Shakti Scheme: ಪ್ರಯಾಣಿಕರ ಸಂದಣಿ ಅನುಗುಣವಾಗಿ ಹೆಚ್ಚುವರಿ KSRTC ಬಸ್​ಗಳ ಕಾರ್ಯಾಚರಣೆಗೆ ಸೂಚನೆ

|

Updated on: Jun 20, 2023 | 4:20 PM

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆಯಂತೆ ಸಾರಿಗೆ ನಿಮಗದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಶಕ್ತಿ ಯೋಜನೆಗೆ ಸಂಬಂಧಿಸಿ ಎಲ್ಲಾ ವಿಭಾಗೀಯ ಅಧಿಕಾರಿಗಳೊಂದಿಗೆ ಹಾಗೂ ಘಟಕ ವ್ಯವಸ್ಥಾಪಕರೊಂದಿಗೆ ವಿಡಿಯೋ ಸಂವಾದ ನಡೆಸಿದರು.

Shakti Scheme: ಪ್ರಯಾಣಿಕರ ಸಂದಣಿ ಅನುಗುಣವಾಗಿ ಹೆಚ್ಚುವರಿ KSRTC ಬಸ್​ಗಳ ಕಾರ್ಯಾಚರಣೆಗೆ ಸೂಚನೆ
ಕೆಎಸ್​ಆರ್​ಟಿಸಿ
Follow us on

ಬೆಂಗಳೂರು: ಶಕ್ತಿ ಯೋಜನೆಯನ್ನು ವ್ಯವಸ್ಥಿತವಾಗಿ ನಡೆಸಲು ಜನಸಂದಣಿ ಹೆಚ್ಚಿರುವ 10 ಸ್ಥಳಗಳನ್ನು, ವಿಶೇಷ ಜಾತ್ರೆ ಅಥವಾ ಹಬ್ಬದ ದಿನಗಳನ್ನು ಗುರುತಿಸಿ, ಪ್ರಯಾಣಿಕರ ಸಂದಣಿ ಅನುಗುಣವಾಗಿ ಘಟಕಗಳಿಂದ ಹೆಚ್ಚುವರಿ ಕೆಎಸ್​ಆರ್​ಟಿಸಿ (KSRTC) ಬಸ್ಸುಗಳನ್ನು ತ್ವರಿತವಾಗಿ ನಿಯೋಜನೆ ಮಾಡುವಂತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸೂಚನೆ ನೀಡಿದ್ದಾರೆ. ಟಿಕೆಟ್ ವಿತರಣೆ, ಗುರುತಿಸಿರುವ ಸ್ಥಳಗಳಲ್ಲಿ‌ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ‌ ಅನುವಾಗುವ ನಿಟ್ಟಿನಲ್ಲಿ ಎಲ್ಲಾ‌ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಬಸ್ಸುಗಳ ನಿಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಗೊಂದಲಕ್ಕೆ ಅವಕಾಶ ಕೊಡಬಾರದು ಹಾಗೂ ನಿಗಮದ ಚಾಲನಾ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ ಪ್ರೋತ್ಸಾಹಿಸಬೇಕು. ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಅಥವಾ ಉಸ್ತುವಾರಿ ಅಧಿಕಾರಿಗಳು ಪ್ರತಿ ವಾರ ತಪ್ಪದೇ ವಿಭಾಗಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಬೇಕು. ಅದೇ ರೀತಿ ವಿದ್ಯಾರ್ಥಿಗಳಿಗೂ ತೊಂದರೆ‌ ಆಗದಂತೆ ಬಸ್ಸುಗಳ ಹೆಚ್ಚುವರಿ ಟ್ರಿಪ್​‌ಗಳನ್ನು ಕಾರ್ಯಾಚರಣೆ ಮಾಡುವಂತೆ ಅನ್ಬುಕುಮಾರ್ ಸೂಚಿಸಿದರು.

ಇದನ್ನೂ ಓದಿ: Mandya News: ಚಲಿಸುತ್ತಿದ್ದ KSRTC ಬಸ್​ನಿಂದ ಬಿದ್ದು ಪ್ರಯಾಣಿಕ ಸಾವು

ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆಯಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ನಿಗಮದ ಎಲ್ಲಾ 16 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ 83 ಘಟಕ ವ್ಯವಸ್ಥಾಪಕರುಗಳೊಂದಿಗೆ ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ವಿಡಿಯೋ ಸಂವಾದ ನಡೆಸಿದರು.

ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಮಹತ್ವದ ಶಕ್ತಿ ಯೋಜನೆಯನ್ನು ಇನ್ನಷ್ಟು ಸುಗಮವಾಗಿ ನಡೆಸುವ ಸಂಬಂಧ ಹಾಗೂ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಮಹತ್ವದ ಸೂಚನೆ ನೀಡಿದ ಅನ್ಬುಕುಮಾರ್, ಸಾರ್ವಜನಿಕರು ಕೂಡ ನಿಗಮದೊಂದಿಗೆ ಕೈಜೋಡಿಸಿ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಹಕರಿಸುವಂತೆ ಕೋರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