ಸರ್ವಜನಾಂಗದ ಶಾಂತಿಯ ತೋಟವಾಗಿರುವ ಬೆಂಗಳೂರು ರಿಯಲ್ ಎಸ್ಟೇಟ್ ಕುಳಗಳ ಪಾಲಾಗಿ ಯಾವುದೋ ಕಾಲವಾಗಿದೆ. ಜೀವಮಾನವೆಲ್ಲ ಹೊಟ್ಟೆಗೆಬಟ್ಟೆಗೆ ಕಟ್ಟಿ ಕೂಡಿಟ್ಟ ಸಂಚಿತ ಹಣದಿಂದ ನಿವೇಶನ ತೆಗೆದುಕೊಳ್ಳುವುದು, ಇದ್ದುದರಲ್ಲೇ ಚಿಕ್ಕ ಚೊಕ್ಕ ಮನೆ ಕಟ್ಟಿಕೊಳ್ಳುವುದು ಮಧ್ಯಮವರ್ಗ, ಕೆಳವರ್ಗದ ಜನರ ಪಾಡಾಗಿದೆ. ಆದರೆ ಅದಕ್ಕೂ ಕಲ್ಲು ಹಾಕುವ, ಹಣ ಮಾಡುವುದನ್ನೇ ದಂದೆಯಾಗಿಸಿಕೊಂಡಿರುವ ದಗಲಬಾಚಿಗಳು ಜನಸಾಮಾನ್ಯರ ನಂಬಿಕೆ ವಿಶ್ವಾಸಾರ್ಹಗಳ ಅಡಿಪಾಯವನ್ನೇ ಬುಡಮೇಲು ಮಾಡುವುದನ್ನು ಕಾಯಕವಾಗಿಸಿಕೊಂಡಿದ್ದಾರೆ. ಯಾವುದೇ ಪೊಲೀಸ್, ಕೋರ್ಟು ಕಚೇರಿಗಳಿಗೂ ಜಗ್ಗದ ಖದೀಮರು ಬೀದಿಗೊಬ್ಬರಂತೆ ಸಿಗುತ್ತಾರೆ ರಾಜಧಾನಿ ಬೆಂಗಳೂರಿನಲ್ಲಿ.
ತಾಜಾ ಪ್ರಕರಣದ ಮುಂದುವರಿದ ಭಾಗವಾಗಿ ಸಂಚಿತ ಗೌರವ ಎಂಬ ನಿರ್ಮಾಣ ಕ್ಷೇತ್ರದ ಯುವ ಉದ್ಯಮಿಯ ಸುತ್ತ ಈ ಕತೆ ಸುತ್ತುತ್ತದೆ. ಈತ ಮೂಲತಃ ಉತ್ತರ ಭಾರತದವ. ಸರಿಸುಮಾರು 10 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಸೆಟಲ್ ಅಗುತ್ತಾನೆ. ಉತ್ಸಾಹಿ ಯುವಕ ಆರಂಭದಲ್ಲಿ ಜನರ ವಿಶ್ವಾಸ ಗಳಿಸುತ್ತಾ, ತನ್ನ ಮಾತಿನಲ್ಲೇ ಮನೆ ಕಟ್ಟುತ್ತಾ, ನಿಮ್ಮ ಕನಸಿನ ಅರಮನೆಗಳನ್ನು ಅಗ್ಗವಾಗಿ ನಿರ್ಮಿಸಿಕೊಡುತ್ತೇನೆ. ನನ್ನ ಕಂಪನಿಗೆ ಹಣ ಕಟ್ಟಿ ಎನ್ನುತ್ತಾನೆ. ಆ ಕಂಪನಿಗೆ ಹೌಸ್ಜಾಯ್ Housejoy ಎಂಬ ಅರ್ಥಪೂರ್ಣ ಬ್ರ್ಯಾಂಡ್ ಹೆಸರನ್ನೂ ಇಡುತ್ತಾನೆ.
