ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನಿನ್ನೆ (ನ.11) ರಾಜ್ಯದಲ್ಲಿ ಅಬ್ಬರದ ಹವಾ ಸೃಷ್ಟಿಸಿ ತೆರಳಿದ್ದಾರೆ. ಆದ್ರೆ ಇತ್ತ ಕಾಂಗ್ರೆಸ್ ಮೋದಿ ಅವರ ಎದುರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಬಿಜೆಪಿ ಏಕೆ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಲಾಭಿಷೇಕ, ಪುಷ್ಪಾರ್ಚನೆ ಮಾಡುವ ಮೂಲಕ ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ. ಈ ಹೊತ್ತಲ್ಲೇ ಸರಣಿ ಟ್ವೀಟ್ ಮಾಡಿರೋ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರಗಳು ನಾಡಪ್ರಭು ಕೆಂಪೇಗೌಡರ ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ ಅಂತಾ ಪ್ರಶ್ನಿಸಿ, ಸಾಲು ಸಾಲು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷ ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿ. ಕೆಂಪೇಗೌಡರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ. ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ವೈಭವೋಪೇತ ಸಂಪ್ರದಾಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್. ಬೆಂಗಳೂರಿನ ಸಂಸ್ಥಾಪಕರಿಗೆ ಸಂಬಂಧಿಸಿದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಿದ್ದೇವೆ. ಹೀಗೆ ಟ್ವೀಟ್ ಮಾಡಿರೋ ಸಿದ್ದರಾಮಯ್ಯ, ಬಿಜೆಪಿ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನ ಏಕೆ ಬಿಜೆಪಿ ಅನುಸರಿಸುತ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ಕಾಂಗ್ರೆಸ್: ಸಿದ್ದು ಹೇಳಿಕೆಗೆ ಬೊಮ್ಮಾಯಿ ಗುದ್ದು
ಬಿಜೆಪಿಯಿಂದ ಬೆಂಗಳೂರಿಗೆ ಕುಖ್ಯಾತಿ
ಬಿಜೆಪಿ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಏಕೆ ಅನುಸರಿಸುತ್ತಿಲ್ಲ? ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಬಿಜೆಪಿಯಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಾಗಿದೆ.
ಇನ್ನೂ ಸಾಲು ಸಾಲು ಟ್ವೀಟ್‌ಗಳ ಬಾಂಬ್ ಸಿಡಿಸಿರೋ ಸಿದ್ದರಾಮಯ್ಯ, 2014ರವರೆಗೆ ದೇಶದ ಮೇಲೆ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ ಇತ್ತು. ಈಗ ದೇಶದ ಮೇಲಿನ ಒಟ್ಟು ಸಾಲ 155 ಲಕ್ಷ ಕೋಟಿ ರೂಪಾಯಿಯಾಗಿದೆ. ದೇಶ ದಿವಾಳಿಯತ್ತ ಸಾಗಲು ಕಾರಣ ಯಾರು? ಉತ್ತರ ಹೇಳಿ ಮೋದಿ ಅಂತಾ ಪ್ರಶ್ನೆ ಎತ್ತಿದ್ದಾರೆ. ಅಲ್ಲದೇ, 2018ರ ಮೊದಲು 2.42 ಲಕ್ಷ ಕೋಟಿ ರೂ. ಇದ್ದ ರಾಜ್ಯದ ಸಾಲ, ಈ ವರ್ಷದ ಕೊನೆ ಹೊತ್ತಿಗೆ 5.40 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದೇನಾ ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ಡಾಲರ್ ಕುಸಿತ, ಹಸಿವು ಸೂಚ್ಯಂಕ, ಜಾಗತಿಕ ಸೂಚ್ಯಂಕ್ಯಗಳ ಅಂಕಿ ಅಂಶಗಳನ್ನ ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಆದರೆ @BJP4Karnataka ಏಕೆ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ?
ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು.@BJPKarnataka ದಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಾಗಿದೆ. 4/4— Siddaramaiah (@siddaramaiah) November 11, 2022
ಜನರ ದುಡ್ಡಲ್ಲಿ ವೈಭವ ಮಾಡ್ತಿದ್ದಾರೆಂದು ಡಿಕೆಶಿ ಕಿಡಿ
ಇನ್ನೂ ಮೋದಿ ಬೆಂಗಳೂರು ಭೇಟಿ ಬಗ್ಗೆ ಟೀಕಿಸಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಗುಂಡಿ ಹೇಗೆ ಮುಚ್ಚಿದ್ದಾರೋ ಅದೇ ರೀತಿ ಭ್ರಷ್ಟ ಆಡಳಿತವನ್ನ ಮುಚ್ಚಿಹಾಕಿ ಹೋಗಲಿ ಅಂದ್ರು. ಅಲ್ಲದೇ, ಜನರ ದುಡ್ಡಲ್ಲಿ ವೈಭವ ಮಾಡ್ತಿದ್ದಾರೆ ಅಂತಾ ಕುಟುಕಿದ್ರು.
ಇನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಡಬಲ್ ಇಂಜಿನ್ ಸರ್ಕಾರ ಅಂತ ಪ್ರಸ್ತಾಪ ಮಾಡಿದ್ದರು. ಡಬಲ್ ಇಂಜಿನ್ ಸರ್ಕಾರಕ್ಕೂ ಕುಹಕವಾಡಿರುವ ಕಾಂಗ್ರೆಸ್, ಇದು ಟ್ರಬಲ್ ಇಂಜಿನ್ ಸರಕಾರ ಅಂತಾ ವ್ಯಂಗ್ಯವಾಡಿದೆ. ಟ್ರಬಲ್ ಇಂಜಿನ್ ಸರ್ಕಾರದ ಹಗರಣಗಳಿಗೆ ಮೋದಿ ಬಳಿ ಉತ್ತರವಿದೆಯಾ ಅಂತ ಸವಾಲು ಹಾಕಿದೆ.
ಈ ಮಧ್ಯೆ ಬಿಜೆಪಿ ವಿರುದ್ಧ ಜೆಡಿಎಸ್ ಸಹ ಕಿಡಿಕಾರಿದೆ. ಹೆಚ್.ಡಿ ದೇವೇಗೌಡರನ್ನ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಆಹ್ವಾನ ನೀಡದಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ ಅಂತಾ ಟ್ವೀಟ್ ಮಾಡಿದೆ.
Published On - 7:11 am, Sat, 12 November 22