲ. ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಸಂಬಂಧಿಕನಿಂದಲೇ ಅತ್ಯಾಚಾರ, 7ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ

ಬಳಿಕ ಸೆಷನ್ಸ್ ಕೋರ್ಟ್​ಗೆ ಸಂತ್ರಸ್ತೆ ಖಾಸಗಿ ದೂರು ದಾಖಲಿಸಿದ್ದಳು. ಅದರಂತೆ ಫಕೀರಪ್ಪಗೆ ನಿರೀಕ್ಷಣಾ ಜಾಮೀನು ದೊರಕಿತ್ತು. ಆದರೆ, ಸೆಷನ್ಸ್ ಕೋರ್ಟ್ ಆರೋಪಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿತ್ತು. ಜಾಮೀನು ರದ್ದಾದ ವಿಚಾರವನ್ನು ಸೆಷನ್ಸ್ ಕೋರ್ಟ್ ಗಮನಕ್ಕೆ ಫಕೀರಪ್ಪ ತಂದಿರಲಿಲ್ಲ.

ಹೀಗಾಗಿ ಫಕೀರಪ್ಪ ಹಟ್ಟಿ​ಯನ್ನು ವಶಕ್ಕೆ ಪಡೆಯಲು ಡಿಸಿಪಿಗೆ ಸೂಚನೆ ನೀಡಿದ ನ್ಯಾ. ಹೆಚ್.ಪಿ.ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕೋರ್ಟ್ ದಾರಿ ತಪ್ಪಿಸಿದ ಆರೋಪಿ ಫಕೀರಪ್ಪ ಹಟ್ಟಿ​ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಆರೋಪಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ನ್ಯಾಯಾಲಯಕ್ಕೇ ಯಾಮಾರಿಸಲು ಯತ್ನಿಸಿದ್ದ ಕಾನ್​ಸ್ಟೇಬಲ್

ಪ್ರಕರಣ ಸಂಬಂಧ ಆರೋಪಿ ಫಕೀರಪ್ಪಗೆ 2022ರಲ್ಲಿ ಸೆಷನ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನನ್ನು ಹೈಕೋರ್ಟ್​ ರದ್ದುಗೊಳಿಸಿತ್ತು. ಇದಾದ ನಂತರ ತನ್ನ ವಿರುದ್ಧದ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಫಕೀರಪ್ಪ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ಅರ್ಜಿಯಲ್ಲಿ ಜಾಮೀನು ರದ್ದಾದ ವಿಚಾರವನ್ನು ಪ್ರಸ್ತಾಪಿಸರಿಲಿಲ್ಲ. ಹೀಗಾಗಿ ಫಕೀರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ ನೀಡಿತ್ತು.

ಬಳಿಕ ಆರೋಪಿಯ ಜಾಮೀನು ರದ್ದಾಗಿದ್ದ ವಿಚಾರ ಕೋರ್ಟ್ ಗಮನಕ್ಕೆ ಬರುತ್ತಿದ್ದಂತೆ ಫಕೀರಪ್ಪ ಸೆಷನ್ ಕೋರ್ಟ್​ ಮುಂದೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಸಿದ್ದನು. ಕೋರ್ಟ್ ಮತ್ತೆ ಫಕೀರಪ್ಪಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಸೆಷನ್ ಕೋರ್ಟ್​ ಎರಡನೇ ಬಾರಿ ನೀಡಿದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 pm, Tue, 12 March 24