ಕಾಲಾಂತರದಲ್ಲಿ ಇದೊಂದು ದೋಖಾ ಕಂಪನಿ ಎಂದು ಜನರಿಗೆ ಅರ್ಥವಾಗುವ ವೇಳೆಗೆ ಅವರ ಕನಸಿನ ಅರಮನೆ ಕುಸಿದುಬಿದ್ದಿರುತ್ತದೆ. ಇತ್ತ ಆರ್ಥಿಕವಾಗಿ ಬಲಾಢ್ಯಗೊಳ್ಳುವ ಸಂಚಿತ್ ಗೌರವ್ ಜನರ ಹಣವನ್ನೆಲ್ಲಾ ದೋಚಿ, ನಾಪತ್ತೆಯಾಗುತ್ತಾನೆ. ಆದರೆ ಹಣ ಮಾಡುವ ದಂದೆಯನ್ನು ಅರಿತುಕೊಂಡಿದ್ದ ಸಂಚಿತ ಮತ್ತೊಂದು, ಮಗದೊಂದು ಹೆಸರುಗಳಲ್ಲಿ ತನ್ನ ಹೆಸರಿನಲ್ಲಿ ಕಂಪನಿಗಳನ್ನು ಸ್ಥಾಪಿಸುತ್ತಾನೆ. ಅನೇಕ ಮಂದಿಗೆ ನಾಮ ಹಾಕಿದ ಬಳಿಕ ಇಂದಿಗೂ ಜನರನ್ನು ಯಾಮಾರಿಸುವುದನ್ನೇ ಕಾಯಕವಾಗಿಸಿಕೊಂಡಿದ್ದಾನೆ ಎಂದು ಇವನಿಂದ ಮೋಸಹೋಗಿರುವ ಹತ್ತಾರು ಮಂದಿ ಇವನ ಗುಣಗಾನ ಮಾಡುತ್ತಾ, ತಮ್ಮ ಸಂಕಷ್ಟದ ಕತೆಯನ್ನು ಟಿವಿ9 ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ.
ಅಗ್ರಹಾರ ಬನ್ನೇರುಘಟ್ಟದಲ್ಲಿ ವಾಸವಾಗಿರುವ ಟಿ.ವಿ.ಎಸ್. ಪ್ರವೀಣ್ ಎಂಬುವವರು ಟೆಕ್ಕಿಯಾಗಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಈತ 2018ರಲ್ಲಿ ತಾನು ದುಡಿದ ದುಡ್ಡಿನಲ್ಲಿ ಚೊಕ್ಕದಾದ ಮನೆಯೊಂದನ್ನು ಕಟ್ಟಿಕೊಳ್ಳಬೇಕು ಎಂದು ಯೋಚಿಸುತ್ತಾನೆ. ಸರಿಯಾಗಿ ಅದೇ ಕಾಲಕ್ಕೆ ಪ್ರವೀಣ್ಗೆ ಸಂಚಿತ್ ಗೌರವ್ ಸ್ಥಾಪಕನಾಗಿರುವ ಸರ್ವಲೋಕ ಸರ್ವೀಸಸ್ ಆನ್-ಕಾಲ್ ಪ್ರೈ. ಲಿಮಿಟೆಡ್ ಎಂಬ ಹೌಸಿಂಗ್ ಕಂಪನಿ ಕಣ್ಣಿಗೆ ಬೀಳುತ್ತದೆ. ಹಿಂದೆಮುಂದೆ ಯೋಚಿಸದೆ ಟೆಕ್ಕಿ ಪ್ರವೀಣ್ ಸೀದಾ ಆ ಕಂಪನಿಯ ಮೆಟ್ಟಿಲು ಹತ್ತುತ್ತಾರೆ.
