ಬೆಂಗಳೂರು: ಮುಂಬರುವ ಗೌರಿ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ದ ಸೋಕ್ ಮಾರ್ಕೇಟ್’ ಆಯೋಜಿಸಲಾಗಿದೆ. ಸೆಪ್ಟೆಂಬರ್ 12ರವರೆಗೂ ನಡೆಯಲಿರುವ ಮೇಳದಲ್ಲಿ ವಿವಿಧ ಲೋಹಗಳ ಗಣೇಶ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಬ್ಬಗಳಿಗೆ ಬೇಕಾಗಿರುವ ಸಾಮಗ್ರಿಗಳು ಇಲ್ಲಿ ಲಭ್ಯ. ಅಲಂಕಾರಿಕ ವಸ್ತುಗಳ ಜೊತೆಗೆ ಬಟ್ಟೆ ಹಾಗೂ ಇತರ ವಸ್ತುಗಳೂ ಇಲ್ಲಿವೆ. 80ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕಲಾವಿದರು ಇಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ.
ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗಣೇಶನ ಮೂರ್ತಿಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಇದರ ಜೊತೆಯಲ್ಲಿಯೇ, ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲು ಅವಕಾಶ ಕಲ್ಪಿಸಲಾಗಿದೆ. ಕೈತೋಟದ (ಗಾರ್ಡನ್) ಅಲಂಕಾರಕ್ಕೆ ಬಳಸುವ ಪರಿಕರಗಳು, ಸಾಂಪ್ರದಾಯಿಕ ಶೈಲಿಯ ಕೈಮಗ್ಗ ಸೀರೆಗಳು, ಕುರ್ತಿಗಳು ಮತ್ತು ಆಭರಣಗಳು ಇಲ್ಲಿವೆ. ತರಹೇವಾರಿ ಕರಕುಶಲ ವಸ್ತುಗಳೊಂದಿಗೆ ಆಟಿಕೆಗಳು, ಬಟ್ಟೆ, ಮರದ ಆಟಿಕೆಗಳು, ಆಭರಣಗಳು, ಬೆಡ್ ಲೆನಿನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಇಲ್ಲಿ ಲಭ್ಯ.
ಕಲಾವಿದರಿಗೆ ನೆರವಾಗುವ ಪ್ರದರ್ಶನ: ಬಿ.ಎಲ್.ಶಂಕರ್
ಕೊರೊನಾದಿಂದಾಗಿ ಕರಕುಶಲಕರ್ಮಿಗಳಿಗೆ ತೊಂದರೆಯಾಗಿದೆ. ಅವರ ಕಲಾ ಪ್ರದರ್ಶನಕ್ಕೆ ವೇದಿಕೆ ಹಾಗೂ ಸಿದ್ಧ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಮಾರಾಟ ಮೇಳ ಆಯೋಜಿಸಲಾಗಿದೆ. ಈ ಬಾರಿಯ ಸೋಕ್ ಮಾರ್ಕೆಟ್ನಲ್ಲಿ ಲೋಹ ಹಾಗೂ ಮರಗಳನ್ನು ಬಳಸಿ ರೂಪಿಸಿರುವ ಗಣೇಶ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಆದ್ಯತೆ ಸಿಕ್ಕಿದೆ ಎಂದು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹೇಳಿದರು.
ಮೇಳ ನಡೆಯುವ ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪ ರಸ್ತೆ, ಬೆಂಗಳೂರು. ಕೊನೆಯ ದಿನ: ಸೆಪ್ಟೆಂಬರ್ 12, ಸಮಯ: ಬೆಳಿಗ್ಗೆ 11ರಿಂದ ಸಂಜೆ 7, ವೈಶಿಷ್ಟ್ಯ: ಮರ ಹಾಗೂ ಲೋಹದ ಗಣೇಶನ ಮೂರ್ತಿಗಳು.
(Rare Ganesha Idol Exhibition in Chitrakala Parishat)
ಇದನ್ನೂ ಓದಿ: Ganesh Chaturthi Guidelines 2021: ಗಣೇಶ ಚತುರ್ಥಿ, ಮೊಹರಂ ಆಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್ಲೈನ್ಸ್
ಇದನ್ನೂ ಓದಿ: 30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ
Published On - 5:14 pm, Mon, 6 September 21