ಬೆಂಗಳೂರು, (ಡಿಸೆಂಬರ್, 29): ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ (Mantri Square Mall) ಮತ್ತೆ ತೆರೆಯಲು ಕೋರ್ಟ್ ಅವಕಾಶ ನೀಡಿದೆ. ತೆರಿಗೆ ಕಟ್ಟದ ಕಾರಣ ಬಿಬಿಎಂಪಿ(BBMP), ಮಂತ್ರಿ ಮಾಲ್ಗೆ ಬೀಗ ಹಾಕಿತ್ತು. ಬಿಬಿಎಂಪಿಯ ಈ ನಿರ್ಧಾರವನ್ನು ಪ್ರಶ್ನಿಸಿ ಮಾಂತ್ರಿ ಮಾಲ್ ಆಡಳಿತ ಮಂಡಳಿ ಕೋರ್ಟ್ನಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಅನ್ವಯ ಮತ್ತೆ ಮಂತ್ರಿ ಮಾಲ್ ತೆರೆಯಲು ಬಿಬಿಎಂಪಿ ಅವಕಾಶ ನೀಡಿದೆ. ಇದರೊಂದಿಗೆ ಬಿಬಿಎಂಪಿಗೆ ಹಿನ್ನಡೆಯಾಗಿದೆ.
2019-20ರವರೆಗಿನ ಒಟ್ಟು 51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಂತ್ರಿ ಸ್ಕ್ವೇರ್ ಮಾಲ್ಗೆ ಬಿಬಿಎಂಪಿ ಬೀಗ ಜಡಿದಿತ್ತು. ಖುದ್ದು ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಅವರು ಡಿಸೆಂಬರ್ 27ರಂದು ಮಂತ್ರಿ ಮಾಲ್ಗೆ ತೆರಳಿ ಪ್ರಮುಖ ದ್ವಾರವನ್ನು ಲಾಕ್ ಮಾಡಿದ್ದರು.
ಇದನ್ನೂ ಓದಿ: 51 ಕೋಟಿ ರೂ. ತೆರಿಗೆ ಬಾಕಿ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಮತ್ತೆ ಬೀಗ
2020ರ ಆಗಸ್ಟ್ನಲ್ಲೇ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರು ಕೂಡ ಮಾಲ್ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ.
ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಬೀಗ ಹಾಕಲಾಗಿತ್ತು. ಈ ಹಿಂದೆ 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ಅಲ್ಲದೇ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮಂತ್ರಿ ಮಾಲ್ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.