ಉತ್ಸಾಹಿ ಯುವಕ ಸಂಚಿತ್ ಗೌರವ ಎಂಬಾತನನ್ನು ಕಂಡೊಡನೆ ತನ್ನ ಮನೆ ಕಟ್ಟಿಕೊಡಲು ಈತನೇ ಸರಿಯಾದ ವ್ಯಕ್ತಿ ಎಂದು ಮೊದಲ ಭೇಟಿಯಲ್ಲೇ ನಿರ್ಧರಿಸಿಬಿಡುತ್ತಾರೆ. ಅದೇ ಅವರು ಮಾಡುವ ಮಹಾ ಯಡವಟ್ಟು. ಏಕೆಂದರೆ ಕಾಲಾಂತರದಲ್ಲಿ ಉದ್ಯಮಿ ಸಂಚಿತ ಗೌರವ್ ಪ್ರವೀಣ್ ನಿಂದ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಳ್ಳುತ್ತಾನೆಯೇ ಹೊರತು, ಅದಕ್ಕೆ ಬದಲಿಯಾಗಿ ಆತನಿಗೆ ಮನೆ ಕಟ್ಟಿಸಿಕೊಡುವ ಗೋಜಿಗೇ ಹೋಗುವುದಿಲ್ಲ. ಕನಿಷ್ಠ ಒಂದು ಇಟ್ಟಿಗೆಯನ್ನೂ ಇಡುವುದಿಲ್ಲ. ಆದರೂ ಪ್ರವೀಣನಿಂದ ಸುಮಾರು 20 ಲಕ್ಷ ರೂಪಾಯಿ ಕಟ್ಟಿಸಿಕೊಳ್ಳುತ್ತಾನೆ ವಂಚನೆಯೇ ತನ್ನ ಮನೆಯ ದೇವರು ಎನ್ನುವ ಸಂಚಿತ ಗೌರವ್.
ಮುಂದೆ 2020ರ ವೇಳೆಗೆ ತಾನು ಮೋಸ ಹೋಗಿರುವುದು ಪ್ರವೀಣ್ ಗೆ ಅರಿವಾಗತೊಡಗುತ್ತದೆ. ತಡಮಾಡದೆ ನಮ್ಮ ದೇಶದಲ್ಲಿ ಇನ್ನೂ ನ್ಯಾಯ ನೀತಿ ಸದೃಢವಾಗಿದೆ ಎಂದು ಪೊಲೀಸ್, ಕೋರ್ಟ್ ಮೆಟ್ಟಿಲೇರುತ್ತಾರೆ. ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಎದುರು ಹಾಜರಾಗಿ ಮಹಾಸ್ವಾಮಿ ನನಗೆ ಮಹಾಮೋಸವಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ. ಆದರೆ ತನ್ನಂತೆ ಹತ್ತಾರು ಮಂದಿ ಸಂಚಿತ ಗೌರವನಿಗೆ ಹಿಡಿಶಾಪ ಹಾಕುತ್ತಾ ನಾನಾ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿರುತ್ತಾರೆ. ಆದರೆ ಸಂಚಿತ ತನ್ನ ಗ್ರಾಹಕರಿಗೆ ಕನಿಷ್ಟ ಗೌರವವನ್ನೂ ನೀಡದೆ ನಾಪತ್ತೆಯಾಗುತ್ತಾನೆ. ಆದರೆ ಹೀಗೆ ಹತ್ತಾರು ಮಂದಿಯಿಂದ ಹಗಲು ದರೋಡೆ ಮಾಡಿ ಸಂಪಾದಿಸಿದ ಹಣದಲ್ಲಿ ಬೆಂಗಳೂರಿನಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿರುತ್ತಾನೆ. ಆದರೆ ಅಪ್ಪಿತಪ್ಪಿಯೂ ಪೊಲೀಸರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳುತ್ತಾನೆ.
