
ಬೆಂಗಳೂರು, ಸೆಪ್ಟೆಂಬರ್ 04: ಭಾರತೀಯ ಸಂಸ್ಕೃತಿ ಪ್ರಸಾರ ಹಾಗೂ ಸಂಶೋಧನೆಯಲ್ಲಿ ನಿರತರಾದ ವಿದ್ವಾಂಸರಿಗೆ ಕಳೆದ 25 ವರ್ಷಗಳಿಂದ ಕಪಾಲಿಶಾಸ್ತ್ರಿ (T.V. Kapali Sastry) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದರಂತೆ ಈ ವರ್ಷ ಕೂಡ ಡಾ. ರಾಮಚಂದ್ರ ಜಿ. ಭಟ್ ಕೋಟೆಮನೆ, ಡಾ. ಯೋಗೇಶ ನಾಯ್ಕರ್, ಹರಿಹರಪುರ ಶ್ರೀಧರ್ ಹಾಗೂ ಪ್ರೊ. ವಿರೂಪಾಕ್ಷವಿ ಜಡ್ಡಿಪಾಲ್ ಅವರು ಆಯ್ಕೆ ಆಗಿದ್ದಾರೆ. ಹತ್ತು ಸಾವಿರ ರೂ ನಗದು ಸೇರಿದಂತೆ ಪ್ರಶಸ್ತಿ ಫಲಕದೊಡನೆ ವಿದ್ವಾಂಸರನ್ನು ಸನ್ಮಾನಿಸಲಾಗುತ್ತಿದೆ.
ಈ ಕುರಿತಾಗಿ ಸಾಕ್ಷಿ ಸಂಸ್ಥೆಯಿಂದ ಪ್ರತಿಕಾ ಪ್ರಕಟಣೆ ಹೊರಡಿಸಲಾಗಿದೆ. ಅಪ್ರತಿಮ ದಾರ್ಶನಿಕ, ಶಾಸ್ತ್ರಗಳ ಸಮನ್ವಯಕಾರ, ಭಾರತೀಯ ಸಂಸ್ಕೃತಿಯ ಸಂರಕ್ಷಕ, ವಿದ್ವತ್ ಪ್ರಪಂಚದ ಬಹುಮುಖ ಸಾಧಕ ಟಿ.ವಿ. ಕಪಾಲಿಶಾಸ್ತ್ರಿಯವರ 140ನೇ ಜನ್ಮವರ್ಷಾಚರಣೆ ದಿನದಂದು ಅಂದರೆ ಸೆಪ್ಟೆಂಬರ್ 07ರಂದು ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್‌ನ ಮಲ್ಟಿಮೀಡಿಯ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಜ್ಞಾನ ಸಂರಕ್ಷಣೆ, ಪ್ರಸಾರ ಹಾಗೂ ಸಂಶೋಧನೆಗಳಲ್ಲಿ ಕಳೆದ 28 ವರ್ಷಗಳಿಂದ ನಿರತವಾದ ಸಾಕ್ಷಿ ಸಂಸ್ಥೆಯು ಈ ಸಮಾರಂಭ ಹಮ್ಮಿಕೊಂಡಿದೆ.
ಇನ್ನು ಟಿ.ವಿ. ಕಪಾಕಶಾಸ್ತ್ರಿ ಅವರ ಜೀವನ ಬೆಳಕಿನ ಪಥ ಅವರು ವೇದ, ಸಂಸ್ಕೃತ ಲೋಕದಲ್ಲಿ ವಿಹರಿಸಿದ್ದಾರೆ. ಉಪನಿಷತ್ ಪ್ರಪಂಚದ ಬಾಗಿಲು ತೆರೆದಿದ್ದಾರೆ. ತಂತ್ರಶಾಸ್ತ್ರದ ಮರ್ಮವನ್ನು ಬಂಗಾರದ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ. ಕಾವ್ಯದ ಮೂಲಕ ಭಾವಾನಂದ ನೀಡಿದ್ದಾರೆ. ಗದ್ಯ ಬರವಣಿಗೆಗಳ ಮೂಲಕ ಜ್ಞಾನದ ಆತ್ಮದರ್ಶನ ಮಾಡಿಸಿದ್ದಾರೆ. ಸಂಸ್ಕೃತ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳಲ್ಲಿ ಸಮಾನ ಪ್ರಭುತ್ವ ಸಾಧಿಸಿದ್ದವರು ಶ್ರೀ ರಮಣ ಮಹರ್ಷಿಗಳ ಬೋಧನೆಯನ್ನು ಲೋಕಕ್ಕೆ ಪರಿಚಯಿಸಿದವರು ಶ್ರೀ ಕಪಾಲಿಶಾಸ್ತ್ರಿಗಳು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.