
ಬೆಂಗಳೂರು, ಅಕ್ಟೋಬರ್ 19: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಸಿಎಂ ಡಿ.ಕೆ ಶಿವಕುಮಾರ್ 3 ಪುಟಗಳ ಪತ್ರ ಬರೆದಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಹಂಗಾಮು ಆರಂಭವಾಗುವುದು ವಿಳಂಬವಾಗುತ್ತಿರುವುದರಿಂದ ಸಾವಿರಾರು ರೈತ ಕುಟುಂಬಗಳಲ್ಲಿ ಅನಿಶ್ಚಿತತೆ ಉಂಟಾಗಿದೆ. ಬೆಳೆ ಕಟಾವಿಗೆ ಸಿದ್ಧವಾಗಿದ್ದರೂ ಕಬ್ಬು ಇನ್ನೂ ಹೊಲಗಳಲ್ಲೇ ನಿಂತಿದೆ. ಪ್ರತಿ ದಿನದ ವಿಳಂಬದಿಂದ ಕಬ್ಬಿನ ತೂಕ ಮತ್ತು ಸಕ್ಕರೆ ಅಂಶ ಕಡಿಮೆಯಾಗುವ ಸಾಧ್ಯತೆಯಿದ್ದು, ಹಲವು ತಿಂಗಳುಗಳ ಕಾಲ ಶ್ರಮಪಟ್ಟು ಬೆಳೆದ ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯರಾತ್ರಿ ಮಹತ್ವದ ಸಭೆ ಯಶಸ್ವಿ
ಕಬ್ಬಿನ ತೂಕ ಮಾಪನದಲ್ಲಿ ಪಾರದರ್ಶಕತೆ ಹೆಚ್ಚಿಸಲು, ಸಕ್ಕರೆ ಚೇತರಿಕೆ ಪ್ರಮಾಣದ ಪರೀಕ್ಷೆಯನ್ನು ಬಲಪಡಿಸಲು ಮತ್ತು ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸಲು ನಮ್ಮ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಸಕ್ಕರೆ ವಲಯದ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದನ್ನೂ ತಾನು ಸ್ವಾಗತಿಸಿದ್ದೇನೆ. ಆದರೆ, ಕಬ್ಬು ಅರೆಯುವ ಹಂಗಾಮು ಈಗಾಗಲೇ ವಿಳಂಬವಾಗಿರುವುದರಿಂದ, ಸಮಿತಿಯು ತನ್ನ ಕಾರ್ಯ ಮುಂದುವರಿಸಿರುವ ನಡುವೆಯೇ ಈ ತುರ್ತು ಸಮಸ್ಯೆಗಳಿಗೆ ಸಕಾಲದಲ್ಲಿ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ. ಲಕ್ಷಾಂತರ ಕಬ್ಬು ಬೆಳೆಗಾರರ ಜೀವನೋಪಾಯ ಮತ್ತು ಅವರ ಕುಟುಂಬಗಳ ಕಲ್ಯಾಣ ಪಣಕ್ಕಿದೆ. ರೈತರ ಪರಿಶ್ರಮಕ್ಕೆ ಮನ್ನಣೆ ದೊರೆಯುವುದರ ಜೊತೆಗೆ, ಅವರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗುವುದನ್ನು ನಾವು ಖಚಿತಪಡಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.