ಅಸಲಿಗೆ ಮನೆ ಕಟ್ಟುವುದೆಂದರೆ ಅದು ತಲಾ ಕೋಟ್ಯಂತರ ರೂಪಾಯಿಯ ಬ್ಯುಸಿನೆಸ್ ಆಗಿರುತ್ತದೆ. ಹಾಗೆಂದೇ ಹತ್ತಾರು ಗ್ರಾಹಕರಿಂದ ತಲಾ ಕೋಟಿಗಳಲ್ಲಿ ಹಣ ಬಾಚುವ ಪ್ರೋಗ್ರಾಮ್ ಹಾಕಿಕೊಂಡಿರುತ್ತಾನೆ ಸಂಚಿತ ಗೌರವ. ಆದರೆ ಹಂತಹಂತವಾಗಿ ನಯವಾದ ಮಾತುಗಳಲ್ಲಿ ನಾನಾ ಬಾಬತ್ತುಗಳಡಿ ತಲಾ 5-10 ಲಕ್ಷ ರೂಪಾಯಿಗಳನ್ನು ಕಟ್ಟಿಸಿಕೊಳ್ಳುವ ಸಂಚಿತ್ ಬಾಬು ಒಬ್ಬೊಬ್ಬರಿಂದಲೂ 20-25 ಲಕ್ಷ ರೂಪಾಯಿ ಕಸಿದುಕೊಳ್ಳುತ್ತಾನೆ. ಅದು ಸಂಚಿತಗೊಂಡು ಮುಂದೆ ಕೋಟ್ಯಂತರ ರೂಪಾಯಿ ಆಗುತ್ತದೆ. ಅಲ್ಪಸ್ವಲ್ಪ ದುಡ್ಡನ್ನು ಮಾತ್ರವೇ ಹಿಂದಿರುಗಿಸಿ ಮಂಕುಬೂದಿ ಎರಚಿದ್ದಾನೆ.
ಇನ್ನು ಪೊಲೀಸು, ಕೋರ್ಟ್ ಕಣ್ಣಿಗೆ ಮಣ್ಣೆರೆಚುತ್ತಾ ಬೆಂಗಳೂರಿನಲ್ಲಿ ರಾಜಾರೋಶವಾಗಿ ಓಡಾಡಿಕೊಂಡಿದ್ದಾನೆ. ಮತ್ತೊಂದು ಮಗದೊಂದು ನಿರ್ಮಾಣ ಕಂಪನಿಗಳನ್ನು ಸ್ಥಾಪಿಸುತ್ತಾ ಬಲಿ ಕಾ ಬಕರಾಗಳಿಗೆ ಹೊಂಚುಹಾಕುತ್ತಿದ್ದಾನೆ. ಈ ಪ್ರಕ್ರಿಯೆಯಲಿ ಆತನೇ ಹೇಳುವಂತೆ 50 ಕ್ಕೂ ಹೆಚ್ಚು ಮಂದಿ ಅವನ ಕಂಪನಿಯ ಗ್ರಾಹಕರಾಗಿದ್ದಾರೆ. ಅದಕ್ಕಿಂತ ಹೀನಾಯವೆಂದರೆ ತನ್ನ ಕಂಪನಿ ಕಚೇರಿಗಳನ್ನು ನಡೆಸಲು ನೂರಾರು ಮಂದಿ ಯುವಕರನ್ನು ನೇಮಿಸಿಕೊಳ್ಳುತ್ತಾನೆ. ಅವರನ್ನು ಹೊಸ ಗ್ರಾಹಕರ ತಲಾಷೆಗೆ ಬಿಡುತ್ತಾನೆ. ಹಾಗಂತ ಇವನ ಟಾರ್ಗೆಟ್ ಪೂರೈಸುವ ಆ ಯುವ ಕೆಲಸಗಾರರಿಗಾದರೂ ಸಂಬಳ ಸವಲತ್ತು ಕೊಟ್ಟಿದ್ದಾನಾ ಅಂದರೆ ತಲಾ ಕನಿಷ್ಠ 5 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾನೆ ಎನ್ನುತ್ತಾರೆ ಈತನಿಂದ ಮರಾಮೋಸ ಹೋಗಿರುವ ಯುವ ನೌಕರರು.
