ಬೆಂಗಳೂರು: ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಒಂದು ಪಕ್ಷದ ವಕ್ತಾರರಂತೆ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಸ್ಪೀಕರ್ ನಡೆ ಖಂಡಿಸಿದ ಅಖಿಲ ಭಾರತ ವೀರಶೈವ ಮಹಾಸಭಾ (Akhila Bharatha Veerashaiva Mahasabha), ಮಾಧ್ಯಮ ಪ್ರಕಟಣೆ ಹೊರಡಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರ ಸ್ಥಾನಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದೆ. ಒಂದು ಪಕ್ಷದ ವಕ್ತಾರರಂತೆ ವರ್ತಿಸಿರುವುದು ಅಕ್ಷಮ್ಯ ಅಪರಾಧ. ಸಭಾಧ್ಯಕ್ಷ ಸ್ಥಾನದ ಘನತೆ ಗೌರವಗಳಿಗೆ ಧಕ್ಕೆ ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಕ್ಷಣವೇ ಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸಬೇಕಾಗಿ ಎಂದು ಮಹಾಸಭೆಯು ಒತ್ತಾಯಿಸಿದೆ.
ಈಶ್ವರ ಬಿ. ಖಂಡ್ರೆಯವರನ್ನು ಉದ್ದೇಶಿಸಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಏನೋ ಕಾರಣ ಯಾವುದೋ ದುರುದ್ದೇಶವನ್ನಿಟ್ಟುಕೊಂಡು ಸಭಾಧ್ಯಕ್ಷರು ವರ್ತಿಸಿರುವುದನ್ನು ಯಾರೂ ಸಹ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಈ ರೀತಿ ಒಬ್ಬ ಜನನಾಯಕರಿಗೆ ಅವಮಾನ ಮಾಡಿರುವದನ್ನು ಪ್ರಜ್ಞಾವಂತ ಸಮಾಜವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮಹಾಸಭಾ ಹೇಳಿದೆ.
ಇದನ್ನೂ ಓದಿ: Budget Session: ನಿಮ್ಮಂಥವರು ಶಾಸಕರಾಗಿರೋದು ಸದನಕ್ಕೇ ಅಗೌರವ; ಈಶ್ವರ್ ಖಂಡ್ರೆ ವಿರುದ್ಧ ಕಾಗೇರಿ ಕೆಂಡಾಮಂಡಲ
ಸಭಾಧ್ಯಕ್ಷರ ಸ್ಥಾನದ ಗೌರವ ಉಳಿಯಬೇಕಾದರೆ, ಭಾರತ ಸಂವಿಧಾನ ಅದರ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುವ ರಾಜಕಾರಣಿಯಾಗಿದ್ದರೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೂಡಲೇ ಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸಬೇಕು. ಈ ಸ್ಥಾನಕ್ಕೆ ಆಂಟಿಕೊಂಡರೆ ಅವರೂ ಸಹ ಒಬ್ಬ ತತ್ವ ನಿಷ್ಠೆ, ಬದ್ಧತೆ ಇಲ್ಲದ ರಾಜಕಾರಣಿಯೆಂದು ಭಾವಿಸಬೇಕಾಗುತ್ತದೆ. ಇಂತಹ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ಹೋರಾಟವನ್ನು ಮಹಾಸಭೆಯಿಂದ ರಾಜ್ಯಾದ್ಯಂತ ರೂಪಿಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ ಎಚ್ಚರಿಸಿದ್ದಾರೆ.
ಸ್ಪೀಕರ್ ಕಾಗೇರಿ ವಿರುದ್ಧ ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ಪ್ರತಿಭಟನೆ ನಡೆದಿದ್ದು, ಭಾಲ್ಕಿ ಕ್ಷೇತ್ರದ ಮತದಾರರನ್ನು ಸ್ಪೀಕರ್ ಅವಮಾನಿಸಿದ್ದಾರೆಂದು ಆರೋಪಿಸಿ ಭಾಲ್ಕಿ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಯಿತು. ಯೋಗ್ಯತೆ ಇಲ್ಲದ ಸ್ಪೀಕರ್ಗೆ ಧಿಕ್ಕಾರ ಎಂದು ಪ್ರತಿಭಟನಾಕಾರರ ಘೋಷಣೆ ಕೂಗಿದರು.
ಸದನದಲ್ಲಿ ಈಶ್ವರ ಖಂಡ್ರೆ ವಿರುದ್ಧ ಸ್ಪೀಕರ್ ಹೇಳಿಕೆ ಖಂಡಿಸಿ ಕಲಬುರಗಿ ನಗರದಲ್ಲಿ ಬಸವೇಶ್ವರರ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆದಿದ್ದು, ಸ್ಪೀಕರ್ ಕಾಗೇರಿ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೂಡಲೇ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಗುರುವಾರ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಂಡಾಮಂಡಲರಾದ ಘಟನೆ ನಡೆಯಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವಥ್ ನಾರಾಯಣ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಪಕ್ಷದ ಸದಸ್ಯರು ಕಲಾಪದ ವೇಳೆ ಪ್ರತಿಭಟನೆ ನಡೆಸಿದರು. ಈ ವೇಳೆ ಖಂಡ್ರೆ ಅವರು ಏರು ಧ್ವನಿಯಲ್ಲಿ ಮಾತನಾಡಿದರು. ಸ್ಪೀಕರ್ ಕುಳಿತುಕೊಳ್ಳಲು ಸೂಚಿಸದರೂ ಮಾತು ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಕಾಗೇರಿ, ಖಂಡ್ರೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ನೀವು ಸದನದಲ್ಲಿ ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ. ಏನು ತಮಾಷೆ ಮಾಡುತ್ತೀರಿ ಸದನದಲ್ಲಿ. ನಿಮ್ಮನ್ನು ಯಾರು ಆಯ್ಕೆ ಮಾಡುವವರು? ಆ ಜನರಿಗೆ ನಾವು ಹೇಳುತ್ತೇವೆ, ನಿಮ್ಮಂತವರನ್ನು ಆಯ್ಕೆ ಮಾಡುವುದು ಈ ವ್ಯವಸ್ಥೆಗೆ ಅಗೌರವ ಅಂತ” ಎಂದು ಈಶ್ವರ್ ಖಂಡ್ರೆ ವಿರಿದ್ಧ ಕಾಗೇರಿ ಅವರು ಹೇಳಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Thu, 16 February 23