ಸರ್ವಲೋಕ ಸರ್ವೀಸಸ್ ಆನ್-ಕಾಲ್ ಪ್ರೈ. ಲಿಮಿಟೆಡ್ ಎಂಬ ಸಂಘಟಿತ ಕಂಪನಿಯ ಸಹ ಸಂಸ್ಥಾಪಕ ಮತ್ತು COO ಆದ ಸಂಚಿತ್ ಗೌರವ್ ತನ್ನ ಪುರಾತನ ಗ್ರಾಹಕರಿಗೆ ಮನೆಗಳನ್ನು ನಿರ್ಮಿಸಿಕೊಡದೆ, ಅಲ್ಪಸ್ವಲ್ಪ ದುಡ್ಡನ್ನು ಹಿಂದಿರುಗಿಸಿ ಮಂಕುಬೂದಿ ಎರಚಿದ್ದಾನೆ. ತನ್ನ ಪುರಾನಾ ಬಹಾನಾಗಳನ್ನು ಮುಂದೊಡ್ಡುತ್ತಾ ಕಾನೂನು ಕಣ್ಣಿಗೂ ಮಣ್ಣೆರೆಚುತ್ತಾನೆ. ಮುಂಬೈ ಮೂಲದ ದಿವ್ಯಾ ಮಲಯನ್ (Divya Malyan) ಕಂಪನಿಯ ಉಪಾಧ್ಯಕ್ಷೆಯಾಗಿ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ದುಡ್ಡು ಮಾಡುವ ದಂದೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಇದರಿಂದ ಬೇಸತ್ತ ಪ್ರವೀಣ್ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 35 ರ ಅಡಿ ಗ್ರಾಹಕ ಆಯೋಗದಲ್ಲಿ ತಮಗಾಗಿರುವ ಸೇವಾನ್ಯೂನತೆ ಮತ್ತು ವಂಚನೆಯ ವಿರುದ್ಧ ಅರ್ಜಿ ಸಲ್ಲಿಸುತ್ತಾರೆ.
ಮನೆ ನಿರ್ಮಾಣ ಸೇವೆಯನ್ನು ಒದಗಿಸಲು 28-06-2019 ದಿನಾಂಕದಂದು ಬುಕಿಂಗ್ ಒಪ್ಪಂದ ಮತ್ತು 12.09.2019 ರಂದು ಮುಖ್ಯ ಬುಕಿಂಗ್ ಒಪ್ಪಂದವಾಗುತ್ತದೆ. ಒಟ್ಟು ಯೋಜನಾ ವೆಚ್ಚ ರೂ. 1,09,81,905/- (ಒಂದು ಕೋಟಿ ಒಂಬತ್ತು ಲಕ್ಷಗಳು ಎಂಬತ್ತೊಂದು ಸಾವಿರದ ಒಂಬೈನೂರ ಐದು ರೂಪಾಯಿ) ಇದು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದಂತೆ ವಸ್ತು, ಕಾರ್ಮಿಕ, ವಿನ್ಯಾಸ, ನಿರ್ವಹಣೆ, GST ಮತ್ತು ಸ್ಥಳೀಯ ತೆರಿಗೆಗಳು ಇತ್ಯಾದಿಗಳನ್ನು ಒಳಗೊಂಡಿತ್ತು. ಸಂಚಿತ್ ಗೌರವ್, ಸಹ-ಸಂಸ್ಥಾಪಕ ಮತ್ತು ಸಿಒಒ ಅಧಿಕೃತ ಸಹಿದಾರನಾಗಿ 12.09.2019 ರಂದು ಪ್ರವೀಣ್ ಜೊತೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಪ್ರಕಾರ ಮನೆ ಕಟ್ಟಿಸಿಕೊಡುತ್ತೇನೆ ಎಂದು ಒಟ್ಟು 16,80,000 ರೂ. ಪ್ರವೀಣರಿಂದ ಸಂಚಿತ್ ಹಣ ಪಡೆಯುತ್ತಾನೆ.
ಆದರೆ ಈ ಒಪ್ಪಂದ ಕರಾರುಪತ್ರದಲ್ಲಷ್ಟೇ ಉಳಿದುಹೋಯಿತು. ನಾನಾ ಸಬೂಬುಗಳನ್ನು ಹೇಳುತ್ತಾ ಅತ್ತ ಮನೆಯನ್ನೂ ನಿರ್ಮಿಸದೆ, ಇತ್ತ ಹಣವನ್ನೂ ವಾಪಸ್ ಮಾಡದೆ ಒಪ್ಪಂದಕ್ಕೆ ಕಿಂಚಿತ್ತೂ ಗೌರವವನ್ನು ನೀಡದೆ ಸಂಚಿತ ವಂಚನೆಯ ಹಾದಿಯಲ್ಲಿ ಸಾಗುತ್ತಾನೆ. ಈ ಮಧ್ಯೆ ಕೊರೊನಾ ಮಹಾಮಾರಿ ಹೆಸರು ಹೇಳಿಕೊಂಡು ಒಂದಷ್ಟು ಕಾಲಾವಕಾಶ ಗಿಟ್ಟಿಸುತ್ತಾನೆ. ಆದರೆ ಆ ವೇಳೆಗಾಗಲೇ ಸಂಚಿತ್ ಗೌರವ್ ಮೋಸ ಮಾಡಿದ್ದ ಎನ್ನುತ್ತಾರೆ ಸಂತ್ರಸ್ತ ಪ್ರವೀಣ್.
ಮುಖ್ಯ ಬುಕಿಂಗ್ ಒಪ್ಪಂದದ ಪ್ರಕಾರ ಮನೆಯನ್ನು 12 ತಿಂಗಳೊಳಗೆ ಹಸ್ತಾಂತರಿಸಲಾಗುವುದು ಮತ್ತು 3 ತಿಂಗಳ ಗ್ರೇಸ್ ಅವಧಿಯಲ್ಲಿ ಕಟ್ಟಿಕೊಡಬೇಕಿತ್ತು. ಷರತ್ತುಗಳ ಪ್ರಕಾರ ಅಕ್ಟೋಬರ್ 2019 ರೊಳಗೆ ನಿರ್ಮಾಣವನ್ನು ಪ್ರಾರಂಭಿಸಬೇಕಾಗಿತ್ತು ಮತ್ತು ಜನವರಿ 2021 ರ ಹೊತ್ತಿಗೆ ಗ್ರೇಸ್ ಅವಧಿ ಸೇರಿದಂತೆ ವಾಸಯೋಗ್ಯ ಸ್ಥಿತಿಯಲ್ಲಿ ಪೂರ್ಣಗೊಂಡ ಯೋಜನೆಯನ್ನು ಹಸ್ತಾಂತರಿಸಬೇಕಾಗಿತ್ತು. ಆದರೆ ಮೇಲೆ ತಿಳಿಸಲಾದ ಮೊತ್ತವನ್ನು ಪಾವತಿಸಿದ ನಂತರ 6 ತಿಂಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದರೂ, ಸೈಟ್‌ನಲ್ಲಿ ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭದ ಸುಳಿವು ಇರಲಿಲ್ಲ.
ಈ ಮಧ್ಯೆ, ಸಂತ್ರಸ್ತ ಪ್ರವೀಣ್ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ನಿರ್ಮಾಣ ಸಾಲವನ್ನು ಪಡೆದಿದ್ದರು. ಆದರೆ ಗೃಹ ನಿರ್ಮಾಣ ಕಾರ್ಯ ಆರಂಭವಾಗದ ಕಾರಣ ಬ್ಯಾಂಕ್ ಸಾಲ ನೀಡುವುದನ್ನು ರದ್ದುಗೊಳಿಸುತ್ತದೆ. ಇದು ಪ್ರವೀಣರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ದೊಡ್ಡ ಮೊತ್ತದ EMI ಗಳನ್ನು ಪಾವತಿಸುತ್ತಾ ಬಂದಿದ್ದಾರೆ ಪ್ರವೀಣ್. ಕೊನೆಗೆ 05.03.2021 ರಂದು ಯೋಜನಾ ಒಪ್ಪಂದ ರದ್ದುಗೊಳ್ಳುತ್ತದೆ.
ಪ್ರವೀಣ್ ಅವರು ಈ ಎಲ್ಲಾ ವಿದ್ಯಮಾನಗಳನ್ನು ಗ್ರಾಹಕ ಆಯೋಗದ ಗಮನಕ್ಕೆ ತಂದು, ತಮಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡುತ್ತಾರೆ. ಅರ್ಜಿ ಅಂಗೀಕರಿಸಿದ ಕೋರ್ಟ್ ಸೇವಾನ್ಯೂನತೆ ಆಗಿರುವುದನ್ನು ಎತ್ತಿಹಿಡಿಯುತ್ತದೆ. ಬಡ್ಡಿ ಸಮೇತ ಅಸಲನ್ನು ದೂರುದಾರರಿಗೆ ಪಾವತಿಸುವಂತೆ ಸಂಚಿತ ಗೌರವ್ಗೆ ಕೋರ್ಟ್ ಸೂಚಿಸುತ್ತದೆ. ಕೋರ್ಟ್ ಆದೇಶದಂತೆ ಪರಿಹಾರಾರ್ಥವಾಗಿ ಸುಮಾರು 27 ಲಕ್ಷ ರೂಪಾಯಿಗಳನ್ನು ಸಂಚಿತ್ ಗೌರವ್ ತನ್ನ ಗ್ರಾಹಕರಾದ ಪ್ರವೀಣ್ಗೆ ಪಾವತಿಸಬೇಕಿದೆ. ಆದರೆ ಅಲ್ಲಿಂದಾಚೆಗೆ ಮತ್ತೊಂದು ಸುತ್ತಿನ ಆಟ ಆಡತೊಡಗಿದ ಸಂಚಿತ್ ಕೋರ್ಟ್ ಆದೇಶಕ್ಕೂ ಜಗ್ಗಿಲ್ಲ ಬಗ್ಗಿಲ್ಲ. ಸಂಚಿತ್ ಗೌರವ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಪಡೆದಿರುವ ಜಯನಗರ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆರೋಪಿಗಾಗಿ ಹುಡುಕುತ್ತಿದ್ದಾರೆ. ಆದರೆ ಈ ವರೆಗೂ ಆರೋಪಿ ಪತ್ತೆಯಾಗಿಲ್ಲ. ಸಂತ್ರಸ್ತ ಪ್ರವೀಣ್ ಪೆಚ್ಚುಮೋರೆ ಹಾಕಿಕೊಂಡು ಕುಳಿತಿದ್ದಾರೆ.
ಕೋರ್ಟ್ ಕಟೆಕಟೆಗೆ ಬಾರದೆ ನಾಪತ್ತೆಯಾಗಿರುವ ಕಂಪನಿಯ ಸ್ಥಾಪಕ ಸಂಚಿತ್ ಗೌರವ್ ಪ್ರತಿಕ್ರಿಯೆಗಾಗಿ ಟಿವಿ9 ಪ್ರಯತ್ನಿಸಿದಾಗ ತಾನು ಅದಾಗಲೇ ಕಂಪನಿಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನು ಕಂಪನಿ ಈ ಹಿಂದೆ ನಿರ್ಮಾಣ ಕ್ಷೇತ್ರದಲ್ಲಿ ಆರ್ಥಿಕವಾಗಿ ಚೆನ್ನಾಗಿದ್ದಾಗಲೂ ಯಾವುದೇ ಮೆನಯನ್ನೂ ಕಟ್ಟಿಕೊಡುವ ಗೋಜಿಗೆ ಹೋಗಿಲ್ಲ. ಗ್ರಾಹಕರನ್ನು ಯಾಮಾರಿಸುತ್ತಾ ಹಣ ಕಟ್ಟಿಸಿಕೊಳ್ಳುವುದನ್ನೇ ಕಾಯಕವಾಗಿಸಿಕೊಂಡಿದ್ದ. ಎಷ್ಟರ ಮಟ್ಟಿಗೆ ಅಂದರೆ ಬೆಂಗಳೂರಿನಲ್ಲಿ ತಾನು ಸ್ಥಾಪಿಸಿರುವ ಕಂಪನಿ ಚೆನ್ನಾಗಿ ದುಡ್ಡು ಮಾಡುತ್ತಿದೆ ಎಂಬುದನ್ನು ಅರಿತು ಬೇರೆ ರಾಜ್ಯಗಳಲ್ಲಿ ಐದಾರು ನಗರಗಳಲ್ಲಿ ಇಂತಹುದೇ ದೋಖಾ ಕಂಪನಿಗಳನ್ನು ತೆರೆಯಲು ಆಲೋಚಿಸಿದ್ದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:26 pm, Mon, 19 February 24